ಟೆಲ್ ಅವಿವ್: ಗಾಜಾ ಪಟ್ಟಿಯ ಆಸ್ಪತ್ರೆಯೊಂದರ ಮೇಲೆ ಇಸ್ರೇಲ್ ನಡೆಸಿದ ವಾಯುದಾಳಿಯಲ್ಲಿ ಕನಿಷ್ಠ 200 ಮಂದಿ ಮೃತಪಟ್ಟಿರುವುದಾಗಿ ಪ್ಯಾಲೆಸ್ತೀನ್ ಆಡಳಿತ ನಡೆಸುತ್ತಿರುವ ಹಮಾಸ್ ಸಂಘಟನೆಯ ಅಧಿಕಾರಿಗಳು ಮಂಗಳವಾರ (ಅ.17) ತಿಳಿಸಿದ್ದಾರೆ.
ಆಸ್ಪತ್ರೆಯ ಮೇಲಿನ ದಾಳಿಗೆ ಸಾಕಷ್ಟು ಖಂಡನೆಗಳು ಮತ್ತು ಆಕ್ರೋಶಗಳು ವ್ಯಕ್ತವಾಗಿದೆ. ಆದರೆ, ಗಾಜಾ ಉಗ್ರರಿಂದ ರಾಕೆಟ್ ತಪ್ಪಾದ ಉಡಾವಣೆಗೊಂಡು ಈ ಅನಾಹುತ ಸಂಭವಿಸಿದೆ ಎಂದು ಇಸ್ರೇಲ್ ಪ್ರತ್ಯಾರೋಪ ಮಾಡಿದೆ.
ಘಟನೆಯ ಬೆನ್ನಲ್ಲೇ ವೈದ್ಯರು ಮತ್ತು ನಾಗರಿಕರು ಸೇರಿ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದು, ಬಿಳಿ ಚೀಲಗಳು ಅಥವಾ ಹೊದಿಕೆಗಳಲ್ಲಿ ಮೃತದೇಹಗಳನ್ನು ವಶಕ್ಕೆ ಪಡೆಯುತ್ತಿರುವುದು ಮತ್ತು ಆಸ್ಪತ್ರೆಯ ಅಂಗಳದಲ್ಲಿ ರಕ್ತದ ಕಲೆಗಳು ಹಾಗೂ ಅನೇಕ ಸುಟ್ಟ ಕಾರುಗಳಿರುವ ದೃಶ್ಯಗಳಿರುವ ವಿಡಿಯೋ ತುಣುಕನ್ನು ಅಲ್ ಜಝೀರಾ ಮಾಧ್ಯಮ ಪ್ರಕಟ ಮಾಡಿದೆ.
ಗಾಜಾ ಕೇಂದ್ರ ಭಾಗದಲ್ಲಿರುವ ಅಹ್ಲಿ ಅರಬ್ ಆಸ್ಪತ್ರೆ ಮೇಲೆ ದಾಳಿ ನಡೆದಿದೆ ಎಂದು ಹಮಾಸ್ ಆರೋಪ ಮಾಡಿದೆ. ನೂರಾರು ಸಂತ್ರಸ್ತರು ಇನ್ನೂ ಕೂಡ ಅವಶೇಷಗಳ ಅಡಿಯಲ್ಲಿ ಸಿಲುಕ್ಕಿದ್ದು, ಇದೊಂದು ಯುದ್ಧ ಅಪರಾಧ ಎಂದಿರುವ ಹಮಾಸ್, ಈ ಘಟನೆಯನ್ನು ಖಂಡಿಸುವಂತೆ ವಿಶ್ವಸಂಸ್ಥೆಯನ್ನು ಒತ್ತಾಯಿಸಿದೆ. ಇದರ ನಡುವೆ ಜೋರ್ಡಾನ್ ರಾಜಧಾನಿ ಅಮ್ಮನ್‌ನಲ್ಲಿ, ಗಾಜಾದ ಆಸ್ಪತ್ರೆ ಮೇಲೆ ನಡೆದ ದಾಳಿಯಿಂದ ಕೆರಳಿದ ಡಜನ್ಗಟ್ಟಲೆ ಪ್ರತಿಭಟನಾಕಾರರು ಇಸ್ರೇಲಿ ರಾಯಭಾರ ಕಚೇರಿಯನ್ನು ಮುತ್ತಿಗೆ ಹಾಕಲು ಪ್ರಯತ್ನಿಸಿದರು ಎಂದು ಎಎಫ್‌ಪಿ ವರದಿ ಮಾಡಿದೆ.
ಕತಾರ್‌ನಂತೆಯೇ ಆಸ್ಪತ್ರೆಯ ಮೇಲಿನ ದಾಳಿಯನ್ನು ಖಂಡಿಸಿದ ಅರಬ್ ಮತ್ತು ಮುಸ್ಲಿಂ ರಾಷ್ಟ್ರಗಳಲ್ಲಿ ಜೋರ್ಡಾನ್ ಕೂಡ ಸೇರಿದೆ.
ಅ.07ರ ಶನಿವಾರದಂದು ಇಸ್ರೇಲ್ ಮೇಲೆ ಹಮಾಸ್ ಉಗ್ರರು 5000 ರಾಕೆಟ್ಗಳಿಂದ ದಿಢೀರ್ ದಾಳಿ ಮಾಡಿರುವುದಕ್ಕೆ ಪ್ರತೀಕಾರವಾಗಿ ಇಸ್ರೇಲ್ ಪಡೆ ಹಮಾಸ್ ಉಗ್ರರರ ನೆಲೆಯಾಗಿರುವ ಗಾಜಾ ಮೇಲೆ ದಾಳಿಯನ್ನು ತೀವ್ರಗೊಳಿಸಿದೆ. ಯುದ್ಧ ಆರಂಭವಾಗಿ 10 ದಿನಗಳು ಕಳೆದರೂ ಕದನ ವಿರಾಮದ ಲಕ್ಷಣಗಳು ಕಾಣುತ್ತಿಲ್ಲ. ಭೀಕರ ಯುದ್ಧದ ಪರಿಣಾಮ ಎರಡೂ ಕಡೆಗಳಲ್ಲಿ ಸಾವಿರಾರು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.
ಇಸ್ರೇಲ್- ಪ್ಯಾಲೆಸ್ತೀನ್ ವಿವಾದವೇನು?
ಇಸ್ರೇಲ್- ಪ್ಯಾಲೆಸ್ತೀನ್ ನಡುವಿನ ಸಂಘರ್ಷ ಸುಮಾರು ನೂರು ವರ್ಷಗಳಿಂದ ನಡೆಯುತ್ತಿದೆ. ವೆಸ್ಟ್ ಬ್ಯಾಂಕ್, ಗಾಜಾ ಪಟ್ಟಿ ಮತ್ತು ಗೋಲನ್ ಹೈಟ್ಸ್ ಇನ್ನಿತರ ಪ್ರದೇಶಗಳ ಮೇಲಿನ ಹಕ್ಕಿನ ಬಗ್ಗೆ ಎರಡೂ ದೇಶಗಳ ನಡುವೆ ವಿವಾದ ಇದೆ. ಪೂರ್ವ ಜೆರುಸಲೆಮ್ ಸೇರಿ ಈ ಪ್ರದೇಶಗಳನ್ನು ಪ್ಯಾಲೆಸ್ತೀನ್ ತನ್ನದು ಎಂದು ಹೇಳಿಕೊಳ್ಳುತ್ತಿದೆ. ಆದರೆ ಇಸ್ರೇಲ್ ಜೆರುಸಲೆಮ್ ಮೇಲಿನ ಹಕ್ಕನ್ನು ಸಾಧಿಸುತ್ತಿದೆ.
ಗಾಜಾ ಪಟ್ಟಿ ಎಂದರೇನು? : ಗಾಜಾ ಪಟ್ಟಿ ಇಸ್ರೇಲ್ ಮತ್ತು ಈಜಿಪ್ಟ್ ನಡುವೆ ಇದೆ. ಈ ಸ್ಥಳವು ಪ್ರಸ್ತುತ ಹಮಾಸ್ ಉಗ್ರರ ನಿಯಂತ್ರಣದಲ್ಲಿದೆ. ಹಮಾಸ್ ಎಂಬುದು ಇದು ಇಸ್ರೇಲ್ ವಿರೋಧಿ ಗುಂಪು. ಸೆಪ್ಟೆಂಬರ್ 2005 ರಲ್ಲಿ ಇಸ್ರೇಲ್, ಗಾಜಾ ಪಟ್ಟಿಯಿಂದ ತನ್ನ ಪಡೆಗಳನ್ನು ಹಿಂತೆಗೆದುಕೊಂಡಿತು. ನಂತರ ಈ ಪ್ರದೇಶದ ಮೇಲೆ ಹಲವಾರು ನಿರ್ಬಂಧಗಳನ್ನು ವಿಧಿಸಿತು. ವೆಸ್ಟ್ ಬ್ಯಾಂಕ್ ಮತ್ತು ಗಾಜಾ ಪಟ್ಟಿಯಲ್ಲಿ ಸ್ವತಂತ್ರ ಪ್ಯಾಲೆಸ್ಟೈನ್ ರಾಜ್ಯವನ್ನು ಸ್ಥಾಪಿಸಬೇಕು ಎಂದು ಪ್ಯಾಲೆಸ್ತೀನ್ ಹೋರಾಟ ನಡೆಸುತ್ತಿದೆ. (ಏಜೆನ್ಸೀಸ್)