ಗಾಂಧಿನಗರ: ಬಹುದೊಡ್ಡ ರಾಷ್ಟ್ರೀಯ ಪಕ್ಷವಾದ ಕಾಂಗ್ರೆಸ್ಗೆ ಶಾಕ್ ಮೇಲೆ ಶಾಕ್ ಎದುರಾಗುತ್ತಿದೆ. ಮಧ್ಯಪ್ರದೇಶದಲ್ಲಿ 22 ಶಾಸಕರು ರಾಜೀನಾಮೆ ನೀಡಿದ ಬೆನ್ನಲ್ಲೇ ಗುಜರಾತಿನಲ್ಲಿ ಇನ್ನಿಬ್ಬರು ಶಾಸಕರು ಕಾಂಗ್ರೆಸ್ಗೆ ಗುಡ್ ಬೈ ಹೇಳಿದ್ದಾರೆ.
ಶಾಸಕರಾದ ಅಲ್ಪೇಶ್ ಠಾಕೂರ್ ಮತ್ತು ಧವಲ್ಸಿನ್ಹಾ ಜಲಾ ವಿಧಾನಸಭಾ ಸ್ಥಾನಕ್ಕೆ ಶುಕ್ರವಾರ ರಾಜೀನಾಮೆ ನೀಡಿದ್ದಾರೆ. ಅಲ್ಲದೆ, ರಾಜ್ಯಸಭಾ ಸ್ಥಾನಕ್ಕಾಗಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯ ವಿರುದ್ಧವೇ ಅಡ್ಡಮತದಾನ ಮಾಡಿದ್ದಾರೆ.
ನನ್ನ ಮತದ ಮೇಲೆ ಸಾಕಷ್ಟು ಸಮಸ್ಯೆಯನ್ನು ಸೃಷ್ಟಿಸಲು ಕಾಂಗ್ರೆಸ್ ವೀಕ್ಷಕಗಾರ ಯತ್ನಿಸಿದರು. ಹೀಗಾಗಿ ನಾನು ಯಾರಿಗೆ ಮತ ಚಲಾಯಿಸಬೇಕು ಎಂದು ಅರ್ಥ ಮಾಡಿಕೊಂಡೆ ಎಂದು ಠಾಕೂರ್ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ. ಅಲ್ಲದೆ, ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ. ಉತ್ತರ ಗುಜರಾತಿನ ರಾಧಾಂಪುರ ಕ್ಷೇತ್ರದಿಂದ ಉಪಚುನಾವಣೆಯಲ್ಲಿ ಸ್ಪರ್ಧಿಸುತ್ತೇನೆ ಎಂದಿದ್ದಾರೆ.
ಠಾಕೂರ್ಗೆ ಆಪ್ತರಾಗಿರುವ ಧವಲ್ ಜಲಾ ಕೂಡ ಅಡ್ಡ ಮತದಾನ ಮಾಡಿದ್ದು, ಶಾಸಕ ಸ್ಥಾನಕ್ಕೂ ರಾಜೀನಾಮೆ ನೀಡಿದ್ದಾರೆ. ಮೂಲಗಳ ಪ್ರಕಾರ ಶಾಸಕರಿಬ್ಬರು ಶೀಘ್ರದಲ್ಲೇ ಬಿಜೆಪಿ ಸೇರಲಿದ್ದು, ತಂತಮ್ಮ ಕ್ಷೇತ್ರಗಳಿಂದ ಉಪಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ ಎಂದು ತಿಳಿದುಬಂದಿದೆ.
ಲೋಕಸಭೆಗೆ ಆಯ್ಕೆಯಾದ ಬಿಜೆಪಿ ನಾಯಕ ಅಮಿತ್ ಷಾ ಮತ್ತು ನಾಯಕಿ ಸ್ಮೃತಿ ಇರಾನಿ ಅವರಿಂದ ಖಾಲಿಯಾದ ರಾಜ್ಯಸಭಾ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ನಾಯಕರಿಬ್ಬರು ಅಡ್ಡ ಮತದಾನ ಮಾಡಿದ್ದಾರೆ. (ಏಜೆನ್ಸೀಸ್)