ಎಐ ಚಿತ್ರ 
ನ್ಯೂಸ್

ಕಳಪೆ ಬಿತ್ತನೆ ಬೀಜ ಮಾರಾಟಕ್ಕೆ 2.15 ಲಕ್ಷ ದಂಡ| ಗ್ರಾಹಕರ ಆಯೋಗದ ಆದೇಶ

ಪ್ರಮುಖ ಮುಖ್ಯಾಂಶಗಳು

  • ದೋಷಪೂರಿತ ತಳಿಯಿಂದ ರೈತನಿಗಾದ ನಷ್ಟಕ್ಕೆ ಪರಿಹಾರ
ಶ್ರವಣ್​ ನೀರಬಿದಿರೆ ಬೆಂಗಳೂರು
ಕಳಪೆ ಗುಣಮಟ್ಟದ ಬೀಜಗಳನ್ನು ಮಾರಾಟ ಮಾಡಿ ರೈತನ ನಷ್ಟಕ್ಕೆ ಕಾರಣವಾದ ಟ್ರೇಡರ್​ ಮತ್ತು ಬೀಜ ತಳಿವರ್ಧನೆ ಮಾಡಿದ್ದ ಖಾಸಗಿ ಸೀಡ್ಸ್​ ಕಂಪನಿಗೆ ಬೆಂಗಳೂರಿನ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು 2.15 ಲಕ್ಷ ರೂಪಾಯಿ ದಂಡ ವಿಧಿಸಿ ಆದೇಶಿಸಿದೆ.
ಬೆಂಗಳೂರು ದಕ್ಷಿಣ ತಾಲೂಕಿನ ದೊಡ್ಡಮಾರನಹಳ್ಳಿಯ ರೈತ ನಾಗೇಶ್​ ಎಂಬವರು 2023ರ ನವೆಂಬರ್​ನಲ್ಲಿ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ ಗ್ರಾಹಕರ ಆಯೋಗವು ಈ ತೀರ್ಪು ನೀಡಿದೆ. ದಂಡದ ಮೊತ್ತವನ್ನು 45 ದಿನಗಳ ಒಳಗೆ ಪಾವತಿಸುವಂತೆ ನಿರ್ದೇಶನ ನೀಡಲಾಗಿದೆ.
ವೃತ್ತಿಯಿಂದ ಉಪನ್ಯಾಸಕರಾಗಿದ್ದ ನಾಗೇಶ್​, ಕೃಷಿಯ ಮೇಲಿನ ಆಸಕ್ತಿಯಿಂದ ಕೆಲಸ ಬಿಟ್ಟು ಪೂರ್ಣಾವಧಿ ರೈತರಾಗಿದ್ದರು. 2023ರ ಜುಲೈನಲ್ಲಿ ತಾವರೆಕೆರೆಯ ಅಧಿಕೃತ ಸೀಡ್ಸ್​ ಟ್ರೇಡರ್​ ಸಂಸ್ಥೆಯೊಂದರಿಂದ ಖಾಸಗಿ ಕಂಪನಿ ಅಭಿವೃದ್ಧಿಪಡಿಸಿದ್ದ ಹೈಬ್ರಿಡ್​ ಸೌತೆಕಾಯಿ ಬೀಜಗಳ 5 ಪ್ಯಾಕೆಟ್​ಗಳನ್ನು 1,750 ರೂ. ಕೊಟ್ಟು ಖರೀದಿಸಿ, ತಮ್ಮ ಒಂದು ಎಕರೆ ಜಮೀನಿನಲ್ಲಿ ಬಿತ್ತನೆ ಮಾಡಿದ್ದರು.
ಸುಮಾರು 33ರಿಂದ 38 ಟನ್​ ಆದಾಯ ಬಂದರೆ ಕನಿಷ್ಠ 3 ಲಕ್ಷ ರೂ. ಲಾಭ ಪಡೆಯಬಹುದು ಎಂದು ಅಂದಾಜಿಸಿದ್ದ ನಾಗೇಶ್​, ಗೊಬ್ಬರ, ಕೀಟನಾಶಕ, ಕಾರ್ಮಿಕರ ಕೂಲಿ ಮತ್ತು ಇತರ ಕೆಲಸಗಳಿಗಾಗಿ ಸುಮಾರು 1 ಲಕ್ಷಕ್ಕೂ ಅಧಿಕ ರ್ಖಚನ್ನು ಮಾಡಿದ್ದರು. ಆದರೆ, ಬೆಳೆ ಬಂದಾಗ ಸೌತೆಕಾಯಿಗಳು ಸರಿಯಾದ ಆಕಾರ, ಗಾತ್ರ ಮತ್ತು ಬಣ್ಣ ಹೊಂದಿರಲಿಲ್ಲ. ಇದರಿಂದಾಗಿ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಸಿಗದೆ ಅವರು ಆರ್ಥಿಕ ನಷ್ಟ ಅನುಭವಿಸಿದ್ದರು. ಈ ಬಗ್ಗೆ ಬಿತ್ತನೆ ಬೀಜವನ್ನು ಮಾರುಕಟ್ಟೆಗೆ ಬಿಟ್ಟಿದ್ದ ಖಾಸಗಿ ಕಂಪನಿಗೆ ದೂರು ನೀಡಿದಾಗ, ಕಂಪನಿಯ ಪ್ರತಿನಿಧಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದರು. ಕಂಪನಿಯು 50 ಪ್ಯಾಕೆಟ್​ ಹೊಸ ಬೀಜಗಳನ್ನು ನೀಡುವುದಾಗಿ ತಿಳಿಸಿತ್ತು. ಆದರೆ, ನಷ್ಟ ಪರಿಹಾರ ಕೋರಿದ್ದ ನಾಗೇಶ್​, ಗ್ರಾಹಕರ ಆಯೋಗಕ್ಕೆ ಅರ್ಜಿ ಸಲ್ಲಿಸಿದ್ದರು.

ಕಂಪನಿ ವಾದ ತಿರಸ್ಕರಿಸಿದ ಆಯೋಗ

ಸರಿಯಾದ ಕೃಷಿ ಪದ್ಧತಿ ಅನುಸರಿಸದ ಮತ್ತು ಹವಾಮಾನ ವೈಪರೀತ್ಯದ ಕಾರಣ ಬೆಳೆಯಲ್ಲಿ ಸಮಸ್ಯೆಯಾಗಿದೆ. ತಾನು ಸಂವರ್ಧಿಸಿದ್ದ ಬೀಜದಲ್ಲಿ ಯಾವುದೇ ಸಮಸ್ಯೆ ಇಲ್ಲ ಎಂದು ಗ್ರಾಹಕರ ಆಯೋಗದಲ್ಲಿ ಕಂಪನಿಯು ವಾದಿಸಿತ್ತು. ಆದರೆ, ಕಳಪೆ ಗುಣಮಟ್ಟದ ಬೀಜದ ಬಗ್ಗೆ ತೋಟಗಾರಿಕೆ ಇಲಾಖೆ ನೀಡಿದ್ದ ವರದಿ ಮತ್ತು ಬೆಳೆ ನಷ್ಟಕ್ಕೆ ಪರಿಹಾರವಾಗಿ ರೈತನಿಗೆ 50 ಪ್ಯಾಕೆಟ್​ ಬೀಜಗಳನ್ನು ನೀಡುವುದಾಗಿ ಕಂಪನಿಯೇ ಹೇಳಿದ್ದ ಸಾಕ್ಷ್ಯಗಳನ್ನು ಪರಿಗಣಿಸಿರುವ ಆಯೋಗವು ರೈತನಿಗೆ 2 ಲಕ್ಷ ರೂ. ನಷ್ಟ ಪರಿಹಾರ ಮತ್ತು 15 ಸಾವಿರ ರೂ. ನ್ಯಾಯಾಲಯದ ವೆಚ್ಚವನ್ನು ಪಾವತಿಸುವಂತೆ ಆದೇಶಿಸಿದೆ. ಕಳಪೆ ಗುಣಮಟ್ಟದ ಬೀಜವನ್ನು ಮಾರುಕಟ್ಟೆಗೆ ಪೂರೈಸಿದ ಖಾಸಗಿ ಕಂಪನಿ ಮತ್ತು ಅದನ್ನು ಮಾರಾಟ ಮಾಡಿದ ಟ್ರೇಡರ್​ ಜಂಟಿಯಾಗಿ ರೈತನಿಗೆ ಪರಿಹಾರ ನೀಡಬೇಕು ಎಂದು ಆಯೋಗ ಹೇಳಿದೆ. 
"

ಕಳಪೆ ಬೀಜಗಳನ್ನು ನೀಡಿದ ಕಂಪನಿಯ ಲೈಸೆನ್ಸ್​ ರದ್ದುಪಡಿಸುವಂತೆ ತೋಟಗಾರಿಕಾ ಇಲಾಖೆಗೆ ಹಿಂದೊಮ್ಮೆ ಅರ್ಜಿ ಸಲ್ಲಿಸಿದ್ದು, ಅದನ್ನು ಪರಿಗಣಿಸಿಲ್ಲ. ಈ ಆದೇಶ ಪ್ರತಿಯೊಂದಿಗೆ ಮತ್ತೊಮ್ಮೆ ಅರ್ಜಿ ಸಲ್ಲಿಸಲಾಗುವುದು. ಇಂತಹ ಕಂಪನಿಗಳ ನಿಯಂತ್ರಣಕ್ಕೆ ಸರ್ಕಾರ ಕ್ರಮ ಕೈಗೊಳ್ಳಬೇಕು. ಕಳಪೆ ಬೀಜಗಳಿಂದ ಸಮಸ್ಯೆಯಾಗಿದ್ದರೆ ಗ್ರಾಹಕರ ಆಯೋಗದಲ್ಲಿ ವಕೀಲರ ಸಹಾಯವಿಲ್ಲದೆ ಪ್ರಕರಣ ನಡೆಸಬಹುದು. ಈ ಬಗ್ಗೆ ರೈತರು ತಿಳಿದಿದ್ದರೆ ಉತ್ತಮ.