ತಿರುಪುರ: ತಮಿಳುನಾಡಿನ ಅವಿನಾಶಿ ಪಟ್ಟಣದ ಬಳಿ ಭೀಕರ ಅಪಘಾತದಲ್ಲಿ 20 ಮಂದಿ ಮೃತಪಟ್ಟಿದ್ದು 15ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.
ಇಂದು ಮುಂಜಾನೆ ತಿರುಪುರದ ಅವಿನಾಶಿ ಬಳಿ ಕೇರಳದ ಸರ್ಕಾರಿ ಬಸ್ ಮತ್ತು ಲಾರಿ ನಡುವೆ ಡಿಕ್ಕಿಯಾಗಿ ದುರ್ಘಟನೆ ನಡೆದಿದೆ. ಕೇರಳ ರಾಜ್ಯ ಸಾರಿಗೆ ಸಂಸ್ಥೆಗೆ ಸೇರಿದ ಬಸ್ಸು ಬೆಂಗಳೂರಿನಿಂದ ಕೇರಳದ ಎರ್ನಾಕುಲಂಗೆ ಹೋಗುತ್ತಿತ್ತು. ಮುಂಜಾನೆ 3ಗಂಟೆ ಹೊತ್ತಿಗೆ ಅವಿನಾಶಿಯ ಬಳಿ ಕಂಟೇನರ್ ಡಿಕ್ಕಿಯಾಗಿದೆ.
ಬಸ್ನಲ್ಲಿ 48 ಪ್ರಯಾಣಿಕರು ಇದ್ದರು. ಕೇರಳ ರಸ್ತೆ ಸಾರಿಗೆ ಎಂಡಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗಾಯಗೊಂಡವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಅವರ ಚಿಕಿತ್ಸೆಯ ವೆಚ್ಚವನ್ನು ಸರ್ಕಾರವೇ ಭರಿಸುವುದಾಗಿ ಕೇರಳ ಸಾರಿಗೆ ಇಲಾಖೆ ಸಚಿವ ಎ.ಕೆ.ಸಸೀಂದ್ರನ್ ತಿಳಿಸಿದ್ದಾರೆ. (ಏಜೆನ್ಸೀಸ್)