ಹೊಸತನವನ್ನು ಹೊತ್ತು ತರುವ ಹೊಸ ವರ್ಷ ಮತ್ತೆ ಬಂದಿದೆ. 2024ಕ್ಕೆ ವಿದಾಯ ಹೇಳಿ, 2025ಕ್ಕೆ ಹೊಸ ನಿರೀಕ್ಷೆಯ ಸ್ವಾಗತವನ್ನೂ ಕೋರುವ ಸಮಯ ಇದಾಗಿದೆ.
ಕಳೆದ ವರ್ಷದ ಸುಂದರ ನೆನಪುಗಳನ್ನು ಮೆಲುಕು ಹಾಕುತ್ತಾ, ಜೀವನದ ತಪ್ಪುಗಳನ್ನು ತಿದ್ದಿಕೊಳ್ಳುತ್ತಾ ಹೊಸ ಕನಸುಗಳೊಂದಿಗೆ ಸುಂದರ ಭವಿಷ್ಯದತ್ತ ಹೆಜ್ಜೆ ಇಡುವ ಕ್ಷಣ ಇದಾಗಿದೆ.
ಜಿಲ್ಲೆಯಲ್ಲಿ 2024 ಕ್ರೀಡಾ ಚಟುವಟಿಕೆಗಳು ಗರಿಗೆದರಿದವು. ದಸರಾ ಕ್ರೀಡಾಕೂಟ, ದಸರಾ ನಾಡಕುಸ್ತಿಗಳು ಕ್ರೀಡಾಭಿಮಾನಿಗಳನ್ನು ಕ್ರೀಡಾಂಗಣದತ್ತ ಸೆಳೆದವು. ಶಾಲಾ, ಕಾಲೇಜು, ವಿಶ್ವವಿದ್ಯಾಲಯ ಮಟ್ಟದಲ್ಲಿ ಎಲ್ಲ ಕ್ರೀಡಾಕೂಟಗಳು ಜರುಗಿದವು. ಆದರೆ, ಪ್ರತಿ ಬಾರಿ ರಸದೌತಣ ನೀಡುತ್ತಿದ್ದ ಮಹಾರಾಜ ಟ್ರೋಫಿ ಟಿ-20 ಕ್ರಿಕೆಟ್ ಟೂರ್ನಿ ಮಾತ್ರ ಈ ಬಾರಿ ಮೈಸೂರಿನಲ್ಲಿ ನಡೆಯಲಿಲ್ಲ.
ನಗರದ ಮಾನಸಗಂಗೋತ್ರಿಯ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಮೈದಾನ ರಣಜಿ ಪಂದ್ಯಕ್ಕೆ ಮೈಸೂರು ಆತಿಥ್ಯ ವಹಿಸಿತ್ತು. ಕರ್ನಾಟಕ ತಂಡವು ಗೋವಾ ತಂಡವನ್ನು ಎದುರಿಸಿತು. ಆದರೆ, ಪಂದ್ಯ ಡ್ರಾನಲ್ಲಿ ಅಂತ್ಯಗೊಂಡಿತು. ಜೆತೆಗ 19 ವರ್ಷದೊಳಗಿನವರ ಕೂಚ್ ಬಿಹಾರ್ ಟ್ರೋಫಿ ಕ್ರಿಕೆಟ್ ಪಂದ್ಯಾವಳಿಯ ಒಡಿಶಾ ಹಾಗೂ ಕರ್ನಾಟಕ ತಂಡಗಳ ನಡುವೆ ಪಂದ್ಯ ನಡೆಯಿತು.