ನ್ಯೂಸ್

21ರಂದು ಸಬ್ಬಮ್ಮ ಸುಗ್ಗಿ ಉತ್ಸವ

ಸೋಮವಾರಪೇಟೆ: ತಾಲೂಕಿನ ನಗರಳ್ಳಿ ಗ್ರಾಮದ ಶ್ರೀ ಸಬ್ಬಮ್ಮ ಸುಗ್ಗಿ ಉತ್ಸವವನ್ನು ಏ.21ರಂದು ಅದ್ದೂರಿಯಾಗಿ ಆಚರಿಸಲು ಸಿದ್ಧತೆ ನಡೆಯುತ್ತಿದೆ ಎಂದು ಸಬ್ಬಮ್ಮ ದೇವರ ಸಮಿತಿ ಅಧ್ಯಕ್ಷ ಕೆ.ಬಿ. ಜಗದೀಶ್ ತಿಳಿಸಿದರು.

ಸಾಕಷ್ಟು ಕಟ್ಟು ಪಾಡುಗಳೊಂದಿಗೆ ಸುಗ್ಗಿ ಆಚರಣಾ ಕಾರ್ಯಕ್ರಮ ಪ್ರಾರಂಭವಾಗಿದೆ. ಗಡಿ ಗ್ರಾಮ ಸಕಲೇಶಪುರದ ಓಡಳ್ಳಿ ಸೇರಿದಂತೆ, ಸುತ್ತಲಿನ 18 ಗ್ರಾಮಗಳು ಒಟ್ಟಾಗಿ ಸೇರಿ ಏ.21ರಂದು ನಗರಳ್ಳಿ ಸುಗ್ಗಿ ಬನದಲ್ಲಿ ಹಗಲು ಸುಗ್ಗಿ ನಡೆಸಲಾಗುವುದು. ಏ.17 ರಂದು ನೀತಿ ಬೆಟ್ಟಕ್ಕೆ ತೆರಳಿ ದೇವರನ್ನು ಅರ್ಚಕರು ಹಾಗೂ ಪಟ್ಟದವರನ್ನು ಕರೆತರುವ ಪದ್ಧತಿ ಮುಗಿದಿದೆ. ಏ.18ರಂದು ಸುಗ್ಗಿ ರಂಗದಲ್ಲಿ ಮಲ್ಲು ಬೆಳಗುವುದು, ಅಯಾಯ ಗ್ರಾಮಗಳಲ್ಲಿ ಸೊಡ್ಲುಪೂಜೆ, ಸುಗ್ಗಿ ಆಡುವುದು, 20ರಂದು ದೊಡ್ಡ ಮೀಸಲು, 21ರಂದು ಹಗಲು ಸುಗ್ಗಿ, 22ರಂದು ಊಲು ಇಳಿಸುವುದು, 26ರಂದು ಹೊಸಳಹಬ್ಬದ ಸಾರು, 27ರಂದು ಹೊಸಳ ಹಬ್ಬದ ಮಡೆ ನಾಡತಿ ಬನದಲ್ಲಿ ನಡೆಯುವುದು ಎಂದು ಹೇಳಿದರು.

ಈ ಭಾಗದ ಹೆಚ್ಚಿನ ಮನೆಗಳ ಮನೆ ದೇವರಾಗಿರುವ ಸಬ್ಬಮ್ಮ ಸುಗ್ಗಿ ಉತ್ಸವವನ್ನು ನೂರಾರು ವರ್ಷಗಳಿಂದ ಶ್ರದ್ಧಾಭಕ್ತಿಯಿಂದ ಆಚರಿಸಿಕೊಂಡು ಬರಲಾಗುತ್ತಿದೆ. 27ರಂದು ಅನ್ನಸಂತರ್ಪಣೆ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.

ಸಮಿತಿಯ ಉಪಾಧ್ಯಕ್ಷ ಸಿ.ಎನ್. ಬೋಪಯ್ಯ, ಪ್ರಧಾನ ಕಾರ್ಯದರ್ಶಿ ಕೆ.ಯು. ಜಗದೀಶ್, ಸಂಚಾಲಕ ಜಿ.ಆರ್. ಸುರೇಶ್ ಹಾಗೂ ನಿರ್ದೇಶಕ ಬಿ.ಪಿ. ಪ್ರದೀಪ್‌ಕುಮಾರ್ ಉಪಸ್ಥಿತರಿದ್ದರು.