ಮುಂಬೈ: ದೇಶಾದ್ಯಂತ ಕರೊನಾ ಸೋಂಕಿತರ ಸಂಖ್ಯೆಯಲ್ಲಿ ಭಾರೀ ಏರಿಕೆ ಕಂಡುಬರುತ್ತಿದೆ. ಪ್ರತಿನಿತ್ಯ ಸಾವಿರಾರು ಸೋಂಕಿತರು ಸಾವನ್ನಪ್ಪುತ್ತಿದ್ದ, ಆ ಶವಗಳ ಅಂತ್ಯಸಂಸ್ಕಾರವೇ ದೊಡ್ಡ ಸವಾಲಾಗಿದೆ. ಅದೇ ಹಿನ್ನೆಲೆಯಲ್ಲಿ ಒಂದೇ ಆ್ಯಂಬುಲೆನ್ಸ್ ಒಳಗೆ 22 ಕರೊನಾ ಸೋಂಕಿತರ ಶವಗಳನ್ನು ಹೊತ್ತೊಯ್ದಿರುವ ಘಟನೆ ಮಹಾರಾಷ್ಟ್ರದ ಬೀಡ್ ಜಿಲ್ಲೆಯಲ್ಲಿ ನಡೆದಿದೆ.
ಬೀಡ್ ಜಿಲ್ಲೆಯಲ್ಲಿ ಒಂದೇ ಆ್ಯಂಬುಲೆನ್ಸ್ನಲ್ಲಿ 22 ಸೋಂಕಿತರ ಶವಗಳನ್ನು ತುಂಬಿಸಿ, ಅದನ್ನು ಸ್ಮಶಾನಕ್ಕೆ ಒಯ್ದು ಅಂತ್ಯಸಂಸ್ಕಾರ ಮಾಡಲಾಗಿದೆ. ಈ ಘಟನೆ ವೇಳೆ ಪೊಲೀಸರು ಸ್ಥಳದಲ್ಲಿದ್ದರು. ದೃಶ್ಯವನ್ನು ಕೆಲ ಸೋಂಕಿತರ ಸಂಬಂಧಿಗಳು ವಿಡಿಯೋ ಮಾಡಿಕೊಳ್ಳಲು ಪ್ರಯತ್ನಿಸಿದಾಗ ಅವರ ಮೊಬೈಲ್ಗಳನ್ನು ಪೊಲೀಸರು ಕಸಿದಿಟ್ಟುಕೊಂಡಿದ್ದಾರೆ. ಅಂತ್ಯಕ್ರಿಯೆಯಾದ ನಂತರ ಮೊಬೈಲ್ ವಾಪಾಸು ಮಾಡಿದ್ದಾರೆ ಎಂದು ಘಟನೆಯನ್ನು ಕಣ್ಣಾರೆ ಕಂಡ ಕೆಲವರು ಹೇಳಿದ್ದಾರೆ.
ಆ್ಯಂಬುಲೆನ್ಸ್ನಲ್ಲಿದ್ದ ಶವಗಳಲ್ಲಿ 14 ಶವಗಳು ಶನಿವಾರ ಸತ್ತವರದ್ದಾಗಿದ್ದರೆ ಇನ್ನುಳಿದ ಶವಗಳು ಭಾನುವಾರ ಸತ್ತವರದ್ದು ಎನ್ನಲಾಗಿದೆ. ಈ ವಿಚಾರ ಸುದ್ದಿಯಾಗುತ್ತಿದ್ದಂತೆಯೇ ಎಚ್ಚೆದ್ದ ಜಿಲ್ಲಾಡಳಿತ ಪ್ರಕರಣದ ಬಗ್ಗೆ ತನಿಖೆಗೆ ಮುಂದಾಗಿದೆ. (ಏಜೆನ್ಸೀಸ್)