ನ್ಯೂಸ್

ಕಾಂಬೋಡಿಯಾ ಸೇನಾನೆಲೆಯಲ್ಲಿ ಸ್ಫೋಟ: 20 ಸೈನಿಕರು ಮೃತ್ಯು

ನಾಮ್ ಪೆನ್: ಕಾಂಬೋಡಿಯಾ ದೇಶದ ಪಶ್ಚಿಮ ಭಾಗದಲ್ಲಿರುವ ಸೇನಾ ನೆಲೆಯಲ್ಲಿ ಮದ್ದುಗುಂಡುಗಳು ಸ್ಫೋಟಗೊಂಡ ಪರಿಣಾಮ ಇಪ್ಪತ್ತು ಸೈನಿಕರು ಸಾವನ್ನಪ್ಪಿದ್ದಾರೆ ಎಂದು ಕಾಂಬೋಡಿಯಾ ಪ್ರಧಾನಿ ಹನ್ ಮಾನೆಟ್ ಶನಿವಾರ ತಿಳಿಸಿದ್ದಾರೆ.

‘ಈ ಘಟನೆ ಕುರಿತು ಪ್ರಧಾನಿ ಹನ್ ಮಾನೆಟ್ ಫೇಸ್‌ಬುಕ್‌ನಲ್ಲಿ ಮಾಹಿತಿ ನೀಡಿದ್ದು, ಮೃತಪಟ್ಟ ಸೈನಿಕರಿಗೆ ಸೈನಿಕರ ಸಾವಿಗೆ ತೀವ್ರ ಸಂತಾಪ ಸೂಚಿಸಿದ್ದಾರೆ. ಏಪ್ರಿಲ್ 27 ಶನಿವಾರ ಮಧ್ಯಾಹ್ನ ಕಂಪಾಂಗ್ ಸ್ಪ್ಯೂ ಪ್ರಾಂತ್ಯದ 3ನೇ ಮಿಲಿಟರಿ ಗ್ರಾಮದಲ್ಲಿ ಸ್ಫೋಟದ ಸುದ್ದಿಯನ್ನು ಕೇಳಿ ಆಘಾತವಾಗಿದೆ.

ಈ ದುರಂತದಲ್ಲಿ 20 ಸೈನಿಕರು ಮೃತಪಟ್ಟಿದ್ದು, ಹಲವು ಸೈನಿಕರು ಗಾಯಗೊಂಡಿದ್ದಾರೆ. ಘಟನೆಯಲ್ಲಿ ಮೃತಪಟ್ಟ ಸೈನಿಕರ ಆತ್ಮಕ್ಕೆ ಶಾಂತಿ ಸಿಗಲಿ ಮತ್ತು ಗಾಯಾಳು ಸೈನಿಕರು ಶೀಘ್ರವೇ ಗುಣಮುಖರಾಗಲಿ ಎಂದು ಹನ್ ಮಾನೆಟ್ ಪ್ರಾರ್ಥಿಸಿದ್ದಾರೆ.

ಮೃತಪಟ್ಟ ಸೈನಿಕರ ಅಂತ್ಯಕ್ರಿಯೆಯ ವೆಚ್ಚದ ಸಂಪೂರ್ಣ ಹೊಣೆಯನ್ನು ಸರ್ಕಾರವೇ ಭರಿಸಲಿದೆ. ಮೃತ ಸೈನಿಕರ ಕುಟುಂಬಕ್ಕೆ ತಲಾ 20 ಮಿಲಿಯನ್ ಯುಎಸ್ ಡಾಲರ್ ಮತ್ತು ಘಟನೆಯಲ್ಲಿ ಗಾಯಗೊಂಡ ಸೈನಿಕರಿಗೆ ತಲಾ 20 ಮಿಲಿಯನ್ ರಿಯೆಲ್ ಆರ್ಥಿಕ ನೆರವು ನೀಡುತ್ತೇನೆ ಎಂದು ಪ್ರಧಾನಿ ಹನ್ ಮಾನೆಟ್ ಭರವಸೆ ನೀಡಿದ್ದಾರೆ.

ಈ ಸ್ಫೋಟಕ್ಕೆ ಕಾರಣವೇನು ಎಂಬುದು ತಕ್ಷಣಕ್ಕೆ ತಿಳಿದು ಬಂದಿಲ್ಲ. ಈ ಘಟನೆಯಲ್ಲಿ ಮೃತಪಟ್ಟ ಸೈನಿಕರ ಅಂತ್ಯಕ್ರಿಯೆ ಶೀಘ್ರ ಜರುಗಿಸಲು ಪ್ರಧಾನಿ ಹುನ್ ಮಾನೆಟ್ ಅವರು ರಾಷ್ಟ್ರೀಯ ರಕ್ಷಣಾ ಸಚಿವರು ಮತ್ತು ರಾಯಲ್ ಕಾಂಬೋಡಿಯನ್ ಸಶಸ್ತ್ರ ಪಡೆಗಳ ಕಮಾಂಡರ್-ಇನ್-ಚೀಫ್ ಅವರಿಗೆ ಸೂಚಿಸಿದ್ದಾರೆ.