ನ್ಯೂಸ್

ಅಮೆರಿಕ ಅಧ್ಯಕ್ಷೀಯ ಚುನಾವಣೆ 2020 : 120 ವರ್ಷಗಳಲ್ಲೇ ಅತ್ಯಧಿಕ ಮತದಾನ ಪ್ರಮಾಣ

ವಾಷಿಂಗ್ಟನ್​: ಅಮೆರಿಕದ ಅಧ್ಯಕ್ಷೀಯ ಚುನಾವಣೆ 2020 ಹಲವು ದಾಖಲೆಗಳನ್ನು ನಿರ್ಮಿಸಿದ್ದು, 120 ವರ್ಷಗಳಲ್ಲೇ ಅತ್ಯಧಿಕ ಮತದಾನ ಪ್ರಮಾಣ ದಾಖಲಾಗಿದೆ ಎಂದು ಫ್ಲೋರಿಡಾ ಯೂನಿರ್ವಸಿಟಿಯ ಪೊಲಿಟಿಕಲ್ ಸೈನ್ಸ್ ಅಸೋಸಿಯೇಟ್ ಪ್ರೊಫೆಸರ್​ ಮೈಕಲ್​ ಪಿ. ಮೆಕ್​ಡೊನಾಲ್ಡ್​ ಹೇಳಿದ್ದಾರೆ.

ಯುಎಸ್ ಎಲೆಕ್ಷನ್ ಪ್ರಾಜೆಕ್ಟ್​ ಎಂಬ ನಿಷ್ಪಕ್ಷಪಾತ ಚುನಾವಣಾ ಸೈಟ್​ನ ಮುಖ್ಯಸ್ಥರಾಗಿದ್ದು, ಚುನಾವಣಾ ದತ್ತಾಂಶಗಳನ್ನು ಸಂಗ್ರಹಿಸಿ ವಿಶ್ಲೇಷಿಸುತ್ತಿದ್ದಾರೆ. ಈ ಚುನಾವಣೆಗೆ 239 ದಶಲಕ್ಷ ಮತದಾರರು ಮತ ಚಲಾಯಿಸಲು ಅರ್ಹತೆ ಪಡೆದುಕೊಂಡಿದ್ದರು. ಪ್ರಾಥಮಿಕ ಅಂದಾಜಿನ ಪ್ರಕಾರ ಈ ಪೈಕಿ 160 ಮತದಾರರು ಮತಚಲಾಯಿಸಿದ್ದಾರೆ. ನವೆಂಬರ್ 3 ರಂದು ನಡೆದ ಚುನಾವಣೆಯಲ್ಲಿ ಶೇಕಡ 66.9 ಮತದಾನವಾಗಿದೆ. ಇದು 1900ನೇ ಇಸವಿಯಿಂದೀಚೆಗೆ ಗರಿಷ್ಠ ಪ್ರಮಾಣದ ಮತದಾನವಾಗಿದೆ. 1900ನೇ ಇಸವಿಯಲ್ಲಿ ನಡೆದ ಚುನಾವಣೆಯಲ್ಲಿ ಗರಿಷ್ಠ ಶೇಕಡ 73.7 ಮತದಾನವಾಗಿತ್ತು ಎಂದು ಎಲೆಕ್ಷನ್ ಪ್ರಾಜೆಕ್ಟ್​ ತಿಳಿಸಿದೆ.

ಈ ವರ್ಷದ ಚುನಾವಣೆಯಲ್ಲಿ ಗರಿಷ್ಠ ಮತದಾನವಾಗಿದೆ. ಇದು 120 ವರ್ಷಗಳ ಅವಧಿಯಲ್ಲಿ ಗರಿಷ್ಠ ಪ್ರಮಾಣದ್ದಾಗಿದ್ದು, ನಿಖರ ಲೆಕ್ಕಾಚಾರ ಮುಂದಿನ ದಿನಗಳಲ್ಲಿ ಸಿಗಲಿದೆ. 2016ರಲ್ಲಿ ಶೇಕಡ 56 ಮತದಾನವಾಗಿತ್ತು. 2008ರಲ್ಲಿ ಶೇಕಡ 58 ಮತದಾನವಾಗಿತ್ತು ಎಂದು ಮೆಕ್​ಡೊನಾಲ್ಡ್ ಹೇಳಿದ್ದಾರೆ. (ಏಜೆನ್ಸೀಸ್)