ಪೇಷಾವರ್/ಇಸ್ಲಾಮಾಬಾದ್: ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದ (ಪಿಒಕೆ) ಅನೇಕ ಭಾಗಗಳಲ್ಲಿ ಕಳೆದ 24 ಗಂಟೆಗಳಲ್ಲಿ ಮೇಘಸ್ಪೋಟದಿಂದ ಸುರಿದ ಮಹಾಮಳೆಗೆ ಕನಿಷ್ಠ 214 ಜನರು ಬಲಿಯಾಗಿದ್ದು ಇನ್ನೂ ಅನೇಕ ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ. ಕುಂಭದ್ರೋಣ ವರ್ಷಧಾರೆಯಿಂದಾಗಿ ಹಠಾತ್ ಪ್ರವಾಹ ಉಂಟಾದ ಖೈಬರ್ ಪಖ್ತೂನ್ಖ್ವಾ ಪ್ರಾಂತ್ಯವೊಂದರಲ್ಲೇ ಬಹುತೇಕ ಸಾವುಗಳು ಸಂಭವಿಸಿವೆ. ಹಲವು ಕಟ್ಟಡಗಳು ಹಾನಿಗೊಂಡಿವೆ. ಕಾರಾಕೋರಂ ಹೆದ್ದಾರಿ ಮತ್ತು ಪಿಒಕೆಯ ಗಿಲ್ಗಿಟ್ಬಾಲ್ಟಿಸ್ತಾನ್ನಲ್ಲಿನ ಬಾಲ್ಟಿಸ್ತಾನ್ ಹೈವೇ ಸಹಿತ ಅನೇಕ ರಸ್ತೆಗಳ ಸಂಚಾರ ಬಂದ್ ಆಗಿದೆ. ಖೈಬರ್ ಪಖ್ತೂನ್ಖ್ವಾದ ಬುನೇರ್ ಜಿಲ್ಲೆಯಲ್ಲಿ 75, ಮನ್ಶೇರಾದಲ್ಲಿ 17 ಮತ್ತು ಬಜೌರ್ ಹಾಗೂ ಬಟಾಗ್ರಾಮ್ಲ್ಲಿ ತಲಾ 18 ಮಂದಿ ಮಳೆಯ ಪ್ರಕೋಪಕ್ಕೆ ಬಲಿಯಾಗಿದ್ದಾರೆ ಎಂದು ಸ್ಥಳೀಯ ಸರ್ಕಾರಿ ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಾಂತ್ಯದಲ್ಲಿ ಗುರುವಾರ ರಾತ್ರಿಯಿಂದೀಚೆಗೆ ಮೇಘಸ್ಪೋಟದಿಂದ ಹಠಾತ್ತನೆ ಸುರಿದ ಧಾರಾಕಾರ ಮಳೆಯಿಂದ ಹಠಾತ್ ಪ್ರವಾಹ ಉಂಟಾಗಿ ಮಕ್ಕಳ ಸಹಿತ 125ಕ್ಕೂ ಹೆಚ್ಚು ಮಂದಿ ಪ್ರಾಣ ಕಳೆದುಕೊಂಡರೆಂದು ಪ್ರಾಂತೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ (ಪಿಡಿಎಂಎ) ವಕ್ತಾರ ಫೈಝಿ ತಿಳಿಸಿದ್ದಾರೆ. ರಕ್ಷಣಾ ತಂಡಗಳು ಮತ್ತು ಸ್ಥಳೀಯರು ಮೖತದೇಹಗಳನ್ನು ಹೊರಗೆ ತೆಗೆದಿದ್ದಾರೆ. ಸಂತ್ರಸ್ತ ಪ್ರದೇಶಗಳಲ್ಲಿ ಅನೇಕ ಜನರು ನಾಪತ್ತೆ ಆಗಿರುವುದರಿಂದ ಸಾವಿನ ಸಂಖ್ಯೆ ಇನ್ನೂ ಹೆಚ್ಚಾಗುವ ನಿರೀಕ್ಷೆ ಇದೆಯೆಂದು ಫೈಝಿ ಹೇಳಿದ್ದಾರೆ. ಬಿಜೌರ್ ಜಿಲ್ಲಾ ಆಪತ್ತು ನಿರ್ವಹಣಾ ಅಧಿಕಾರಿ (ಡಿಇಒ) ಉಸ್ತುವಾರಿಯಲ್ಲಿ ಶೋಧ ಹಾಗೂ ರಕ್ಷಣಾ ಕಾರ್ಯåಚರಣೆ ನಡೆಯುತ್ತಿದೆ ಎಂದಿದ್ದಾರೆ.
ಸ್ವಾತ್ ಮತ್ತು ಬಿಜೌರ್ನ ಮಹಾಮಳೆ ಸಂತ್ರಸ್ತ ಪ್ರದೇಶಗಳಲ್ಲಿ ಪಾಕಿಸ್ತಾನ ಸೇನೆ ಕೂಡ ಪರಿಹಾರ ಕಾರ್ಯåಚರಣೆ ನಡೆಸುತ್ತಿದೆ. ಸೇನಾ ತಂಡಗಳು, ಜಲಾವೃತ ಪ್ರದೇಶಗಳಿಂದ ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಸಾಗಿಸುತ್ತಿವೆ. ರಕ್ಷಣೆ ಮತ್ತು ಪರಿಹಾರ ಚಟುವಟಿಕೆಗಳಿಗೆ ಎಲ್ಲ ಲಭ್ಯ ಸಂಪನ್ಮೂಲಗಳನ್ನು ಬಳಸುವಂತೆ ಖೈಬರ್ ಪಖ್ತೂನ್ಖ್ವಾ ಮುಖ್ಯಮಂತ್ರಿ ಅಮೀನ್ ಅಲಿ ಗಂಡಾಪುರ್ ಅಧಿಕಾರಿಗಳಿಗೆ ನಿರ್ದೇಶಿಸಿದ್ದಾರೆ.
ಪ್ರವಾಹದಿಂದ ಒಂದು ಡಜನ್ಗೂ ಹೆಚ್ಚು ಮನೆಗಳು, ಅನೇಕ ವಾಹನಗಳು, ಶಾಲಾ ಕಟ್ಟಡಗಳು ಮತ್ತು ಆರೋಗ್ಯ ಘಟಕಗಳು ಹಾನಿಗೊಂಡಿವೆ. ಈಶಾನ್ಯದ ನೀಲಂ ಕಣಿವೆಯಲ್ಲಿ ಕೂಡ ಜನಜೀವನ ಅಸ್ತವ್ಯಸ್ತಗೊಂಡಿದ್ದು ಪ್ರವಾಸಿಗರನ್ನು ಸುರಕ್ಷಿತ ಜಾಗಗಳಿಗೆ ಸ್ಥಳಾಂತರಿಸಲಾಗಿದೆ. ಸಂಪರ್ಕ ರಸ್ತೆ ಹಾನಿಗೊಂಡಿರುವುದರಿಂದ ‘ಈಗ ಇದ್ದಲ್ಲೇ ಇರಿ’ ಎಂದು ರಟ್ಟಿ ಗಾಲಿ ಸರೋವರ ಬೇಸ್ನಲ್ಲಿ ಬೀಡುಬಿಟ್ಟಿರುವ 600ಕ್ಕೂ ಹೆಚ್ಚು ಪ್ರವಾಸಿಗರಿಗೆ ಸೂಚಿಸಲಾಗಿದೆ.
ಪಾಕ್ ಆಕ್ರಮಿತ ಕಾಶ್ಮೀರದ ಗಿಲ್ಗಿಟ್ಬಾಲ್ಟಿಸ್ತಾನದ ಝಿಜೆರ್ ಜಿಲ್ಲೆಯಲ್ಲಿ ಎರಗಿದ ಹಠಾತ್ ಪ್ರವಾಹಕ್ಕೆ ಎಂಟು ಜನರು ಬಲಿಯಾಗಿ ಇಬ್ಬರು ಕಾಣೆಯಾಗಿದ್ದಾರೆ. ಗಾಯದ ಮೇಲೆ ಬರೆ ಎಂದಂತೆ ಮೇಘಸ್ಪೋಟದಿಂದ ಸಂತ್ರಸ್ತವಾದ ಪ್ರದೇಶಗಳಿಗೆ ಪರಿಹಾರ ಸಾಮಗ್ರಿಗಳನ್ನು ಒಯ್ಯುತ್ತಿದ್ದ ಒಂದು ಹೆಲಿಕಾಪ್ಟರ್ ವಾಯವ್ಯ ಪಾಕಿಸ್ತಾನದ ಖೈಬರ್ ಪಖ್ತೂನ್ಖ್ವಾ ಪ್ರಾಂತ್ಯದ ಮೊಹ್ಮಂದ್ ಬುಡಕಟ್ಟು ಜಿಲ್ಲೆಯಲ್ಲಿ ಶುಕ್ರವಾರ ಪತನಗೊಂಡು ಸಂಭವಿಸಿದ ದುರಂತದಲ್ಲಿ ಐದು ಜನರು ಮೃತಪಟ್ಟಿದ್ದಾರೆ. ಪ್ರಾಂತೀಯ ಸರ್ಕಾರದ ಎಂ17 ಹೆಲಿಕಾಪ್ಟರ್ ದುರಂತದಲ್ಲಿ ಇಬ್ಬರು ಪೈಲಟ್ಗಳು ಮತ್ತು ಇತರ ಮೂವರು ಮೖತಪಟ್ಟರೆಂದು ವರದಿಯಾಗಿದೆ. ಪ್ರತಿಕೂಲ ವಾತಾವರಣದಿಂದಾಗಿ ಈ ದುರಂತ ಸಂಭವಿಸಿತೆಂದು ಪ್ರಾಂತ್ಯದ ಮುಖ್ಯ ಕಾರ್ಯದರ್ಶಿ ಶಹಾಬ್ ಅಲಿ ಷಾ ದೃಢಪಡಿಸಿದ್ದಾರೆ.