ಅಂಕೋಲಾ: ತಾಲೂಕಿನ ಬಾಸಗೋಡ ಹೋಬಳಿಯ ಹಡವ, ಶಿಂಗನಮಕ್ಕಿ, ಬಿಳೆಹೊಂಯ್ಗಿ ಗ್ರಾಮಗಳ ಸುಮಾರು 20 ಮನೆಗಳು ಜಲಾವೃತಗೊಂಡಿವೆ. ಸ್ಥಳೀಯ ಕಿರು ಹಳ್ಳಗಳ ತಡೆಗೋಡೆಗಳಿಂದ ನೀರು ಸರಾಗವಾಗಿ ಹರಿಯದಿರುವುದು ಮತ್ತು ಗಂಗಾವಳಿ ನದಿ ನೀರಿನ ಮಟ್ಟದಲ್ಲಿ ಏರಿಕೆಯಾಗಿರುವುದು ಮನೆಗಳಿಗೆ ನೀರು ನುಗ್ಗಲು ಕಾರಣವಾಗಿದೆ.
ಜಲಾವೃತಗೊಂಡ ಗ್ರಾಮಗಳಿಗೆ ತಹಸೀಲ್ದಾರ್ ಅನಂತ ಶಂಕರ, ಬಿಇಒ ಮಂಗಳಲಕ್ಷ್ಮೀ ಪಾಟೀಲ್, ಶಿಕ್ಷಣ ಸಂಯೋಜಕ ಬಿ.ಎಲ್. ನಾಯ್ಕ, ಕಂದಾಯ ನಿರೀಕ್ಷಕ ಮಂಜುನಾಥ ನಾಯ್ಕ, ಗ್ರಾಪಂ ಸಿಬ್ಬಂದಿ ತೆರಳಿ ಪರಿಶೀಲಿಸಿದರು. ಐದು ಕಾಳಜಿ ಕೇಂದ್ರಗಳನ್ನು ತೆರೆದು ಸಂತ್ರಸ್ತರನ್ನು ಸ್ಥಳಾಂತರಿಸಲಾಗಿದೆ.
ತಾಲೂಕಿನ ಉಳುವರೆಯಲ್ಲಿಯೂ ಕೆಲ ಮನೆಗಳು ಜಲಾವೃತಗೊಂಡಿವೆ. ಪಟ್ಟಣಕ್ಕೆ ಹೊಂದಿಕೊಂಡಿರುವ ಶಿರಕುಳಿಯ ಹಳ್ಳದ ನೀರಿನ ಮಟ್ಟದಲ್ಲಿ ಏರಿಕೆಯಾದ ಪರಿಣಾಮ ಸೇತುವೆ ಮುಳುಗಿದ್ದು ವಾಹನ ಸಂಚಾರ ಸ್ಥಗಿತವಾಗಿದೆ.
ತಾಲೂಕಿನ ಹೊನ್ನೆಬೈಲ್, ಹಳಸಿಗದ್ದೆ, ಮಂಜಗುಣಿ, ಮೇಲಿನಮಂಜಗುಣಿ ಮತ್ತು ಕೆಳಗಿನ ಮಂಜಗುಣಿ ಶಾಲೆಯಲ್ಲಿ ಕಾಳಜಿ ಕೇಂದ್ರಗಳನ್ನು ತೆರೆಯಲಾಗಿದೆ. ಜನರ ಸುರಕ್ಷತೆಗೆ 4 ದೋಣಿ, ಆಹಾರ ಸಾಮಗ್ರಿಗಳನ್ನು ಸಂಗ್ರಹಿಸಿಡಲು ಸಿದ್ದತೆ ಮಾಡಿಕೊಂಡಿದ್ದೇವೆ ಎಂದು ನೋಡಲ್ ಅಧಿಕಾರಿ ಮಂಗಳಲಕ್ಷ್ಮೀ ಪಾಟೀಲ್ ತಿಳಿಸಿದರು.