ನ್ಯೂಸ್

ಮದ್ವೆ ಆಗೋಕೆ ಒಂದು ಹುಡ್ಗಿ ಹುಡುಕಿ ಕೊಡಿ ಎಂದು ಪೊಲೀಸರ ಮೊರೆಹೋದ ಯುವಕ; ಕಾರಣ ಕೇಳಿದ್ರೆ ನಿಮಗೆ ಅಯ್ಯೋ ಅನಿಸಬಹುದು!

ನವದೆಹಲಿ: ಸಾಮಾನ್ಯವಾಗಿ ಯಾರಾದರೂ ಕಳೆದುಹೋದರೆ, ನಾಪತ್ತೆಯಾದರೆ ಅಂಥವರನ್ನು ಹುಡುಕಿಕೊಡಿ ಎಂದು ಸಂಬಂಧಪಟ್ಟವರು ಪೊಲೀಸರ ಮೊರೆಹೋಗುತ್ತಾರೆ. ಆದರೆ ಇಲ್ಲೊಬ್ಬ ಯುವಕ ತನಗೆ ಮದುವೆಯಾಗಲು ಹುಡುಗಿಯೊಂದನ್ನು ಹುಡುಕಿ ಕೊಡಿ ಎಂದು ಪೊಲೀಸರನ್ನು ಕೇಳಿಕೊಂಡಿದ್ದಾನೆ. ದಯವಿಟ್ಟು ಇದನ್ನು ಒಂದು ಸಮಾಜ ಸೇವೆ ಎಂದುಕೊಂಡು ಸಹಾಯ ಮಾಡಿ ಎಂಬುದಾಗಿಯೂ ಬೇಡಿಕೊಂಡಿದ್ದಾನೆ.

ಹೀಗೆ ವಧುವನ್ನು ಹುಡುಕಿಕೊಡಿ ಎಂದು ಠಾಣೆಯ ಮೆಟ್ಟಿಲೇರಿರುವ ಯುವಕನ ಹೆಸರು ಅಜಿಮ್ ಮನ್ಸೂರಿ. 26 ವರ್ಷದ ಈತ ಕಳೆದ ಕೆಲವು ವರ್ಷಗಳಿಂದ ಮದುವೆಯಾಗಲು ಯಾವುದೇ ಹುಡುಗಿ ಒಪ್ಪದ್ದರಿಂದ ವಿಪರೀತ ಬೇಸರಕ್ಕೆ ಒಳಗಾಗಿ ಈಗ ಪೊಲೀಸರ ಸಹಾಯ ಕೋರಿದ್ದಾನೆ. ಅಷ್ಟಕ್ಕೂ ಈತನಿಗೆ ಮದುವೆಯಾಗಲು ಹುಡುಗಿ ಸಿಗದಿರುವುದಕ್ಕೆ ಕಾರಣ ಈತನ ಎತ್ತರ. ಅರ್ಥಾತ್ ಬರೀ ಎರಡೇ ಅಡಿ ಎತ್ತರ ಇರುವ ಈತನನ್ನು ಇದುವರೆಗೆ ನೋಡಿರುವ ಯಾವ ಹುಡುಗಿಯೂ ಮದುವೆಯಾಗಲು ಒಪ್ಪಿಲ್ಲ.

ಉತ್ತರಪ್ರದೇಶದ ಕೈರಾನ ಎಂಬಲ್ಲಿನ ಅಜಿಮ್ ಮನ್ಸೂರಿ, ಮದುವೆಯಾಗಲು ಕಳೆದ ಐದು ವರ್ಷಗಳಿಂದ ಹುಡುಗಿಯನ್ನು ಹುಡುಕುತ್ತಿದ್ದಾನೆ. ಯಾವುದಾದರೂ ಹುಡುಗಿಯನ್ನು ನೋಡಲು ಹೋಗಿ ಎಲ್ಲ ಒಪ್ಪಿಗೆಯಾದರೂ ಈತ ಕುಳ್ಳ ಎಂಬ ಕಾರಣಕ್ಕೆ ಎಲ್ಲರೂ ಈತನನ್ನು ಮದುವೆಯಾಗಲು ನಿರಾಕರಿಸಿದ್ದಾರೆ.

ಐವರು ಮಕ್ಕಳಲ್ಲಿ ಅಜೀಮ್​ ಕಿರಿಯವನಾಗಿದ್ದು, ಕುಳ್ಳ ಎಂದು ಗೆಳೆಯರು ತಮಾಷೆ ಮಾಡುತ್ತಿದ್ದುದರಿಂದ ಐದನೇ ತರಗತಿಗೇ ವಿದ್ಯಾಭ್ಯಾಸವನ್ನು ಮೊಟಕುಗೊಳಿಸಿದ್ದ. ಸದ್ಯ ಸೋದರರೊಂದಿಗೆ ಸೌಂದರ್ಯವರ್ಧಕದ ಅಂಗಡಿ ನಡೆಸುತ್ತಿದ್ದಾನೆ. ಸದ್ಯ ಹುಡುಗಿಯನ್ನು ಹುಡುಕಿ ಹುಡುಕಿ ಬೇಸತ್ತು ರೋಸಿಹೋಗಿರುವ ಅಜೀಮ್​, ಎಲ್ಲರಂತೆ ನಾನೂ ಜೀವನಸಂಗಾತಿಯನ್ನು ಹೊಂದಬೇಡವೇ? ಸಂಗಾತಿ ಸಿಗದೆ ನನಗೆ ನಿದ್ರೆಯೂ ಬರುತ್ತಿಲ್ಲ ಎಂದು ಅಲವತ್ತುಕೊಂಡಿದ್ದಾನೆ.

ತನಗೆ ಹುಡುಗಿಯನ್ನು ಕಂಡುಕೊಳ್ಳಲು ನೆರವಾಗುವಂತೆ ಈ ಹಿಂದೆಯೇ ಅಜೀಮ್ ಪೊಲೀಸರ ಬಳಿ ಕೇಳಿಕೊಂಡಿದ್ದ. ಮಾತ್ರವಲ್ಲ ಇದೇ ವಿಷಯವಾಗಿ ಈಗಾಗಲೇ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆಲ್ಲ ಪತ್ರ ಬರೆದಿರುವ ಅಜೀಮ್​, ಅಲ್ಲಿಂದ ಉತ್ತರ ಬರದ ಹಿನ್ನೆಲೆಯಲ್ಲಿ ಪುನಃ ಪೊಲೀಸರ ಬಳಿಗೆ ಹೋಗಿ ಸಹಾಯ ಮಾಡುವಂತೆ ಕೋರಿಕೊಂಡಿದ್ದಾನೆ. (ಏಜೆನ್ಸೀಸ್)