ನ್ಯೂಸ್

ಉದ್ಯಮಿಗೆ 5 ಕೋಟಿ ವಂಚನೆ ಕೇಸಿನಲ್ಲಿ 2.76 ಕೋಟಿ ರೂ. ಜಪ್ತಿ ಮಾಡಿದ ಸಿಸಿಬಿ

ಬೆಂಗಳೂರು: ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ಕೊಡಿಸುವ ನೆಪದಲ್ಲಿ ಉದ್ಯಮಿಗೆ 5 ಕೋಟಿ ರೂ. ವಂಚಿಸಿದ ಪ್ರಕರಣದಲ್ಲಿ ಬಂಧಿತರಿಂದ 2.76 ಕೋಟಿ ರೂ.ಗಳನ್ನು ಸಿಸಿಬಿ ಪೊಲೀಸರು ಜಪ್ತಿ ಮಾಡಿದ್ದಾರೆ ಎಂದು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ತಿಳಿಸಿದರು.

ಗುರುವಾರ ಸುದ್ದಿಗಾರರ ಜತೆ ಮಾತನಾಡಿ, ಪ್ರಕರಣ ಕುರಿತು ಸಮಗ್ರ ತನಿಖೆ ನಡೆಯುತ್ತಿದ್ದು, ಮತ್ತಷ್ಟು ಮಾಹಿತಿ ಹೊರಬರಲಿದೆ. ಇದುವರೆಗೆ ಚೈತ್ರಾ ಕುಂದಾಪುರ ಸೇರಿ 8 ಆರೋಪಿಗಳನ್ನು ಬಂಧಿಸಲಾಗಿದೆ. ಚೈತ್ರಾ ಬಳಿ 2 ಕೋಟಿ ರೂ., ಹಾಲಶ್ರೀಯಿಂದ 56 ಲಕ್ಷ ರೂ., ಮತ್ತೊಬ್ಬ ಆರೋಪಿಯಿಂದ 20 ಲಕ್ಷ ರೂ. ಜಪ್ತಿ ಮಾಡಲಾಗಿದೆ ಎಂದು ತಿಳಿಸಿದರು.

ಹಿರೇಹಡಗಲಿಯ ಹಾಲಶ್ರೀ ಸ್ವಾಮೀಜಿ ಮಠದ ಅಭಿನವ ಹಾಲವೀರಪ್ಪಜ್ಜ ಸ್ವಾಮೀಜಿ ಕಾರು ಚಾಲಕ ರಾಜು ಮೈಸೂರಿನ ವಕೀಲ ಪ್ರಣವ್ ಪ್ರಸಾದ್ ಕಚೇರಿಯಲ್ಲಿ ಹಣದ ಬ್ಯಾಗ್ ಇರಿಸಿದ್ದ. ಬುಧವಾರ ವಕೀಲ ಪ್ರಣವ್ ಪ್ರಸಾದ್, ಖುದ್ದಾಗಿ ಮಠಕ್ಕೆ ಬಂದು 56 ಲಕ್ಷ ರೂ. ಇದ್ದ ಬ್ಯಾಗ್‌ನ್ನು ಇಟ್ಟು ಹೋಗಿದ್ದು, ಸಿಸಿಬಿಗೂ ಪತ್ರ ಬರೆದಿದ್ದಾರೆ. ಈ ಹಣವನ್ನು ಜಪ್ತಿ ಮಾಡಲಾಗಿದೆ. ಮುಂದುವರಿದ ಭಾಗವಾಗಿ ಪ್ರಕರಣ ಸಂಬಂಧ ವಕೀಲ ಪ್ರಣವ್ ಪ್ರಸಾದ್, ತಿಪ್ಪೇಸ್ವಾಮಿ ಸೇರಿ ನಾಲ್ವರಿಗೆ ಸಿಸಿಬಿ ನೋಟಿಸ್ ಕೊಟ್ಟು ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದೆ ಎಂದು ತಿಳಿದು ಬಂದಿದೆ.

ಖಾತೆಗಳ ಮಾಹಿತಿ ಪಡೆದ ಪೊಲೀಸರು

ಹಿರೇಹಡಗಲಿ ಹಾಲಸ್ವಾಮಿ ಮಠಕ್ಕೆ ಬುಧವಾರ ಆರೋಪಿಯೊಂದಿಗೆ ತೆರಳಿದ್ದ ಸಿಸಿಬಿ ಪೊಲೀಸರು ತಡರಾತ್ರಿವರೆಗೆ ಮಹಜರು ಮಾಡಿ, 56.03 ಲಕ್ಷ ರೂ. ವಶಕ್ಕೆ ಪಡೆದರು. ಆರೋಪಿಯನ್ನು ಕುಟುಂಬಸ್ಥರೊಂದಿಗೆ ಮಾತನಾಡಲು ಬಿಡದೆ ವಿಚಾರಣೆ ನಡೆಯಿತು. ಬಳಿಕ ಕುಟುಂಬಸ್ಥರು ಹಾಲಶ್ರೀ ಅವರನ್ನು ಮಾತನಾಡಿಸಿದಾಗ ಉತ್ತರಿಸದೆ ಮೌನವಾಗಿದ್ದರು ಎನ್ನಲಾಗಿದೆ. ಗುರುವಾರ ಬೆಳಗ್ಗೆಯಿಂದ ಹೆಚ್ಚಿನ ವಿಚಾರಣೆ ನಡೆಯಿತು. ಹಿರೆಹಡಗಲಿಯ ಕೆಜಿಬಿ ಬ್ಯಾಂಕ್ ಖಾತೆ ಮತ್ತು ಲಾಕರ್, ಬಿಡಿಸಿಸಿ ಬ್ಯಾಂಕ್ ಖಾತೆ ಹಾಗೂ ಹೂವಿನಹಡಗಲಿಯ ಐಡಿಎಫ್ ಸಿ ಬ್ಯಾಂಕ್ ಖಾತೆಗಳನ್ನು ಪರಿಶೀಲಿಸಿ ಮಾಹಿತಿ ಪಡೆದಿದ್ದಾರೆ.