ನ್ಯೂಸ್

ಆಟವಾಡಲು ಕಾಡಿಗೆ ಹೋಗಿ ಮರಳಿ ಬಂದ ಮಕ್ಕಳಲ್ಲಿ ಇಬ್ಬರು ಸಾವು, ಇನ್ನಿಬ್ಬರ ಆರೋಗ್ಯ ಸ್ಥಿತಿ ಗಂಭೀರ...ವಾಮಾಚಾರವೆಂದ ಪಾಲಕರು..!

ಮಾಲ್ಡಾ: ಒಂದೇ ಗ್ರಾಮದ ಅಕ್ಕಪಕ್ಕದ ಮನೆಯ ಇಬ್ಬರು ಮಕ್ಕಳು ಮೃತಪಟ್ಟಿದ್ದು ಇನ್ನಿಬ್ಬರ ಆರೋಗ್ಯ ಸ್ಥಿತಿ ಹದಗೆಟ್ಟು ಆಸ್ಪತ್ರೆಗೆ ದಾಖಲಾಗಿದ್ದಾರೆ.

ತಮ್ಮ ಮಕ್ಕಳ ಮೇಲೆ ವಾಮಾಚಾರ ಮಾಡಿದ್ದರಿಂದಲೇ ಈ ಪರಿಸ್ಥಿತಿ ಬಂದಿದೆ ಎಂದು ಅವರ ಪಾಲಕರು ದೂರುತ್ತಿದ್ದಾರೆ.

ಘಟನೆ ನಡೆದಿದ್ದು ಪಶ್ಚಿಮಬಂಗಾಳದ ಮಾಲ್ಡಾ ಜಿಲ್ಲೆಯ ಕಡಮ್ತಲಿ ಗ್ರಾಮದಲ್ಲಿ. ಮೃತಪಟ್ಟ ಗಂಡುಮಕ್ಕಳಲ್ಲಿ ಒಬ್ಬನಿಗೆ ಐದು ವರ್ಷ, ಇನ್ನೋರ್ವನಿಗೆ ಏಳು ವರ್ಷ. ಹಾಗೇ ಅನಾರೋಗ್ಯಕ್ಕೀಡಾದ ಇಬ್ಬರು ಬಾಲಕಿಯರು ಆಸ್ಪತ್ರೆಗೆ ದಾಖಲಾಗಿದ್ದು ಒಬ್ಬಳಿಗೆ ಮೂರು ವರ್ಷ, ಮತ್ತೊಬ್ಬಳಿಗೆ ಆರುವರ್ಷ ಎನ್ನಲಾಗಿದೆ.

ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ ಎಂದು ಳಿಸಿದ್ದಾರೆ.

ಈ ಎಲ್ಲ ಮಕ್ಕಳ ಪಾಲಕರು ಕೂಲಿ ಕಾರ್ಮಿಕರಾಗಿದ್ದು ತಮ್ಮ ಮಕ್ಕಳಿಗೆ ಮಾಟ ಮಾಡಿಸಲಾಗಿದೆ ಎಂದು ಆರೋಪಿಸುತ್ತಿದ್ದಾರೆ. ಎಂದಿನಂತೆ ಅವರೆಲ್ಲರೂ ಕೂಡಿ ಹತ್ತಿರದ ಕಾಡಿಗೆ ಆಟವಾಡಲು ಹೋಗಿದ್ದರು. ವಾಪಸ್​ ಬರುವಷ್ಟರಲ್ಲಿ ಎಲ್ಲರ ಸ್ಥಿತಿಯೂ ಗಂಭೀರವಾಗಿತ್ತು ಎಂದು ಹೇಳಿದ್ದಾರೆ.

ಪ್ರಾಥಮಿಕ ತನಿಖೆಯ ಪ್ರಕಾರ ಮಕ್ಕಳು ಕಾಡಿನಲ್ಲಿ ವಿಷಪೂರಿತ ಹಣ್ಣು ತಿಂದ ಕಾರಣ ಹೀಗಾಗಿದೆ ಎನ್ನಲಾಗಿದೆ. ಆದರೆ ಪಾಲಕರು ಒಪ್ಪುತ್ತಿಲ್ಲ. ಟಿಎಂಸಿ ಸ್ಥಳೀಯ ಎಂಎಲ್​ಎ ದೀಪಾಲಿ ಬಿಸ್ವಾನ್​ ಶನಿವಾರ ಗ್ರಾಮಕ್ಕೆ ಭೇಟಿ ನೀಡಿ ಮೃತ ಮಕ್ಕಳ ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ. ಅಲ್ಲದೆ ಆಸ್ಪತ್ರೆಗೂ ತೆರಳಿ ಮಕ್ಕಳ ಆರೋಗ್ಯ ವಿಚಾರಿಸಿದ್ದಾರೆ.

ಮೂಢನಂಬಿಕೆಯಿಂದಲೇ ಮಕ್ಕಳ ಜೀವ ಹೋಗಿದೆ. ಪಾಲಕರು ಮಕ್ಕಳನ್ನು ಕೂಡಲೇ ಆಸ್ಪತ್ರೆಗೆ ಸೇರಿಸಿದ್ದರೆ ಅವರ ಜೀವ ಉಳಿಯುತ್ತಿತ್ತು. ಇಂತಹ ಮೂಢ ನಂಬಿಕೆಗಳನ್ನು ಬಿಡಿ ಎಂದು ಸ್ಥಳೀಯರಲ್ಲಿ ಕೇಳಿಕೊಳ್ಳುತ್ತೇನೆ ಎಂದು ಹೇಳಿದ್ದಾರೆ.(ಏಜೆನ್ಸೀಸ್​)