ರಾಯ್ಪುರ(ಛತ್ತೀಸ್ಗರ್): ಕೋವಿಡ್ ಹೆಸರು ಕೇಳಿದ್ರೆ ಸಾಕು ಜನ ಕನಸಲ್ಲೂ ಬೆಚ್ಚಿಬೀಳ್ತಾರೆ. ಇಂತಹ ಸೋಂಕಿನ ಹೆಸರನ್ನೇ ಅಸ್ತ್ರವನ್ನಾಗಿಸಿಕೊಂಡ ಕಾಮುಕರಿಬ್ಬರು ಮುಗ್ಧ ಬಾಲಕಿಯೊಬ್ಬಳ ಬದುಕನ್ನೇ ನಾಶ ಮಾಡಿದ್ದಾರೆ.
ದೇಶದೆಲ್ಲೆಡೆ ಕೋವಿಡ್ ಮರಣ ಮೃದಂಗ ಬಾರಿಸುತ್ತಿದೆ. ಮಹಾಮಾರಿ ಕರೊನಾ ಸೋಂಕಿನಿಂದ ಪಾರಾದರೆ ಸಾಕಪ್ಪ ಎನ್ನುತ್ತ ಜೀವಭಯದಲ್ಲೇ ಜನರು ದಿನದೂಡುತ್ತಿದ್ದಾರೆ. ಇಂತಹ ಸಂದಿಗ್ಧ ಪರಿಸ್ಥಿತಿಯನ್ನೇ ಬಂಡವಾಳ ಮಾಡಿಕೊಂಡ ಕಿಡಿಗೇಡಿಗಳಿಬ್ಬರು ಪರಿಚಯಸ್ಥ ಬಾಲಕಿ ಮೇಲೆ ಅತ್ಯಾಚಾರವೆಸಗಿದ್ದಾರೆ. ಅಂದಹಾಗೆ ಆರೋಪಿಗಳು ಬಾಲಕಿಯನ್ನು ಪುಸಲಾಯಿಸಿ ಕರೊದೊಯ್ದ ಪರಿ ಕೇಳಿದ್ರೆ ಎಂತಹವರೂ ಅರೆಕ್ಷಣ ಶಾಕ್ ಆಗೋದು ಗ್ಯಾರಂಟಿ.
ಇದನ್ನೂ ಓದಿರಿಪಕ್ಕದ ಮನೆಯವರ ಆಸ್ತಿ ಕಬಳಿಸಲು ಬಾಲಕಿ ಮೇಲೆ ಅತ್ಯಾಚಾರ !
ಬಾಲಕಿಯ ಮನೆಗೆ ಬಂದ ಆರೋಪಿಗಳಿಬ್ಬರು, 'ನಿನಗೆ ಕೋವಿಡ್ ಸೋಂಕು ಇದೆ' ಎಂದು ಆಕೆಗೆ ಭಯಹುಟ್ಟಿಸಿದ್ದಾರೆ. ಅಲ್ಲದೇ, ಈ ಸೋಂಕಿಗೆ ತಾವೇ ಚಿಕಿತ್ಸೆ ಕೊಡಿಸುವುದಾಗಿ ನಂಬಿಸಿದ ಆರೋಪಿಗಳು, ಆಕೆಯನ್ನು ಹೊರಗೆ ಕರೆದೊಯ್ದು ಅತ್ಯಾಚಾರವೆಸಗಿದ್ದಾರೆ.
ಈ ಪ್ರಕರಣದ ಬಗ್ಗೆ ಮಾಹಿತಿ ನೀಡಿರುವ ಸಹಾಯಕ ಪೊಲೀಸ್ ವರಿಷ್ಠಾಧಿಕಾರಿ ಪ್ರತಿಭಾ ಪಾಂಡೆ, 'ಆರೋಪಿಗಳು ಬಾಲಕಿಗೆ ಕೋವಿಡ್ -19 ಪಾಸಿಟಿವ್ ಇದೆ ಎಂದು ಹೇಳಿ ಹತ್ತಿರದ ಆಸ್ಪತ್ರೆಯಲ್ಲಿ ಔಷಧ ಕೊಡಿಸುವ ನೆಪದಲ್ಲಿ ಆಕೆಯನ್ನು ಕರೆದೊಯ್ದಿದ್ದರು. ಆಕೆಯ ಪಾಲಕರು ಮನೆಗೆ ಬಂದಾಗ ಬಾಲಕಿ ಇರಲಿಲ್ಲ. ಇದೇ ಊರಿನ ಇಬ್ಬರು ಕೋವಿಡ್ಗೆ ಔಷಧ ಕೊಡಿಸುವುದಾಗಿ ಸಹೋದರಿಯನ್ನು ಕರೆದೊಯ್ದಿರುವುದಾಗಿ ಬಾಲಕಿಯ ಸಹೋದರ ಪಾಲಕರಿಗೆ ತಿಳಿಸಿದ್ದ. ಅಷ್ಟರಲ್ಲಿ ಬಾಲಕಿ ಮನೆಗೆ ವಾಪಸ್ ಬಂದಿದ್ದು, ಆಕೆ ಮೇಲೆ ಅತ್ಯಾಚಾರ ನಡೆದಿರುವುದು ಗೊತ್ತಾಗಿದೆ. ಬಾಲಕಿಯ ತಾಯಿ ಈ ಬಗ್ಗೆ ದೂರು ನಿಡಿದ್ದು, ಆರೋಪಿಗಳ ವಿರುದ್ಧ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ' ಎಂದು ತಿಳಿಸಿದ್ದಾರೆ.
ಅಪ್ತಾಪ್ತೆ ಮೇಲಿನ ಅತ್ಯಾಚಾರದಲ್ಲಿ ಭಾಗಿಯಾಗಿದ್ದವರ ಇಬ್ಬರ ಪೈಕಿ ಒಬ್ಬ ಆರೋಪಿ ಅಪ್ರಾಪ್ತ. ಈತನನ್ನು ಈಗಾಗಲೇ ಬಂಧಿಸಲಾಗಿದ್ದು, ಮತ್ತೊಬ್ಬ ಆರೋಪಿ ತಲೆಮರೆಸಿಕೊಂಡಿದ್ದಾನೆ. ಆತನ ಪತ್ತೆಗೆ ಬಲೆ ಬೀಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.