ನ್ಯೂಸ್

ಟ್ರೇಡಿಂಗ್ ಸೋಗಿನಲ್ಲಿ 2.35 ಕೋಟಿ ವಂಚನೆ

ಬೆಂಗಳೂರು: ಟ್ರೇಡಿಂಗ್ ವ್ಯವಹಾರದಲ್ಲಿ ಹೂಡಿಕೆ ಮಾಡಿದರೆ ಕಡಿಮೆ ಅವಧಿಯಲ್ಲಿ ಹೆಚ್ಚಿನ ಲಾಭ ಸಿಗಲಿದೆ ಎಂದು ಉದ್ಯಮಿಗೆ ನಂಬಿಸಿ 2.35 ಕೋಟಿ ರೂ. ಹೂಡಿಕೆ ಮಾಡಿಸಿಕೊಂಡು ಸೈಬರ್ ಕಳ್ಳರು ಮೋಸ ಮಾಡಿದ್ದಾರೆ.

ಚಾಮರಾಜಪೇಟೆ ನಿವಾಸಿ ಜಯಂತಿಲಾಲ್ ಸಾಲೆಚ ಮೋಸಕ್ಕೆ ಒಳಗಾದವರು. ದಕ್ಷಿಣ ಸಿಇಎನ್ ಠಾಣೆಗೆ ದೂರು ಸಲ್ಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅಪರಿಚಿತ ವ್ಯಕ್ತಿಯೊಬ್ಬ ಏ. 23ರಂದು ಜಯಂತಿಲಾಲ್ ಅವರನ್ನು ವಾಟ್ಸ್‌ಆ್ಯಪ್ ಗ್ರೂಪ್‌ಗೆ ಸೇರಿಸಿಕೊಂಡು ಟ್ರೇಡಿಂಗ್ ವ್ಯವಹಾರದ ಬಗ್ಗೆ ಮಾಹಿತಿ ನೀಡಿದ್ದಾನೆ. ಅಲ್ಪ ಅವಧಿಯಲ್ಲಿ ಹೆಚ್ಚಿನ ಲಾಭ ಸಿಗಲಿದೆ ಎಂದು ನಂಬಿಸಿ ಹೂಡಿಕೆ ಮಾಡಲು ಪ್ರಚೋದನೆ ನೀಡಿದ್ದಾನೆ. ಆನಂತರ ಲಿಂಕ್ ಕಳುಹಿಸಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳುವಂತೆ ಸಲಹೆ ಕೊಟ್ಟಿದ್ದಾನೆ. ವಂಚಕನ ಮಾತು ನಂಬಿದ ಜಯಂತಿಲಾಲ್, ಲಿಂಕ್ ಬಳಸಿ ಆ್ಯಪ್ ಡೌನ್‌ಲೋಡ್ ಮಾಡಿಕೊಂಡು ಟ್ರೇಡಿಂಗ್ ವ್ಯವಹಾರ ಶುರು ಮಾಡಿದ್ದರು. ಮೊದಲು 10 ಲಕ್ಷ ರೂ. ಹೂಡಿಕೆ ಮಾಡಿದ್ದರು. ಅದಕ್ಕೆ ಪ್ರತಿಯಾಗಿ ಆ್ಯಪ್ ಖಾತೆಯಲ್ಲಿ ಜಯಂತಿಲಾಲ್ ಖಾತೆಗೆ ಹೆಚ್ಚಿನ ಲಾಭಾಂಶ ಲಭ್ಯವಾಗಿರುವಂತೆ ಅಪ್‌ಡೇಟ್ ಮಾಡಿದ್ದರು. ಇದನ್ನು ನೋಡಿದ ಜಯಂತಿಲಾಲ್ ಆಸೆಗೆ ಬಿದ್ದು, ಹಂತ ಹಂತವಾಗಿ 2.35 ಕೋಟಿ ರೂ. ಹೂಡಿಕೆ ಮಾಡಿದ್ದಾರೆ.

ತನ್ನ ಖಾತೆಯಲ್ಲಿ ತೋರಿಸಿರುವ ಲಾಭಾಂಶವನ್ನು ಇತ್ತೀಚೆಗೆ ವಿತ್ ಡ್ರಾ ಮಾಡಲು ಪ್ರಯತ್ನಿಸಿದಾಗ ಸಾಧ್ಯವಾಗಿಲ್ಲ. ಈ ಬಗ್ಗೆ ೆನ್ ಮಾಡಿ ವಿಚಾರಿಸಿದಾಗ ಸಬೂಬು ಹೇಳಿ ಮತ್ತಷ್ಟು ಹಣ ಹೂಡಿಕೆ ಮಾಡುವಂತೆ ಸಲಹೆ ನೀಡಿದ್ದರು. ಹೂಡಿಕೆ ಹಣವನ್ನು ಹಿಂಪಡೆಯಲು ಸಾಧ್ಯವಾಗದೆ ವಂಚನೆಗೆ ಒಳಗಾಗಿರುವುದು ಗೊತ್ತಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.