ರಾಮನಗರ : ಆಧಾರ್‌ನೊಂದಿಗೆ ಮೊಬೈಲ್ ಸಂಖ್ಯೆಯನ್ನು ಸೇರಿಸಬೇಕು ಎನ್ನುವ ಹಳ್ಳಿಗರ ಬಹುದಿನಗಳ ಬೇಡಿಕೆಗೆ ಕೊನೆಗೂ ಸ್ಪಂದನೆ ದೊರೆತಿದೆ. ರಾಮನಗರ ಜಿಲ್ಲೆ ಸೇರಿದಂತೆ ರಾಜ್ಯದ 630 ಗ್ರಾಮ ಪಂಚಾಯಿತಿಗಳಲ್ಲಿ ಆಧಾರ್ ನೋಂದಣಿ ಮತ್ತು ತಿದ್ದುಪಡಿ ಕೇಂದ್ರ ಸ್ಥಾಪಿಸಲು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಮುಂದಾಗಿದೆ.
ಏನಿದು ಯೋಜನೆ?: ರಾಜ್ಯದಲ್ಲಿ ಸಾರ್ವಜನಿಕರು ಕೋವಿಡ್ ಲಸಿಕೆಯನ್ನು ಆಧಾರ್ ಸಂಖ್ಯೆಯ ದೃಢೀಕರಣದೊಂದಿಗೆ ಪಡೆಯುವುದು ಕಡ್ಡಾಯ. ಆದರೆ ಗ್ರಾಮೀಣ ಪ್ರದೇಶದ ವಾಸಿಗಳು ಮೊಬೈಲ್ ಸಂಖ್ಯೆಯನ್ನು ಆಧಾರ್ ಸಂಖ್ಯೆಗೆ ಸೇರ್ಪಡೆಗೊಳಿಸದೆ ಇರುವ ಕಾರಣ ಮತ್ತೊಬ್ಬರ ಮೊಬೈಲ್ ಸಂಖ್ಯೆ ಹಾಗೂ ತಮ್ಮ ಆಧಾರ್ ನಂಬರ್ ಬಳಸಿ ಲಸಿಕೆ ಪಡೆದುಕೊಳ್ಳಬೇಕಿತ್ತು. ಇದು ಸಾಕಷ್ಟು ಗೊಂದಲಕ್ಕೂ ಕಾರಣವಾಗಿತ್ತು. ಕಾರಣ ಆಧಾರ್ ಸಂಖ್ಯೆಯ ತಿದ್ದುಪಡಿ ಹಾಗೂ ಮಕ್ಕಳ ಹೆಸರು ನೋಂದಣಿ ಮಾಡಿಸಲು ನಗರಕ್ಕೆ ಬರಬೇಕಾದ ಅನಿವಾರ್ಯತೆ ಇತ್ತು. ಈ ಹಿನ್ನೆಲೆಯಲ್ಲಿ ಮೊಬೈಲ್ ಸಂಖ್ಯೆ ಸೇರ್ಪಡೆ ಸೇರಿದಂತೆ ಇತರ ತಿದ್ದುಪಡಿಗಳಿಗೆ ಗ್ರಾಮೀಣ ಭಾಗದಲ್ಲಿ ಸಾಕಷ್ಟು ಬೇಡಿಕೆ ಇತ್ತು. ಈ ಹಿನ್ನೆಲೆಯಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಹಳ್ಳಿಯಲ್ಲಿಯೇ ತಿದ್ದುಪಡಿ ಹಾಗೂ ನೋಂದಣಿ ಮಾಡಲು ಗ್ರಾಪಂನಲ್ಲಿ ವ್ಯವಸ್ಥೆ ಮಾಡುವಂತೆ ಸೂಚನೆ ನೀಡಿತ್ತು. ಅದರಂತೆ ಇದೀಗ ಗ್ರಾಪಂನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಕಂಪ್ಯೂಟರ್ ಆಪರೇಟರ್‌ಗಳಿಗೆ ತರಬೇತಿ ನೀಡಿ ಪ್ರಕ್ರಿಯೆ ನಡೆಸಲಾಗುತ್ತಿದೆ.ರಾಮನಗರ ಜಿಲ್ಲೆಯ ಚನ್ನಪಟ್ಟಣ ಮತ್ತು ಕನಕಪುರ ತಾಲೂಕಿನ ಒಟ್ಟು 22 ಗ್ರಾಮ ಪಂಚಾಯಿತಿಗಳಲ್ಲಿ ಈ ಪ್ರಕ್ರಿಯೆ ಪ್ರಾರಂಭವಾಗಲಿದೆ.
ಯಾವ್ಯಾವ ಸೌಲಭ್ಯ?: ಆಯ್ಕೆ ಮಾಡಿಕೊಂಡಿರುವ ಗಾಮ ್ರಪಂಚಾಯಿತಿಗಳಲ್ಲಿ 0-5 ವರ್ಷದೊಳಗಿನ ಮಕ್ಕಳ ಹೆಸರು ನೋಂದಣಿ, ಎಲ್ಲ ವರ್ಗದವರ ಮೊಬೈಲ್ ಸಂಖ್ಯೆ ಹಾಗೂ ವಿಳಾಸ ಬದಲಾವಣೆ ಮಾಡಲಾಗುತ್ತದೆ. ಪ್ರಮುಖವಾಗಿ ಮಕ್ಕಳ ಹೆಸರು ನೋಂದಣಿಗೆ ಯಾವುದೇ ಶುಲ್ಕವಿರುವುದಿಲ್ಲ. ಉಳಿದೆರೆಡು ಸೌಲಭ್ಯಕ್ಕೆ ತಲಾ 50 ರೂ. ನಿಗದಿಪಡಿಸಲಾಗಿದೆ.
ಇನ್ನು ಪಾರದರ್ಶಕತೆ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಮಕ್ಕಳ ಹೆಸರು ನೋಂದಣಿ ಉಚಿತವೆಂದು ಹಾಗೂ ಉಳಿದ ಸೌಲಭ್ಯಕ್ಕೆ 50 ರೂ. ಶುಲ್ಕವೆಂದು ಜನರ ಮೊಬೈಲ್‌ಗೆ ಸಂದೇಶ ಬರಲಿದೆ. ಈ ಹಿನ್ನೆಲೆಯಲ್ಲಿ ಜನರು ಹೆಚ್ಚುವರಿ ಹಣ ಪಾವತಿ ಮಾಡುವಂತಿಲ್ಲ. ಹಣಕ್ಕೆ ಒತ್ತಾಯಿಸಿದರೆ ಸಂಬಂಧಪಟ್ಟ ಗ್ರಾಪಂ ಪಿಡಿಒಗೆ ದೂರು ನೀಡಬಹುದು.
12611 ಫೋಸ್ಟ್‌ಮ್ಯಾನ್‌ಗೂ ತರಬೇತಿ: ಗ್ರಾಪಂನಲ್ಲಿ ಸೌಲಭ್ಯ ಸಿಕ್ಕುತ್ತಿರುವುದು ಒಂದೆಡೆಯಾದರೆ, ರಾಜ್ಯದ ಎಲ್ಲ ಅಂಚೆ ಕಚೇರಿಗಳಲ್ಲಿಯೂ ಜನರಿಗೆ ಈ ಸೌಲಭ್ಯ ಕಲ್ಪಿಸಲು ವ್ಯವಸ್ಥೆ ಮಾಡಲಾಗಿದೆ. ರಾಜ್ಯದಲ್ಲಿ 12,611 ಫೋಸ್ಟ್‌ಮ್ಯಾನ್ ಮತ್ತು ಫೋಸ್ಟ್‌ವುಮೆನ್ ಕೂಡ ಆಧಾರ್ ಕಾರ್ಡ್ ತಿದ್ದುಪಡಿ ಹಾಗೂ ಮಕ್ಕಳ ಹೆಸರು ನೋಂದಣಿ ಮಾಡಲಿದ್ದಾರೆ. ಇವರಿಗೂ ತರಬೇತಿ ನೀಡಲಾಗಿದ್ದು, ಸ್ಮಾರ್ಟ್‌ಫೋನ್‌ನಲ್ಲಿ ಆ್ಯಪ್ ಕೊಡಲಾಗಿದೆ. ಅದರ ಮೂಲಕವೇ ಪ್ರಕ್ರಿಯೆ ಮಾಡಲು ಅವಕಾಶವಿದೆ.
ಟ್ಯಾಬ್‌ಗಳ ಪೂರೈಕೆ: ಆಧಾರ್ ನೋಂದಣಿ ಮತ್ತು ತಿದ್ದುಪಡಿ ಮಾಡಲು ಇ-ಆಡಳಿತ ಇಲಾಖೆ 2 ಸಾವಿರ ಟ್ಯಾಬ್ಲೆಟ್‌ಗಳನ್ನು ಪೂರೈಕೆ ಮಾಡುತ್ತಿದೆ. ಆರಂಭಿಕ ಹಂತದಲ್ಲಿ 630 ಟ್ಯಾಬ್ಲೆಟ್‌ಗಳನ್ನು ಈಗಾಗಲೇ ವಿತರಣೆ ಮಾಡಲಾಗಿದ್ದು, ಈ ಟ್ಯಾಬ್ಲೆಟ್‌ಗಳಿಗೆ ಚೈಲ್ಡ್ ಎನ್ರೋಲ್ಮೆಂಟ್ ಕ್ಲೈನ್ಟನ ಸುಧಾರಿತ ತಂತ್ರಾಂಶವನ್ನು ಸೇರ್ಪಡೆಗೊಳಿಸಲಾಗಿದೆ. ಇವುಗಳನ್ನು ರಾಜ್ಯದ 28 ಜಿಲ್ಲೆಗಳ ತಲಾ 22 ಗ್ರಾಪಂಗಳಿಗೆ ನೀಡಲಾಗುತ್ತಿದೆ.
ಒಂದೇ ಗಂಟೆಯಲ್ಲಿ ಅಪ್‌ಡೇಟ್ : ಸಾಮಾನ್ಯವಾಗಿ ಆಧಾರ್‌ಕಾರ್ಡ್ ತಿದ್ದುಪಡಿ ವೇಳೆ ಅಪ್‌ಡೇಟ್ ಆಗುವುದಿಲ್ಲ ಎನ್ನುವುದೇ ದೊಡ್ಡ ಸಮಸ್ಯೆಯಾಗಿದೆ. ಜತೆಗೆ ಅಪ್‌ಡೇಟ್ ಮಾಡಿಸಿಕೊಂಡ ಕಾರ್ಡ್ ಕೂಡ ಬೇಗ ಸಿಗುವುದಿಲ್ಲ ಎನ್ನುವ ಆಕ್ರೋಶವೂ ಇದೆ. ಆದರೆ ಗ್ರಾಪಂನಲ್ಲಿ ನಡೆಯುವ ಪ್ರಕ್ರಿಯೆಯಲ್ಲಿ ಮಾಹಿತಿ ತಿದ್ದುಪಡಿ ಮಾಡಿದ ಸುಮಾರು ಒಂದು ಗಂಟೆ ಅವಧಿಯಲ್ಲಿಯೇ ಕಾರ್ಡ್‌ನಲ್ಲಿ ಮಾಹಿತಿ ಅಪ್‌ಡೇಟ್ ಆಗಿರುತ್ತದೆ. ಮೊಬೈಲ್ ಸಂಖ್ಯೆ ಹಾಗೂ ಇ-ಮೇಲ್ ವಿಳಾಸವನ್ನು ಅಪ್‌ಡೇಟ್ ಮಾಡಬಹುದಾಗಿದ್ದು. ಅದನ್ನು ಬೇರೆಡೆ ಪ್ರಿಂಟ್ ತೆಗೆದುಕೊಳ್ಳಬಹುದು.
ಜಿಲ್ಲೆಯಲ್ಲಿ ಎಲ್ಲೆಲ್ಲಿ? : ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲೂಕಿನ 16 ಹಾಗೂ ಕನಕಪುರ ತಾಲೂಕಿನ 6 ಗ್ರಾಪಂಗಳಲ್ಲಿ ಆಧಾರ್ ನೋಂದಣಿ ಮತ್ತು ತಿದ್ದುಪಡಿ ಕೇಂದ್ರ ಆರಂಭವಾಗಲಿದೆ. ಚನ್ನಪಟ್ಟಣ ತಾಲೂಕಿನ ಬಿ.ವಿ.ಹಳ್ಳಿ, ಬೇವೂರು, ಭೂಹಳ್ಳಿ, ದಶವಾರ, ಎಚ್.ಬ್ಯಾಡರಹಳ್ಳಿ, ಹಾರೋಕೊಪ್ಪ, ಹೊಂಗನೂರು, ಇಗ್ಗಲೂರು, ಕೋಡಂಬಳ್ಳಿ, ಮಳೂರುಪಟ್ಟಣ, ಮತ್ತೀಕೆರೆ, ಮುದಗೆರೆ, ನಾಗವಾರ ನೀಲಸಂದ್ರ, ಸಿಂಗರಾಜಿಪುರ, ಸುಳ್ಳೇರಿ. ಕನಕಪುರ ತಾಲೂಕಿನ ಅಚ್ಚಲು, ಬನ್ನಿಮುಕ್ಕೋಡ್ಲು, ಚಾಕನಹಳ್ಳಿ, ಚೀಲೂರು, ಚಿಕ್ಕಮುದವಾಡಿ, ಹಳ್ಳಿಮಾರನಹಳ್ಳಿ ಗ್ರಾಪಂಗಳಲ್ಲಿ ಕೇಂದ್ರ ಆರಂಭವಾಗಲಿವೆ.