ಬುಲಂದ್ಶಹರ್ (ಉತ್ತರ ಪ್ರದೇಶ): ಮಹಾರಾಷ್ಟ್ರದ ಪಾಲ್ಗರ್ ಜಿಲ್ಲೆಯಲ್ಲಿ ಈಚೆಗೆ ನಡೆದ ಇಬ್ಬರು ಸಾಧುಗಳ ಭೀಕರ ಹತ್ಯೆಯ ಬಗ್ಗೆ ತನಿಖೆ ಇನ್ನೂ ಪ್ರಗತಿಯಲ್ಲಿ ಇರುವಾಗಲೇ, ಉತ್ತರ ಪ್ರದೇಶದ ಬುಲಂದ್ಶಹರ್ನಲ್ಲಿಯೂ ಇಬ್ಬರು ಸಾಧುಗಳು ಕೊಲೆ ನಡೆದಿದೆ.
ಪಾಗೋನಾ ಗ್ರಾಮದ ಶಿವನ ದೇವಾಲಯದಲ್ಲಿ ಈ ಕೊಲೆ ನಡೆದಿದೆ. ಇಂದು ಬೆಳಗ್ಗೆ ದೇಗುಲಕ್ಕೆ ಜನರು ತೆರಳಿದಾಗ ಸಾಧುಗಳ ರಕ್ತಸಿಕ್ತ ದೇಹವನ್ನು ಜನರು ನೋಡಿದ್ದು, ಪೊಲೀಸರಿಗೆ ವಿಷಯ ಮುಟ್ಟಿಸಿದ್ದಾರೆ. ಮೃತರನ್ನು ಜಗನ್ದಾಸ್ (55) ಮತ್ತು ಸೇವಾದಾಸ್ (35) ಎಂದು ಗುರುತಿಸಲಾಗಿದೆ.
ಪಾಲ್ಗರ್ನಲ್ಲಿ ಇಬ್ಬರು ಸಾಧುಗಳು ಮತ್ತು ಅವರ ಚಾಲಕನನ್ನು ಜನರು ಭೀಕರವಾಗಿ ಹತ್ಯೆ ಮಾಡಿದ್ದರು. ಇವರನ್ನು ಮಕ್ಕಳ ಕಳ್ಳರೆಂದು ಭಾವಿಸಿ ಕೊಲೆ ಮಾಡಲಾಗಿದೆ ಎನ್ನಲಾಗುತ್ತಿದ್ದರೂ ಇದರ ಸತ್ಯಾಂಶ ಬೇರೆಯದ್ದೇ ಇದೆ ಎಂಬ ಬಗ್ಗೆ ಗುಮಾನಿಯಿಂದಾಗಿ ತನಿಖೆ ಇನ್ನೂ ಪ್ರಗತಿಯಲ್ಲಿದೆ. ಪೊಲೀಸರ ಎದುರೇ ಹೊಡೆದು ಈ ಸಾಧುಗಳ ಹತ್ಯೆ ಮಾಡಲಾಗಿತ್ತು. ಇದರ ಬೆನ್ನಲ್ಲೇ ಇದೀಗ ಉತ್ತರ ಪ್ರದೇಶದಲ್ಲಿಯೂ ಸಾಧುಗಳ ಹತ್ಯೆ ನಡೆದಿರುವುದು ಆತಂಕಕ್ಕೆ ಕಾರಣವಾಗಿದೆ.
ಘಟನೆಗೆ ಸಂಬಂಧಸದಂತೆ ಒಬ್ಬನ ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಈ ವ್ಯಕ್ತಿ ಸಾಧುಗಳ ಜತೆ ಜಗಳವಾಡುತ್ತಿದ್ದುದನ್ನು ಜನರು ನೋಡಿದ್ದಾರೆ ಎನ್ನಲಾಗಿದ್ದು, ಅವರೇ ಈ ವ್ಯಕ್ತಿಯನ್ನು ಹಿಡಿದು ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ. ಮರಣೋತ್ತರ ಪರೀಕ್ಷೆಯ ವರದಿಗಾಗಿ ಕಾಯಲಾಗುತ್ತಿದೆ.
ಪೊಲೀಸರ ಪ್ರಕಾರ, ಆರೋಪಿಯು ಕೆಲ ದಿನಗಳ ಹಿಂದೆ ಸಾಧುಗಳ ಬಳಿಯಲ್ಲಿದ್ದ ಚಿಮಟಾ (ಗೆಜ್ಜೆಯಿಂದ ಕೂಡಿರುವ ಭಜನೆ ಮಾಡಲು ಉಪಯೋಗಿಸುವ ಇಕ್ಕಳ ರೀತಿಯ ಸಾಧನ) ಕದ್ದೊಯ್ದಿದ್ದ. ಅದನ್ನು ವಾಪಸ್ ಮಾಡುವಂತೆ ಸಾಧುಗಳು ಕೇಳಿದಾಗ ಇಬ್ಬರ ನಡುವೆ ಜಗಳವಾಗಿದೆ ಎನ್ನಲಾಗಿದೆ.
ಆದರೆ ಈ ಬಗ್ಗೆ ಸತ್ಯಾಸತ್ಯತೆ ಹೊರಬರಬೇಕಿದೆ. ಈ ಹಿನ್ನೆಲೆಯಲ್ಲಿ ಸೂಕ್ತ ತನಿಖೆ ನಡೆಸುವಂತೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಪೊಲೀಸರಿಗೆ ನಿರ್ದೇಶಿಸಿದ್ದಾರೆ. (ಏಜೆನ್ಸೀಸ್)