ಮುಂಬೈ: ಮಹಾರಾಷ್ಟ್ರದ ರಾಜಧಾನಿ ಮುಂಬೈ ಮಹಾನಗರದ ಲಾಲ್ಬಾಗ್ ಪ್ರದೇಶದಲ್ಲಿ ಭೀಕರ ಸಿಲಿಂಡರ್ ಸ್ಫೋಟ ಸಂಭವಿಸಿದೆ. ಸ್ಫೋಟದಲ್ಲಿ ಕನಿಷ್ಠ 20 ಜನ ಗಾಯಗೊಂಡಿರುವ ಸಾಧ್ಯತೆ ಇದೆ ಎಂದು ಎಎನ್ಐ ವರದಿ ಮಾಡಿದೆ.
ಬೃಹನ್ಮುಂಬೈ ಮುನ್ಸಿಪಲ್ ಕಾರ್ಪೊರೇಶನ್ (ಬಿಎಂಸಿ) ಮೂಲಗಳ ಮಾಹಿತಿ ಉಲ್ಲೇಖಿಸಿದ ವರದಿ ಪ್ರಕಾರ, ಸ್ಥಳಕ್ಕೆ ಅಗ್ನಿಶಾಮಕ ಸೇವೆಯ ಎರಡು ವಾಹನಗಳು ಮತ್ತು ಎರಡು ಜಂಬೋ ಟ್ಯಾಂಕರ್ಗಳನ್ನು ರವಾನಿಸಿದ್ದು, ರಕ್ಷಣೆ ಮತ್ತು ಪರಿಹಾರ ಕಾರ್ಯ ಪ್ರಗತಿಯಲ್ಲಿದೆ.
ಲಾಲ್ಬಾಗ್ ಪ್ರದೇಶದ ಗಣೇಶ ಗಲ್ಲಿಯಲ್ಲಿರುವ ಸಾರಾಭಾಯಿ ಬಿಲ್ಡಿಂಗ್ನ ಎರಡನೆ ಮಹಡಿಯಲ್ಲಿ ಬೆಳಗ್ಗೆ 7.20ಕ್ಕೆ ಈ ಸ್ಫೋಟ ಸಂಭವಿಸಿದೆ. ಈ ಕಟ್ಟಡದಲ್ಲಿ ಒಟ್ಟು ಗ್ರೌಂಡ್ ಮತ್ತು ನಾಲ್ಕು ಮಹಡಿಗಳಿವೆ. ಸ್ಫೋಟದ ತೀವ್ರತೆಗೆ ಗಾಯಗೊಂಡ 16 ಜನರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಪೈಕಿ 12 ಗಾಯಾಳುಗಳನ್ನು ಕೆಇಎಂ ಆಸ್ಪತ್ರೆಗೂ, ನಾಲ್ವರನ್ನು ಗ್ಲೋಬಲ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪಿಟಿಐ ವರದಿ ಮಾಡಿದೆ. (ಏಜೆನ್ಸೀಸ್)