ನ್ಯೂಸ್

ಯುಎಇ ರಾಯಭಾರಿ ಕಚೇರಿ ವಿಳಾಸದಲ್ಲಿ ಕೇರಳಕ್ಕೆ 230 ಕೆಜಿ ಬಂಗಾರ ಕಳ್ಳಸಾಗಣೆ ಶಂಕೆ

ತಿರುವನಂತಪುರ: ಕೇರಳದ ಚಿನ್ನ ಕಳ್ಳಸಾಗಣೆ ಪ್ರಕರಣ ಮತ್ತೊಂದು ದಿಕ್ಕಿಗೆ ಹೊರಳಿದೆ. ತಿರುವನಂತರಪುರದಲ್ಲಿರುವ ಅರಬ್ ಸಂಯುಕ್ತ ಸಂಸ್ಥಾನ (ಯುಎಇ) ಕಾನ್ಸುಲ್ ಕಚೇರಿ ಮಾರ್ಗದಲ್ಲೇ 230 ಕೆಜಿ ಚಿನ್ನ ಕಳ್ಳಸಾಗಣೆ ಆಗಿತ್ತೆಂಬ ಮಾಹಿತಿ ಬೆಳಕಿಗೆ ಬಂದಿದ್ದು, ಒಟ್ಟಾರೆ ಅಕ್ರಮದ ಮೊತ್ತ ಹಾಗೂ ಅದರ ಹಿಂದಿರುವ ಜಾಲದ ವಿಸ್ತಾರ ವ್ಯಾಪಿಸುವ ಸಾಧ್ಯತೆ ಇದೆ ಎಂದು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್​ಐಎ) ಅಧಿಕಾರಿಗಳು ಶಂಕಿಸಿದ್ದಾರೆ.

30 ಕೆಜಿ ಚಿನ್ನ ಕಳ್ಳ ಸಾಗಣೆ ಹಗರಣದ ಇಬ್ಬರು ಆರೋಪಿಗಳು ಕಳ್ಳಸಾಗಣೆ ಮಾರ್ಗದ ಸುಳಿವು ನೀಡಿದ್ದಾರೆ. ಈ ಸಂಬಂಧ ಶನಿವಾರ ನಗರದ ವಿವಿಧೆಡೆ ಶೋಧ ನಡೆಸಿ ಮಹತ್ವದ ಸಾಕ್ಷ್ಯಗಳನ್ನು ಸಂಗ್ರಹಿಸಲಾಗಿದೆ. ಸ್ವಪ್ನಾ ಸುರೇಶ್ ಹಾಗೂ ಸರಿತ್ ಅನ್ನು ಅವರ ಮನೆಗಳಿಗೆ ಕರೆದೊಯ್ದು ತನಿಖೆ ನಡೆಸಿರುವ ಮಾಹಿತಿಯನ್ನು ತನಿಖಾಧಿಕಾರಿಗಳು ನೀಡಿದ್ದಾಗಿ ಖಾಸಗಿ ಸುದ್ದಿವಾಹಿನಿ ವರದಿ ಮಾಡಿದೆ.

ಕಾನ್ಸುಲ್ ಕಚೇರಿ ಮೂಲಕ 12ರಿಂದ 13 ಬಾರಿ ಚಿನ್ನ ಸಾಗಣೆಗೆ ಬಳಕೆಯಾಗಿರುವ ಅನುಮಾನವಿದೆ. ಸ್ವಪ್ನಾ ಸುರೇಶ್ ಹಾಗೂ ಸರಿತ್ ಈ ಮಾರ್ಗದ ಹಿಂದಿನ ಕಾರಣಕರ್ತರಾಗಿದ್ದು, ಇತರ ಆರೋಪಿಗಳಾದ ಸಂದೀಪ್ ನಾಯರ್, ರಮೀಜ್ ಕೂಡ ಜಾಲದಲ್ಲಿದ್ದುಕೊಂಡು ಹಣಕಾಸು ನೆರವು ನೀಡುವವರು ಹಾಗೂ ವಿತರಕರ ಜತೆ ನಂಟು ಹೊಂದಿರಬಹುದೆಂದು ಅಂದಾಜಿಸಲಾಗಿದೆ. ಈ ಪ್ರಕರಣಕ್ಕೆ ಮಹತ್ವ ಸಾಕ್ಷಿಯಾದ ಕಾನ್ಸುಲ್ ಕಚೇರಿಯ ಅಧಿಕಾರಿಯೊಬ್ಬರು ದುಬೈಗೆ ಪರಾರಿಯಾಗಿದ್ದಾರೆ.

ಕಾನ್ಸಲ್ ಜನರಲ್ ಸಮ್ಮುಖದಲ್ಲಿ ಚಿನ್ನ ಪತ್ತೆಯಾದ ಬ್ಯಾಗ್ ತೆರೆಯುವುದಕ್ಕೆ ವಿದೇಶಾಂಗ ಸಚಿವಾಲಯದಿಂದ ಪ್ರಾಥಮಿಕ ಅನುಮತಿ ಪಡೆಯಲಾಗಿದೆ. ಈ ಪ್ರಕ್ರಿಯೆ ನಡೆದ ಬಳಿಕ ಅಸಲಿ ಆರೋಪಿಗಳ ಕೈವಾಡ, ಸಂಪರ್ಕದ ಸ್ಪಷ್ಟ ಮಾಹಿತಿ ಲಭಿಸುವ ಸಾಧ್ಯತೆ ಇದೆ ಎನ್ನಲಾಗಿದೆ.