ಬೆಂಗಳೂರು: ರಾಜ್ಯ ಸರ್ಕಾರಿ ನೌಕರರ ಸಾರ್ವತ್ರಿಕ ವರ್ಗಾವಣೆಯನ್ನು ಮುಂದಿನ 2 ವರ್ಷಗಳ ಕಾಲ ಮಾಡದಿರುವ ಮಹತ್ವದ ತೀರ್ವನವೊಂದನ್ನು ತೆಗೆದುಕೊಳ್ಳುವ ಬಗ್ಗೆ ಸರ್ಕಾರದ ಮಟ್ಟದಲ್ಲಿ ಗಂಭೀರ ಚರ್ಚೆ ನಡೆದಿದೆ. ಸಾರ್ವತ್ರಿಕ ವರ್ಗಾವಣೆಗೆ ಕೈ ಹಾಕಿದರೆ ಇಲಾಖೆಗಳಲ್ಲಿ 3-4 ತಿಂಗಳು ಅಭಿವೃದ್ಧಿ ಕಾರ್ಯಗಳು ಸಂಪೂರ್ಣ ಸ್ಥಗಿತವಾಗುತ್ತವೆ. ನೌಕರರು ಸ್ಥಳ ಹುಡುಕಿ ಕೊಳ್ಳುವುದರಲ್ಲಿಯೇ ಕಾಲ ಕಳೆದಿರುತ್ತಾರೆ. ಕೇಂದ್ರ ಸ್ಥಾನ ಬಿಟ್ಟು ಬೆಂಗಳೂರಿನಲ್ಲಿ ಅಲೆದಾಡುತ್ತಿರುತ್ತಾರೆ. ಆದ್ದರಿಂದ 2 ವರ್ಷಗಳ ಕಾಲ ವರ್ಗಾವಣೆಗೆ ಮುಂದಾಗದೆ ಅಭಿವೃದ್ಧಿಯತ್ತ ಆದ್ಯತೆ ನೀಡುವ ಬಗ್ಗೆ ಮುಖ್ಯಮಂತ್ರಿ ಸಚಿವಾಲಯದಲ್ಲಿ ಚಿಂತನೆ ಮಾಡಲಾಗುತ್ತಿದೆ.
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಶೇ.6 ರ ಮಿತಿಯೊಳಗೆ ವರ್ಗಾವಣೆಗೆ ಆದೇಶ ಮಾಡಲಾಗಿತ್ತು. ಆ ಮಿತಿ ಮೀರದಿದ್ದರೂ ಕೋಟ್ಯಂತರ ರೂ.ಗಳ ಕೈ ಬದಲಾವಣೆಯಾಗಿದೆ ಎಂಬ ಆರೋಪ ಕೇಳಿಬಂತು. ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ವರ್ಗಾವಣೆಯಲ್ಲಿಯೇ ಸಾವಿರ ಕೋಟಿ ರೂ. ಅಕ್ರಮ ನಡೆದಿದೆ ಎಂಬ ಆರೋಪ ಮಾಡಿದ್ದರು.
ಇದು ಸಾರ್ವತ್ರಿಕವಾಗಿ ಸರ್ಕಾರವನ್ನು ಮುಜುಗರಕ್ಕೆ ಸಿಕ್ಕಿಸಿತ್ತು. ಪ್ರತಿವರ್ಷ ವರ್ಗಾವಣೆ ಮಾಡುತ್ತ ಕೂತರೆ ಅದಕ್ಕೆ ಮಿತಿಯೇ ಇರುವುದಿಲ್ಲ. ಈ ಹಿಂದೆ ವರ್ಷವಿಡೀ ವರ್ಗಾವಣೆಗಳು ನಡೆದಿರುವ ಉದಾಹರಣೆಗಳಿವೆ. ಸರ್ಕಾರ ಅಧಿಕಾರಕ್ಕೆ ಬಂದ ನೂರು ದಿನಗಳ ಕಾಲ ವರ್ಗಾವಣೆ ನಡೆದಿದೆ. ಆದರೂ ಶಾಸಕರಿಗೆ ಪೂರ್ಣ ತೃಪ್ತಿಯಾಗಿಲ್ಲ.
ಕೌನ್ಸೆಲಿಂಗ್ ವ್ಯವಸ್ಥೆ ವಿಸ್ತರಣೆ: ಸರ್ಕಾರದಲ್ಲಿ ಈಗ ಇರುವ ನೌಕರರ ಸಂಖ್ಯೆ ಅಂದಾಜು 5.5 ಲಕ್ಷ. ಅದರಲ್ಲಿ ಆರೋಗ್ಯ, ಶಿಕ್ಷಣ ಸೇರಿದಂತೆ ಕೆಲ ಇಲಾಖೆಗಳಲ್ಲಿ ವರ್ಗಾವಣೆಗೆ ಕೌನ್ಸೆಲಿಂಗ್ ಜಾರಿಯಲ್ಲಿದೆ. ಆ ಇಲಾಖೆಗಳಲ್ಲಿಯೇ ಹೆಚ್ಚಿನ ಸಿಬ್ಬಂದಿ ಇರುವುದು. ಉಳಿದಂತೆ ಅಂದಾಜು ಲಕ್ಷ ಸಿಬ್ಬಂದಿಯಲ್ಲಿ ಶೇ.6 ರಂತೆ ವರ್ಗಾವಣೆ ಮಾಡಲಾಗಿದೆ. ಇನ್ನೂ ಕೆಲ ಪ್ರಮುಖ ಇಲಾಖೆಗಳಲ್ಲಿಯೂ ಕೌನ್ಸೆಲಿಂಗ್ ವ್ಯವಸ್ಥೆ ಜಾರಿಗೆ ತಂದರೆ ಭ್ರಷ್ಟಾಚಾರ ಆರೋಪದ ಮುಜುಗರದಿಂದ ತಪ್ಪಿಸಿಕೊಳ್ಳಬಹುದೆಂದು ಚರ್ಚೆ ನಡೆಯುತ್ತಿದೆ. ಅದರಲ್ಲೂ ಪ್ರಮುಖವಾಗಿ ಕಂದಾಯ ಇಲಾಖೆಯಲ್ಲಿ ಕೌನ್ಸೆಲಿಂಗ್ ತರಬೇಕು ಎಂಬ ಚಿಂತನೆ ಮಾಡಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ. ಕೌನ್ಸೆಲಿಂಗ್ ತರಲು ಮುಂದಾದರೆ ಅದಕ್ಕೆ ಪಟ್ಟಭದ್ರ ಹಿತಾಸಕ್ತಿಗಳು ಶಾಸಕರ ಮೂಲಕ ತಡೆ ಹಾಕುತ್ತಾರೆ. ಆದ್ದರಿಂದ ಹಂತಹಂತವಾಗಿ ಕೌನ್ಸೆಲಿಂಗ್ ತರಬೇಕು ಎಂಬ ಚರ್ಚೆ ಮಾಡಲಾಗಿದೆ.
ವರ್ಗಾವಣೆ ಎಂದರೆ ಮಧ್ಯವರ್ತಿ ಗಳ ಹಾವಳಿ ಇದ್ದೇ ಇರುತ್ತದೆ. ವಿಧಾನಸೌಧದಲ್ಲಿ ಅಲೆದಾಡುವ ಅನೇಕರಿದ್ದಾರೆ. ಪೊಲೀಸ್ ವರ್ಗಾವಣೆಯಲ್ಲಿಯೂ ಮಧ್ಯವರ್ತಿ ಗಳು ಕಂಡು ಬಂದಿದ್ದಾರೆ. ಎರಡು ವರ್ಷ ವರ್ಗಾವಣೆ ನಿಷೇಧ ಮಾಡಿಬಿಟ್ಟರೆ ಮಧ್ಯವರ್ತಿಗಳ ಹಾವಳಿಗೆ ಅಷ್ಟರಮಟ್ಟಿಗೆ ತಡೆ ಹಾಕಬಹು ದೆಂಬುದು ಸಹ ಚರ್ಚೆ ನಡೆದಿದೆ.