ನ್ಯೂಸ್

2 ಹೊಸ ಭತ್ತದ ತಳಿಗಳ ಲೋಕಾರ್ಪಣೆ; ರೋಗ ನಿರೋಧಕ ಗುಣ | ಪ್ರತಿಕೂಲ ಹವಾಮಾನ ಸಹಿಸುವ ಶಕ್ತಿ | ಶೇ.30 ಹೆಚ್ಚು ಇಳುವರಿ

ನವದೆಹಲಿ: ದೇಶದಲ್ಲೇ ಮೊದಲ ಬಾರಿಗೆ ಜಿನೋಮ್ ಎಡಿಟಿಂಗ್ ಮೂಲಕ ಅಭಿವೃದ್ಧಿಪಡಿಸಿರುವ ಭತ್ತದ ಎರಡು ಹೊಸ ತಳಿಗಳನ್ನು ಕೇಂದ್ರ ಕೃಷಿ ಸಚಿವ ಶಿವರಾಜ್​ಸಿಂಗ್ ಚೌಹಾಣ್ ಭಾನುವಾರ ಲೋಕಾರ್ಪಣೆ ಮಾಡಿದ್ದಾರೆ.

ಭಾರತೀಯ ಕೃಷಿ ಸಂಶೋಧನಾ ಸಂಸ್ಥೆ (ಇಂಡಿಯನ್ ಕೌನ್ಸಿಲ್ ಆಫ್ ಅಗ್ರಿಕಲ್ಚರಲ್ ರೀಸರ್ಚ್- ಐಸಿಎಆರ್) ಈ ತಳಿಗಳನ್ನು ಅಭಿವೃದ್ಧಿಪಡಿಸಿದ್ದು, ಅವುಗಳಿಗೆ ಡಿಆರ್​ಆರ್ ಧನ್ 100 (ಕಮಲಾ) ಮತ್ತು ಪೂಸಾ ಡಿಎಸ್​ಟಿ ರೈಸ್ 1 ಎಂದು ಹೆಸರಿಡಲಾಗಿದೆ. ದೇಶದಲ್ಲಿ ಅತಿ ಹೆಚ್ಚಾಗಿ ಬೆಳೆಯುವ ಸಾಂಬಾ ಮಹಸೂರಿ- ಬಿಪಿಟಿ5204 ಮತ್ತು ಕೊಟ್ಟೋಂಡೊರಾ ಸನ್ನಾಲು- ಎಂಟಿಯು1010 ಎಂಬ ಭತ್ತದ ತಳಿಗಳನ್ನು ಬಳಸಿ ಈ ಹೊಸ ತಳಿಗಳನ್ನು ತಯಾರಿಸಲಾಗಿದೆ. ಮೂಲ ಭತ್ತದ ವಂಶವಾಹಿ ಗುಣಗಳನ್ನು ಉಳಿಸಿಕೊಂಡೇ ಈ ತಳಿಗಳನ್ನು ರೂಪಿಸಲಾಗಿದೆ. ಇವು ರೋಗ ನಿರೋಧಕ ಗುಣ ಹೊಂದಿದ್ದು, ಪ್ರತಿಕೂಲ ಹವಾಮಾನವನ್ನೂ ಸಹಿಸಿಕೊಳ್ಳುತ್ತವೆ. ಶೇ. 30ರಷ್ಟು ಹೆಚ್ಚು ಫಸಲು ನೀಡುತ್ತವೆ. ನೀರಿನ ಉಳಿತಾಯಕ್ಕೆ ಮತ್ತು ಹಸಿರುಮನೆ ಅನಿಲ ಹೊರಸೂಸುವಿಕೆಯ ಪ್ರಮಾಣ ತಗ್ಗಿಸುವುದಕ್ಕೂ ಇವು ನೆರವಾಗುತ್ತವೆ.

ಶೀಘ್ರವೇ ರೈತರಿಗೆ ವಿತರಣೆ: ಸದ್ಯದಲ್ಲೇ ದೇಶಾದ್ಯಂತ ರೈತರಿಗೆ ಕೇಂದ್ರ ಸರ್ಕಾರ ಈ ತಳಿಗಳನ್ನು ವಿತರಿಸಲಿದೆ. ಅತಿ ಹೆಚ್ಚು ಭತ್ತ ಬೆಳೆಯುವ ಕರ್ನಾಟಕ, ತಮಿಳುನಾಡು, ಆಂಧ್ರ, ತೆಲಂಗಾಣ, ಕೇರಳ, ಪುದುಚೇರಿ, ಬಿಹಾರ, ಛತ್ತೀಸಗಢ, ಮಹಾರಾಷ್ಟ್ರ, ಮಧ್ಯಪ್ರದೇಶ, ಒಡಿಶಾ, ಜಾರ್ಖಂಡ್, ಬಿಹಾರ, ಪಶ್ಚಿಮ ಬಂಗಾಳ ಮುಂತಾದ ರಾಜ್ಯಗಳ ರೈತರಿಗೆ ಈ ತಳಿಗಳನ್ನು ಕೇಂದ್ರ ಸರ್ಕಾರ ವಿತರಿಸಲಿದೆ.

ನವದೆಹಲಿಯಲ್ಲಿ ಭಾನುವಾರ 2 ಹೊಸ ಭತ್ತದ ತಳಿಗಳನ್ನು ಕೇಂದ್ರ ಕೃಷಿ ಸಚಿವ ಶಿವರಾಜ್​ಸಿಂಗ್ ಚೌಹಾಣ್ ಬಿಡುಗಡೆ ಮಾಡಿದರು. ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ಏನಿದು ಜಿನೋಮ್ ಎಡಿಟಿಂಗ್?

ಎಲ್ಲ ಜೀವಿ ಗಳ ಪ್ರತಿಯೊಂದು ಜೀವಕೋಶದಲ್ಲೂ ತಳಿಸೂತ್ರವಿರುತ್ತದೆ. ಈ ಜೀವಕೋಶದ ಡಿಎನ್​ಎಯನ್ನು ಕೃತಕವಾಗಿ ಬದಲಿಸುವ ವಿಧಾನಕ್ಕೆ ಜಿನೋಮ್ ಎಡಿಟಿಂಗ್ ಎನ್ನುತ್ತಾರೆ. ಜೀವಿಯ ವಂಶವಾಹಿಯನ್ನು ತೆಗೆದು ಅದನ್ನು ಮತ್ತೊಂದು ಜೀವಿಗೆ ಸೇರಿಸಿ ಅದರ ದೈಹಿಕ ಗುಣಲಕ್ಷಣಗಳಲ್ಲಿ ಬದಲಾವಣೆ ತರಬಹುದು. ಇದು ಪ್ರಾಣಿಗಳು, ಸಸ್ಯಗಳು ಮತ್ತು ಸೂಕ್ಷ್ಮಾಣುಜೀವಿ ಮೂರಕ್ಕೂ ಅನ್ವಯವಾಗುತ್ತದೆ. ಜಿನೋಮ್ ಎಡಿಟಿಂಗ್ ಮೂಲಕ ನಿಸರ್ಗದಲ್ಲಿ ಕಾಣದೇ ಇರುವ ಹೊಸ ಜೀವಿ ಅಥವಾ ಸಸ್ಯಗಳ ತಳಿ ಸೃಷ್ಟಿಸಬಹುದಾಗಿದೆ.

ಏನೇನು ಅನುಕೂಲ?

ಡಿಆರ್​ಆರ್ ಧನ್ 100 ತಳಿಯು ಮೂಲ ಭತ್ತಕ್ಕಿಂತ 20 ದಿನ ಮೊದಲೇ ಕಟಾವಿಗೆ ಬರುತ್ತದೆ. ಬೇಗ ಕೊಯ್ಲು ಮಾಡುವುದರಿಂದ ವರ್ಷದಲ್ಲಿ ಮೂರು ಫಸಲು ತೆಗೆಯಲು ಅನುಕೂಲವಾಗಲಿದೆ. ಜೊತೆಗೆ, ಬೇರೆ ಬೆಳೆ ಬೆಳೆಯಲು, ಬಹು ಬೆಳೆಗಳ ಬಗ್ಗೆ ಗಮನ ಹರಿಸಲು ರೈತರಿಗೆ ಸಾಧ್ಯವಾಗುತ್ತದೆ. ಈ ಭತ್ತ ಕಡಿಮೆ ಅವಧಿಯಲ್ಲಿ ಕಟಾವಿಗೆ ಬರುವುದರಿಂದ ರೈತರಿಗೆ ಹಲವು ಪ್ರಯೋಜನಗಳಿವೆ.

ಸಚಿವರು ಹೇಳಿದ್ದೇನು?

ಕೃಷಿ ಕ್ಷೇತ್ರದ ಅಭಿವೃದ್ಧಿಯಾಗದ ಹೊರತು ಭಾರತ ಅಭಿವೃದ್ಧಿ ಹೊಂದಲು ಸಾಧ್ಯವಿಲ್ಲ. ಇದಕ್ಕಾಗಿ ಹೊಸಹೊಸ ತಂತ್ರಜ್ಞಾನಗಳನ್ನು ಬಳಸಬೇಕಿದೆ. ವಿಜ್ಞಾನಿಗಳು ವಿವಿಧ ತಳಿಯ ದ್ವಿದಳ ಧಾನ್ಯಗಳು ಮತ್ತು ಎಣ್ಣೆ ಬೀಜಗಳನ್ನು ಅಭಿವೃದ್ಧಿಪಡಿಸಬೇಕು. ಆ ಮೂಲಕ ಆಮದು ಪ್ರಮಾಣವನ್ನು ತಗ್ಗಿಸಬೇಕು ಎಂದು ಸಚಿವ ಶಿವರಾಜ್​ಸಿಂಗ್ ಚೌಹಾಣ್ ಹೇಳಿದರು.