ಶೃಂಗೇರಿ: ಜೆಸಿಬಿಎಂ ಕಾಲೇಜಿನಲ್ಲಿ ಆ.23ರಂದು ಅಮ್ಮ ಫೌಂಡೇಶನ್‌ನಿಂದ ಯುವಜನರಿಗೆ ಉದ್ಯೋಗ ಮೇಳ ಆಯೋಜಿಸಲಾಗಿದೆ ಎಂದು ಮೈಸೂರಿನ ಉದ್ಯೋಗದಾತ ಫೌಂಡೇಶನ್ ಅಧ್ಯಕ್ಷ ರುಕ್ಮಾಂಗದ ಹೇಳಿದರು.
ತಾಲೂಕು ಜೆಡಿಎಸ್ ಕಚೇರಿಯಲ್ಲಿ ಮಂಗಳವಾರ ಉದ್ಯೋಗ ಮೇಳದ ಕರಪತ್ರ ಬಿಡುಗಡೆಗೊಳಿಸಿ ಅವರು ಮಾತನಾಡಿ, ಕಳೆದ ಬಾರಿ ಕೊಪ್ಪದಲ್ಲಿ ಬೃಹತ್ ಉದ್ಯೋಗ ಮೇಳ ಆಯೋಜಿಸಿ 300ಕ್ಕೂ ಹೆಚ್ಚು ನಿರುದ್ಯೋಗಿ ಯುವಜನರಿಗೆ ಉದ್ಯೋಗ ದೊರಕಿಸಿಕೊಡುವ ಪ್ರಯತ್ನ ಮಾಡಲಾಗಿತ್ತು. ಈ ಬಾರಿ ಉದ್ಯೋಗ ಮೇಳ ಶೃಂಗೇರಿಯಲ್ಲಿ ಆಯೋಜಿಸಲಾಗಿದ್ದು 50ಕ್ಕೂ ಹೆಚ್ಚು ಪ್ರತಿಷ್ಠಿತ ಕಂಪನಿಗಳು ಭಾಗವಹಿಸಲಿವೆ ಎಂದರು. ಜೆಡಿಎಸ್ ತಾಲೂಕು ಘಟಕದ ಅಧ್ಯಕ್ಷ ಗಿಣಿಕಲ್ ಭರತ್ ಮಾತನಾಡಿ, ಉದ್ಯೋಗ ಮೇಳ ಕಾರ್ಯಕ್ರಮವನ್ನು ಸಂಸದ ಕೋಟ ಶ್ರೀನಿವಾಸ್ ಪೂಜಾರಿ ಉದ್ಘಾಟಿಸಲಿದ್ದು, ಅಮ್ಮ ಫೌಂಡೇಶನ್ ಅಧ್ಯಕ್ಷ ಸುಧಾಕರ್ ಶೆಟ್ಟಿ, ಜೆಡಿಎಸ್ ಮುಖಂಡ ಎಚ್.ಜಿ.ವೆಂಕಟೇಶ್, ಕರ್ನಾಟಕ ಸಣ್ಣ ಕೈಗಾರಿಕಾ ಸಂಘದ ಮಾಜಿ ಅಧ್ಯಕ್ಷ ಎಂ.ಎಲ್.ನರಸಿಂಹಮೂರ್ತಿ ಮತ್ತಿತರ ಗಣ್ಯರು ಭಾಗವಹಿಸಲಿದ್ದಾರೆ ಎಂದರು. ಜೆಡಿಎಸ್ ಮುಖಂಡರಾದ ಜಿ.ಜಿ.ಮಂಜುನಾಥ್, ದೇವೇಂದ್ರ ಹೆಗ್ಡೆ, ದಿನೇಶ್ ಹೆಗ್ಡೆ ಕಲ್ಕಟ್ಟೆ, ವೆಂಕಪ್ಪ ಆಚಾರ್, ಮಲ್ಲೇಶ್ ಹೆಗ್ಡೆ, ಮಾಗಲು ಅಚ್ಯುತ್, ಶ್ರೀಧರ್, ಶ್ರೀನಿವಾಸ್ ಕೊಡಿಗೆಮಕ್ಕಿ ಇದ್ದರು.