ನ್ಯೂಸ್

ಕೇಂದ್ರಕ್ಕೆ  2.69 ಲಕ್ಷ ಕೋಟಿ ಲಾಭಾಂಶ

ಮುಂಬೈ: ಭಾರತೀಯ ರಿಸರ್ವ್ ಬ್ಯಾಂಕ್ (ಆರ್​ಬಿಐ) ಕೇಂದ್ರ ಸರ್ಕಾರಕ್ಕೆ 2024-25ನೇ ಆರ್ಥಿಕ ವರ್ಷಕ್ಕೆ 2.69 ಲಕ್ಷ ಕೋಟಿ ರೂ. ಲಾಭಾಂಶದ ಮೊತ್ತವನ್ನು ಘೋಷಿಸಿದೆ. ಶುಕ್ರವಾರ ನಡೆದ ಆರ್​ಬಿಐನ ಕೇಂದ್ರ ನಿದೇರ್ಶಕರ ಮಂಡಳಿ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ. 2023-24ನೇ ವರ್ಷಕ್ಕೆ ಹೋಲಿಸಿದರೆ ಇದು ಶೇಕಡ 27.4ರಷ್ಟು ಹೆಚ್ಚಳವಾಗಿದೆ. ಭಾರತದ ಉತ್ಪನ್ನಗಳಿಗೆ ಅಮೆರಿಕದ ಹೆಚ್ಚುವರಿ ಸುಂಕ ಮತ್ತು ಪಾಕಿಸ್ತಾನದೊಂದಿಗಿನ ಸೇನಾ ಸಂಘರ್ಷದಿಂದ ಉಂಟಾ ಗಿರುವ ವೆಚ್ಚವನ್ನು ಸರಿದೂಗಿಸಲು ಇದು ನೆರವಾಗಲಿದೆ ಎಂದು ಅಂದಾಜಿ ಸಲಾಗಿದೆ. 2023-24ರಲ್ಲಿ ಆರ್​ಬಿಐ 2.1 ಲಕ್ಷ ಕೋಟಿ ರೂ., 2022-23ರಲ್ಲಿ 87,416 ಕೋಟಿ ರೂ. ಲಾಭಾಂಶ ಮೊತ್ತವನ್ನು ಕೇಂದ್ರಕ್ಕೆ ನೀಡಿತ್ತು.

ತುರ್ತು ನಿಧಿ ಪ್ರಮಾಣ ಹೆಚ್ಚಳ: ಆರ್​ಬಿಐ ಗವರ್ನರ್ ಆಗಿದ್ದ ಬಿಮಲ್ ಜಲನ್ ಅಧ್ಯಕ್ಷತೆಯ ಪರಿಣತರ ಸಮಿತಿ ನೀಡಿರುವ ಶಿಫಾರಸ್ಸಿನ ಅನ್ವಯ 2019ರಿಂದ ಆರ್ಥಿಕ ಬಂಡವಾಳ ಚೌಕಟ್ಟನ್ನು (ಇಸಿಎಫ್) ಅಳವಡಿಸಿಕೊಳ್ಳಲಾಗಿದೆ. ಇದರ ಆಧಾರದ ಮೇಲೆ ಕೇಂದ್ರಕ್ಕೆ ಲಾಭಾಂಶ ಪಾವತಿಸಲಾಗುತ್ತದೆ. ಮಾರ್ಚ್​ನಲ್ಲಿ ನಡೆದಿದ್ದ ಸಭೆಯಲ್ಲಿ ಪರಿಷ್ಕೃತ ಆರ್ಥಿಕ ಬಂಡವಾಳದ ಚೌಕಟ್ಟಿಗೆ ಕೇಂದ್ರೀಯ ಮಂಡಳಿ ಸಭೆಯು ಅನುಮೋದನೆ ನೀಡಿತ್ತು. ಇದರ ಅನ್ವಯ ಸರ್ಕಾರಕ್ಕೆ ಲಾಭಾಂಶ ಪಾವತಿಸಲು ಕ್ರಮ ವಹಿಸಲಾಗಿದೆ ಎಂದು ಆರ್​ಬಿಐ ತಿಳಿಸಿದೆ.

ಅರ್ಥವ್ಯವಸ್ಥೆಗೆ ಎದುರಾಗಬಹುದಾದ ಅಪಾಯ ಎದುರಿಸಲು ಆರ್​ಬಿಐ ತೆಗೆದಿರಿಸುವ ತುರ್ತು ನಿಧಿಯ ಪ್ರಮಾಣವನ್ನು (ಸಿಆರ್​ಬಿ) ಶೇಕಡ 4.50ರಿಂದ ಶೇ.7.50 ಮಿತಿಯಲ್ಲಿ ಕಾಯ್ದುಕೊಳ್ಳಬೇಕು ಎಂದು ಪರಿಷ್ಕೃತ ನಿಯಮಾವಳಿಯಲ್ಲಿ ತಿಳಿಸಲಾಗಿದೆ. ಅಂದರೆ ಆರ್​ಬಿಐನ ಬ್ಯಾಲೆನ್ಸ್​ಶೀಟ್​ಗೆ ಅನುಗುಣವಾಗಿ ಅನಿರೀಕ್ಷಿತ ಹಣಕಾಸು ಪರಿಸ್ಥಿತಿ ಎದುರಿಸಲು ಇರುವ ತುರ್ತು ನಿಧಿಯ ಪ್ರಮಾಣ ಇದಾಗಿದೆ. ಇದರನ್ವಯ 2025-26ರಲ್ಲಿ ಸಿಆರ್​ಬಿ ಉದ್ದೇಶಕ್ಕೆ ಮೀಸಲಿಡುವ ಮೊತ್ತವನ್ನು ಶೇ.7.50ಕ್ಕೆ ನಿಗದಿಪಡಿಸಲು ಮಂಡಳಿಯು ಸಮ್ಮತಿಸಿದೆ. ಕಳೆದ ಆರ್ಥಿಕ ವರ್ಷದಲ್ಲಿ ಇದನ್ನು ಶೇ.6.5ಕ್ಕೆ ನಿಗದಿಪಡಿಸಲಾಗಿತ್ತು.