ಬೆಂಗಳೂರು: ಆಪ್ಟಿಕಲ್ ಫೈಬರ್ ಕೇಬಲ್ ಬಳಸಿ ಡಿಜಿಟಲ್ ಸೇವೆಗಳು ಮತ್ತು ಆರ್ಥಿಕ ಅವಕಾಶಗಳನ್ನು ಗ್ರಾಮೀಣ ಪ್ರದೇಶಗಳಿಗೆ ತಲುಪಿಸಲು ದೂರಸಂಪರ್ಕ ಆಧಾರಿತ ‘ಸಮೃದ್ಧ ಗ್ರಾಮ ಪಂಚಾಯತ್ ಯೋಜನೆ’ ಜಾರಿ ಮಾಡುತ್ತಿದ್ದು, ಇದಕ್ಕಾಗಿ 205 ಗ್ರಾಮ ಪಂಚಾಯಿತಿಗಳನ್ನು ಆಯ್ಕೆ ಮಾಡಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಮಾಹಿತಿ ನೀಡಿದ್ದಾರೆ.
ಗ್ರಾಮೀಣ ಪ್ರದೇಶಗಳಲ್ಲಿ ಡಿಜಿಟಲ್ ಪರಿವರ್ತನೆಗೆ ಪ್ರೇರಕ ಶಕ್ತಿಯಾಗಿ ಕಾರ್ಯನಿರ್ವಹಿಸುವ ಮೂಲಕ ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿಗೆ ಈ ಯೋಜನೆ ಉತ್ತೇಜನ ನೀಡುತ್ತದೆ.
ಗ್ರಾಮೀಣ ಸಮುದಾಯಗಳು, ಸಾರ್ವಜನಿಕ ಹಾಗೂ ಖಾಸಗಿ ಸಂಸ್ಥೆಗಳು ಮತ್ತು ಗ್ರಾಮ ಮಟ್ಟದ ಉದ್ಯಮಿಗಳು/ಸಂಸ್ಥೆಗಳಿಗೆ ಹೆಚ್ಚಿನ ವೇಗದ ಬ್ರಾಡ್‌ಬ್ಯಾಂಡ್ ಸಂಪರ್ಕದ ಪ್ರಯೋಜನಗಳ ಬಗ್ಗೆ ಅರಿವು ಮೂಡಿಸಲು ಕ್ರಮಕೈಗೊಳ್ಳಲಾಗುತ್ತದೆ ಎಂದಿದ್ದಾರೆ.
ಗ್ರಾಮಗಳಲ್ಲಿ ಫೈಬರ್ ಸಂಪರ್ಕದ ಸಮರ್ಥ ಬಳಕೆಗಾಗಿ ತಾಂತ್ರಿಕ ತಜ್ಞರು, ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಪಂಚಾಯತ್‌ರಾಜ್ ಸಂಸ್ಥೆಗಳ ಸದಸ್ಯರನ್ನು ಒಳಗೊಂಡ ಗ್ರಾಮ ಪಂಚಾಯತ್ ಡಿಜಿಟಲ್ ಅಕ್ಸೆಸ್ ಸಮಿತಿಗಳನ್ನು ರಚಿಸಲಾಗುವುದು ಎಂದು ತಿಳಿಸಿದ್ದಾರೆ.
ಗ್ರಾಮ ಪಂಚಾಯತಿ ಅಧ್ಯಕ್ಷರು ಅಥವಾ ಚುನಾಯಿತ ಪ್ರತಿನಿಧಿ ಇಲ್ಲದಿದ್ದ ಪಕ್ಷದಲ್ಲಿ ಆಡಳಿತಾಧಿಕಾರಿ ಅಧ್ಯಕ್ಷತೆಯಲ್ಲಿ ಸಮಿತಿಗಳನ್ನು ರಚಿಸಲಾಗುತ್ತದೆ. ಗ್ರಾಮ ಪಂಚಾಯತಿಯ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸಂಚಾಲಕ ಹಾಗೂ ನಾಲ್ವರು ಸದಸ್ಯರನ್ನು ಸಮಿತಿ ಒಳಗೊಂಡಿರಲಿದೆ.
ಗ್ರಾಮೀಣ ಸಮುದಾಯಗಳು, ಸಾರ್ವಜನಿಕ ಮತ್ತು ಖಾಸಗಿ ಸಂಸ್ಥೆಗಳು ಹಾಗೂ ಗ್ರಾಮ ಮಟ್ಟದ ಉದ್ಯಮಿಗಳು/ಸಂಸ್ಥೆಗಳಿಗೆ ಹೆಚ್ಚಿನ ವೇಗದ ಬ್ರಾಡ್‌ಬ್ಯಾಂಡ್ ಸಂಪರ್ಕದ ಪ್ರಯೋಜನಗಳು, ಗ್ರಾಮಗಳ ಸಾಮಾಜಿಕ, ಆರ್ಥಿಕ ಬೆಳವಣಿಗೆಯಲ್ಲಿ ಇದರ ಪಾತ್ರದ ಕುರಿತು ಅರಿವು, ಬ್ರಾಡ್‌ಬ್ಯಾಂಡ್ ವಿಸ್ತರಣೆ, ಡಿಜಿಟಲ್ ಲಭ್ಯತೆ ಸುಧಾರಿಸುವತ್ತ ಗಮನ.
ಹಳ್ಳಿಗಳಲ್ಲಿ ಹೆಚ್ಚಿನ ವೇಗದ ಬ್ರಾಡ್‌ಬ್ಯಾಂಡ್ ಮೂಲಕ ಒದಗಿಸಬಹುದಾದ ಸೇವೆಗಳು ಮತ್ತು ಬಳಕೆಯ ಪ್ರಕರಣಗಳಿಗೆ ಸಂಬಂಧಿಸಿದಂತೆ ಅನ್ವೇಷಣೆ. ಶಾಲೆಗಳು, ಆಸ್ಪತ್ರೆಗಳು ಮತ್ತು ಇತರ ಸಾರ್ವಜನಿಕ ಸ್ಥಳಗಳಲ್ಲಿ ಐಸಿಟಿ ಉಪಕರಣಗಳನ್ನು ಸ್ಥಾಪಿಸುವ ಸಾಧ್ಯತೆಗಳನ್ನು ಪರಿಶೀಲಿಸುವುದು ಮತ್ತಿತರ ಹೊಣೆಯನ್ನು ಸಮಿತಿಗಳಿಗೆ ನೀಡಲಾಗಿದೆ.
ಆಯ್ದ ಗ್ರಾಮ ಪಂಚಾಯತಿಗಳಲ್ಲಿ ಡಿಜಿಟಲ್ ಅಕ್ಸೆಸ್ ಸಮಿತಿಗಳು ರಚನೆಯಾಗಿದ್ದನ್ನು ಖಾತರಿ ಮಾಡಿಕೊಳ್ಳಬೇಕು ಎಂದು ಜಿ.ಪಂ. ಸಿಇಒ ಹಾಗೂ ತಾ.ಪಂ. ಇಒಗಳಿಗೆ ಸಚಿವ ಪ್ರಿಯಾಂಕ್ ಖರ್ಗೆ ಸೂಚಿಸಿದ್ದಾರೆ.