ನ್ಯೂಸ್

2025ನೇ ಸಾಲಿನ ಜಿಲ್ಲಾ ರಾಜ್ಯೋತ್ಸವ ಸನ್ಮಾನಕ್ಕೆ ಅರ್ಜಿ ಆಹ್ವಾನ

ಮೈಸೂರು ಜಿಲ್ಲಾಡಳಿತ ವತಿಯಿಂದ 2025ನೇ ಸಾಲಿನಲ್ಲಿ ಆಚರಿಸುತ್ತಿರುವ 70ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿ, ಕಲೆ, ಸಂಗೀತ, ಸಮಾಜ ಸೇವೆ, ಪತ್ರಿಕೋದ್ಯಮ, ವಿಜ್ಞಾನ ಮತ್ತು ತಂತ್ರಜ್ಞಾನ, ಕೃಷಿ, ಪರಿಸರ, ಕ್ರೀಡೆ, ವೈದ್ಯಕೀಯ, ಶಿಕ್ಷಣ ಇತ್ಯಾದಿ ಕ್ಷೇತ್ರಗಳಲ್ಲಿ ಅತ್ಯುತ್ತಮ ಗಣನೀಯ ಸೇವೆ ಸಲ್ಲಿಸಿರುವ ಮತ್ತು ಸಲ್ಲಿಸುತ್ತಿರುವವರಿಗೆ ಜಿಲ್ಲಾ ಮಟ್ಟದ ಸನ್ಮಾನ ಕಾರ್ಯಕ್ರಮವನ್ನು ಏರ್ಪಡಿಸಲು ಉದ್ದೇಶಿಸಲಾಗಿದೆ.

 ಸಂಪೂರ್ಣ ವಿವರಗಳೊಂದಿಗೆ ಭೌತಿಕವಾಗಿ ಅಥವಾ ಇ-ಮೇಲ್ ಮೂಲಕ ಅರ್ಜಿಗಳನ್ನು ಅಕ್ಟೋಬರ್ 18 ರಿಂದ ಅಕ್ಟೋಬರ್ 27 ವರೆಗೆ ಸಲ್ಲಿಸಬಹುದಾಗಿದೆ. ಸಾಧಕರ ವಿವರಗಳನ್ನು ಬೇರೊಬ್ಬರು ಶಿಫಾರಸ್ಸು ಮಾಡಲು ಅವಕಾಶ ಕಲ್ಪಿಸಿದ್ದು, ಸಾಧಕರ ಸಂಪೂರ್ಣ ವಿವರಗಳನ್ನು ಲಗತ್ತಿಸಿ ಅರ್ಜಿ ಸಲ್ಲಿಸಬಹುದಾಗಿದೆ.

 ಸದರಿ ಅರ್ಜಿಗಳನ್ನು ಸ್ವೀಕರಿಸಲು ರಜಾ ದಿನಗಳಲ್ಲಿಯೂ ಕೌಂಟರ್ ತೆರೆಯಲಾಗಿದ್ದು, ಬೆಳಗ್ಗೆ 10.30 ರಿಂದ ಸಂಜೆ 5.30ರ ವರೆಗೆ ಸಹಾಯಕ ನಿರ್ದೇಶಕರ ಕಚೇರಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಕಲಾಮಂದಿರ, ವಿನೋಬಾ ರಸ್ತೆ, ಮೈಸೂರು-570005 ಇಲ್ಲಿಗೆ ನೇರವಾಗಿ ಸಲ್ಲಿಸಬಹುದಾಗಿರುತ್ತದೆ ಹಾಗೂ ಮಿಂಚoಚೆ ಮೂಲಕವೂ dkc.mysuru@gmail.com ಇ-ಮೇಲ್ ವಿಳಾಸಕ್ಕೆ ಸಂಪೂರ್ಣ ವಿವರಗಳೊಂದಿಗೆ ಅರ್ಜಿ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಕಚೇರಿ ದೂರವಾಣಿ ಸಂಖ್ಯೆ: 0821-2513225ಗೆ ಸಂಪರ್ಕಿಸಬಹುದು ಎಂದು ಮೈಸೂರು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.