ನ್ಯೂಸ್

ಭತ್ತಕ್ಕೆ 200 ರೂ. ಪ್ರೋತ್ಸಾಹ ಧನ: ಸಚಿವ ಸಂಪುಟದ ಉಪ ಸಮಿತಿಗೆ ಖರೀದಿ ಮಿತಿ

ರಮೇಶ್​ ಕುಮಾರ್​​ ಬಿ ಎಡಮೋಳೆ

ಬೆಂಗಳೂರು: ಭತ್ತಕ್ಕೆ ಕೇಂದ್ರ ಸರ್ಕಾರದ ಬೆಂಬಲಬೆಲೆ ಜತೆಯಲ್ಲೇ ರಾಜ್ಯ ಸರ್ಕಾರದಿಂದ ಹೆಚ್ಚುವರಿಯಾಗಿ ಕ್ವಿಂಟಾಲ್​ಗೆ 200 ರೂ. ಪ್ರೋತ್ಸಾಹಧನ ನೀಡಲಾಗುವುದೆಂದು ಸಿಎಂ ಯಡಿಯೂರಪ್ಪ ಭರವಸೆ ನೀಡಿದ್ದಾರೆ. ಸೋಮವಾರ ಗೃಹ ಕಚೇರಿ ಕೃಷ್ಣಾದಲ್ಲಿ ಭೇಟಿಯಾದ ಬಳಿಕ ನಿಯೋಗದಲ್ಲಿದ್ದ ಸಚಿವ ಬಿ.ಶ್ರೀರಾಮುಲು, ಕೃಷಿ ಬೆಲೆ ಆಯೋಗದ ಅಧ್ಯಕ್ಷ ಹನುಮನಗೌಡ ಬೆಳಗುರ್ಕಿ ಸುದ್ದಿಗಾರರಿಗೆ ಈ ವಿಷಯ ತಿಳಿಸಿದರು. ತಡವಾಗಿ ಬಂದರೂ ಮಳೆ ಉತ್ತಮವಾಗಿ ಸುರಿದಿರುವ ಕಾರಣ ರೈತರ ನಿರೀಕ್ಷೆಗಿಂತ ಉತ್ತಮ ಇಳುವರಿ ಬಂದಿದೆ. ಆದರೆ, ಉತ್ಪಾದನಾ ವೆಚ್ಚ ಹೆಚ್ಚಾಗಿದ್ದು, ಮುಕ್ತ ಮಾರುಕಟ್ಟೆಯಲ್ಲಿ ಬೆಲೆ ಕಡಿಮೆ ಇರುವುದನ್ನು ನಿಯೋಗ ಮನವರಿಕೆ ಮಾಡಿಕೊಟ್ಟಿದೆ.

ಸಕಾರಾತ್ಮಕವಾಗಿ ಸ್ಪಂದಿ ಸಿದ ಸಿಎಂ, ಕೇಂದ್ರದ ಬೆಂಬಲ ಬೆಲೆ (ಭತ್ತ ಕ್ವಿಂಟಾಲ್ ಗೆ ಸಾಮಾನ್ಯ- 1,815 ರೂ ಹಾಗೂ ಗ್ರೇಡ್ ಎ- 1,835 ರೂ.)ಗೆ ಹೆಚ್ಚುವರಿಯಾಗಿ ಪ್ರೋತ್ಸಾಹಧನ 200 ರೂ. ನೀಡುವುದಾಗಿ ತಿಳಿಸಿದ್ದು, ಮಾರುಕಟ್ಟೆ ಮಧ್ಯಪ್ರವೇಶಕ್ಕೂ ಸೂಕ್ತ ವ್ಯವಸ್ಥೆ ಮಾಡುವುದಾಗಿ ಭರವಸೆ ನೀಡಿದ್ದಾರೆ ಎಂದರು.

ಉಪ ಸಮಿತಿ ನಿರ್ಧಾರ: ಬೆಂಬಲ ಬೆಲೆಯಲ್ಲಿ ಪ್ರತಿ ರೈತನಿಂದ ಖರೀದಿ ಮಿತಿ 40 ರಿಂದ 100 ಕ್ವಿಂಟಾಲ್ ಗೆ ಹೆಚ್ಚಿಸಬೇಕೆಂಬ ಕೃಷಿ ಬೆಲೆ ಆಯೋಗದ ಶಿಫಾರಸನ್ನು ಸಿಎಂ ಧನಾತ್ಮಕವಾಗಿ ಸ್ವೀಕರಿಸಿದ್ದು, ಸಚಿವ ಲಕ್ಷ್ಮಣ ಸವದಿ ನೇತೃತ್ವದ ಸಚಿವ ಸಂಪುಟದ ಉಪ ಸಮಿತಿ ಈ ಕುರಿತು ನಿರ್ಧಾರ ಕೈಗೊಳ್ಳಲಿದೆ.

ಅಡಮಾನ ಸಾಲದ ಬಗ್ಗೆ ಸೂಕ್ತ ನಿರ್ದೇಶನ ನೀಡಲಾಗಿತ್ತು. ಆದಾಗ್ಯೂ ಈ ಸಮಸ್ಯೆ ಬಗ್ಗೆ ರಾಜ್ಯ ಲೀಡ್ ಬ್ಯಾಂಕ್ ಅಧ್ಯಕ್ಷರಾದ ಅಭಿವೃದ್ಧಿ ಆಯುಕ್ತರಿಗೆ ಶೀಘ್ರವೇ ಸಭೆ ಕರೆದು ರ್ಚಚಿಸಿ ಪರಿಹಾರ ಕಂಡುಕೊಳ್ಳಲು ಸೂಚಿಸುವುದಾಗಿ ಸಿಎಂ ಭರವಸೆ ನೀಡಿದ್ದಾರೆ.

ರಾಜ್ಯದಲ್ಲಿ ಪ್ರಸಕ್ತ ವರ್ಷ 11.90 ಲಕ್ಷ ಹೆಕ್ಟೇರ್​ನಲ್ಲಿ ಭತ್ತ ಬಿತ್ತನೆಯಾಗಿದ್ದರೂ ಉತ್ತಮ ಮಳೆಯಿಂದಾಗಿ ಇಳುವರಿ 53 ಲಕ್ಷ ಕ್ವಿಂಟಾಲ್ ನಿರೀಕ್ಷಿಸಲಾಗಿದೆ. ಸೋನಾ ಮಸೂರಿ ಭತ್ತ ಬೆಳೆಯುವ ತುಂಗಭದ್ರಾ ಹಾಗೂ ಕೃಷ್ಣಾ ಅಚ್ಚುಕಟ್ಟು ಪ್ರದೇಶದ ಉತ್ಪಾದನಾ ವೆಚ್ಚ ಕ್ವಿಂಟಾಲ್​ಗೆ 2,980 ರೂ.ಗಳಾಗಿದ್ದರೆ, ಸದ್ಯದ ಮಾರುಕಟ್ಟೆ ಸರಾಸರಿ ಕ್ವಿಂಟಾಲ್ 1,750 ರೂ.ಗಳಿದೆ ಎಂಬ ತುಲನಾತ್ಮಕ ಅಂಕಿ-ಅಂಶವನ್ನು ಮುಖ್ಯಮಂತ್ರಿಗೆ ನಿಯೋಗ ವಿವರಿಸಿತು.

ಈ ನಿಯೋಗದಲ್ಲಿ ಸಂಸದರಾದ ಸಂಗಣ್ಣ ಕರಡಿ, ರಾಜಾ ಅಮರೇಶ್ವರ ನಾಯಕ, ಬಳ್ಳಾರಿ, ಕೊಪ್ಪಳ, ರಾಯಚೂರು ಮತ್ತು ಯಾದಗಿರಿ ಜಿಲ್ಲೆಗಳ ಶಾಸಕರು, ಮಾಜಿ ಶಾಸಕರು, ಮುಖಂಡರು ಇದ್ದರು.