ನ್ಯೂಸ್

VIDEO: ಅಸ್ಸಾಂನ ತೈಲ ಬಾವಿಯಿಂದ ಹೊಮ್ಮುತ್ತಿದೆ ಜ್ವಾಲೆ: ಇಬ್ಬರು ಅಗ್ನಿಶಾಮಕ ಸಿಬ್ಬಂದಿ ಬಲಿ

ತಿನ್​ಸುಕಿಯಾ: ಅಸ್ಸಾಂನ ತಿನ್​ಸುಕಿಯಾ ಜಿಲ್ಲೆಯಲ್ಲಿ ಆಲ್​ ಇಂಡಿಯಾ ಲಿಮಿಟೆಡ್​ಗೆ ಸೇರಿದ ತೈಲ ಬಾವಿಯಿಂದ ಅನಿಲ ಸೋರಿಕೆಯಾಗಿ ಉಂಟಾಗಿರುವ ಅಗ್ನಿ ಜ್ವಾಲೆಗೆ ಮಂಗಳವಾರ ಇಬ್ಬರು ಅಗ್ನಿಶಾಮಕ ಸಿಬ್ಬಂದಿ ಬಲಿಯಾಗಿದ್ದಾರೆ.

ಮಂಗಳವಾರ ಬಾವಿಯೊಳಗಿಂದ ಜ್ವಾಲೆ ಬಾನೆತ್ತರ ಹೊಮ್ಮಿದ್ದು, ಅದರ ವಿಡಿಯೋ ವೈರಲ್ ಆಗಿದೆ. ಬಾಘಜನ್ ತೈಲ ಬಾವಿಯಲ್ಲಿ ಕಳೆದ ಎರಡು ವಾರಗಳಿಂದ ಅನಿಲ ಸೋರಿಕೆ ಆಗುತ್ತಿತ್ತು. ಈ ಬಗ್ಗೆ ಅಧಿಕೃತರಿಗೆ ತಿಳಿಸಲಾಗಿದ್ದು, ಅದನ್ನು ನಿಯಂತ್ರಿಸುವ ಪ್ರಯತ್ನ ನಡೆದಿತ್ತು. ಮಂಗಳವಾರ ಇದ್ದಕ್ಕಿದಂತೆ ಜ್ವಾಲೆ ಹೊರಹೊಮ್ಮಿದ್ದರಿಂದಾಗಿ ಇಬ್ಬರು ಮೃತಪಟ್ಟಿದ್ದು, ಆರು ಜನ ಗಾಯಗೊಂಡಿದ್ದಾರೆ. ಬೆಂಕಿ ನಂದಿಸುವುದಕ್ಕೆ ತೀವ್ರ ಪ್ರಯತ್ನ ಮುಂದುವರಿದಿದೆ ಎಂದು ಸರ್ಕಾರ ಹೇಳಿದೆ.

ಅಸ್ಸಾಂನ ಪರಿಸರ ಮತ್ತು ಅರಣ್ಯ ಸಚಿವ ಸುಕ್ಲಬೈದ್ಯ ಈ ಕುರಿತು ಪ್ರತಿಕ್ರಿಯಿಸಿದ್ದು, ಘಟನೆಯಲ್ಲಿ ಆರು ಜನ ಗಾಯಗೊಂಡಿದ್ದಾರೆ. ಪರಿಸ್ಥಿತಿ ನಿಯಂತ್ರಿಸುವುದಕ್ಕೆ ಆರರಿಂದ ಏಳು ದಿನ ಬೇಕು ಎಂದು ಆಯಿಲ್ ಇಂಡಿಯಾ ಲಿಮಿಟೆಡ್​ ಅಧಿಕೃತರು ಹೇಳಿದ್ದಾರೆ. ಇದು ನಮ್ಮನ್ನು ಚಿಂತೆಗೀಡುಮಾಡಿದೆ ಎಂದು ಹೇಳಿಕೊಂಡಿದ್ದಾರೆ.

ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡ ಎನ್​ಡಿಆರ್​ಎಫ್​, ರಾಜ್ಯ ವಿಪತ್ತು ನಿರ್ವಹಣಾ ತಂಡ ಸ್ಥಳದಲ್ಲಿದ್ದು ಬೆಂಕಿ ನಂದಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿವೆ. ಈ ಪ್ರದೇಶದಲ್ಲಿ ಅರೆಸೇನಾ ಪಡೆಗಳ ನಿಗಾ ಇದೆ. ತೈಲ ಬಾವಿಯಿಂದ ಹೊರಹೊಮ್ಮುತ್ತಿರುವ ಜ್ವಾಲೆ 30 ಕಿ.ಮೀ. ದೂರದ ತನಕವೂ ಕಾಣಿಸುತ್ತಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. (ಏಜೆನ್ಸೀಸ್)