ನ್ಯೂಸ್

1ನೇ ತರಗತಿಗೆ ಇಷ್ಟು ಲಕ್ಷ ಹಣನಾ? ಹೀಗಾದರೆ ಮಿಡೆಲ್​ ಕ್ಲಾಸ್​ ಮಕ್ಕಳು ಎಲ್ಲಿಗೆ ಹೋಗ್ಬೇಕು ಸ್ವಾಮಿ! | School Fee

ಮೋಹನ್​ ಶೆಟ್ಟಿ

ನವದೆಹಲಿ: ಇಂದಿನ ಕಾಲಮಾನದಲ್ಲಿ ಎಲ್ಲವೂ ದುಬಾರಿ. ಅಕ್ಕಿ, ಬೆಳೆ ಕಾಳಿನಿಂದ ಹಿಡಿದು ಮನೆಗೆ ಬೇಕಾದ ಕುರ್ಚಿ, ಮಂಚ, ಪಾತ್ರೆ-ಪಗಡೆ ಸೇರಿದಂತೆ ಪ್ರತಿಯೊಂದರ ಬೆಲೆ ಕೂಡ ಗಗನಕ್ಕೇರಿದೆ. ಶ್ರೀಮಂತರು ಇದನ್ನು ನಿಭಾಯಿಸುತ್ತಾರೆ. ತಿಂಗಳಿಗೆ 1 ಲಕ್ಷಕ್ಕೂ ಅಧಿಕ ಆದಾಯವಿರುವ ವರ್ಗದವರು ಇಂತಹ ಬೆಲೆಏರಿಕೆಯನ್ನು ಸರಾಗವಾಗಿ ನಿರ್ವಹಿಸುತ್ತಾರೆ. ಅಲ್ಲಲ್ಲಿ ಇಷ್ಟೊಂದು ಹಣವೇ ಎಂದು ಮನಸ್ಸಿನೊಳಗೆ ಗೊಣಗುತ್ತಾರೆಯೇ ವಿನಃ ಆಕ್ಷೇಪಣೆ ಅಥವಾ ಪ್ರಶ್ನಿಸುವ ಪ್ರಯತ್ನ ಮಾಡೋದಿಲ್ಲ. ಆದರೆ, ಈ ಬೆಲೆ ಏರಿಕೆಯಿಂದ ಹೈರಾಣಾಗುವ ಬಡವರು, ಮಧ್ಯಮ ವರ್ಗದ ಜನರು, ದುಬಾರಿ ಅನ್ನೋ ಪದಕ್ಕೆ ಹಿಡಿಶಾಪ ಹಾಕುತ್ತಲೇ ಜೀವನ ಸಾಗಿಸುತ್ತಿರುತ್ತಾರೆ. ಸದ್ಯ ಈ ಘಟನೆ (School Fee) ಕೂಡ ಅದನ್ನೇ ಒತ್ತಿ ಹೇಳುತ್ತದೆ.

ಮಕ್ಕಳ ವಿದ್ಯಾಭ್ಯಾಸದ ಕನಸ್ಸಿಗೆ ಅಣಿ

ಬಡವರಿಗಾಗಲಿ, ಮಧ್ಯಮ ವರ್ಗದವರೇ ಆಗಲಿ ಅಥವಾ ಶ್ರೀಮಂತರೇ ಇರಲಿ. ಯಾರಿಗಾದರೂ ಸಹ ತಮ್ಮ ಮಕ್ಕಳು ಒಳ್ಳೆಯ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಬೇಕು. ಖರ್ಚು ಎಷ್ಟೇ ಇದ್ದರೂ ಪರವಾಗಿಲ್ಲ, ಅವರ ವ್ಯಾಸಂಗಕ್ಕೆ ತೊಂದರೆಯಾಗಬಾರದು ಎಂದು ಯೋಚಿಸುತ್ತಾರೆ ಹಾಗೂ ಆಸೆ ಪಡುತ್ತಾರೆ. ಇದಕ್ಕಾಗಿ ಹಗಲು-ರಾತ್ರಿ ಶ್ರಮಮೀರಿ ಬೆವರ ಬಸಿದು, ಹಣ ಕೂಡಿಡುತ್ತಾರೆ. ಅದರಲ್ಲೂ ಮಿಡಲ್​ ಕ್ಲಾಸ್​ನವರು, ಚೀಟಿ, ಉಳಿತಾಯ ಖಾತೆ, ಬಡ್ಡಿ ಬೆಳೆಯುವ ಠೇವಣಿ ಖಾತೆ ಹೀಗೆ ನಾನಾ ರೀತಿಯಲ್ಲಿ ದುಡ್ಡು ಉಳಿಸಿ, ಮಕ್ಕಳ ವಿದ್ಯಾಭ್ಯಾಸದ ಕನಸ್ಸಿಗೆ ಅಣಿಯಾಗ್ತಾರೆ. ಅದೇ ರೀತಿ ಇಲ್ಲೊಬ್ಬ ತಂದೆ ತನ್ನ ಮಗಳನ್ನು 1ನೇ ತರಗತಿಗೆ ಸೇರಿಸಲು ಒಳ್ಳೆಯ ಶಾಲೆಯೇನೋ ಹುಡುಕಿದ್ದಾರೆ. ಆದ್ರೆ, ಅಲ್ಲಿ ತೋರಿಸಿದ ಶಾಲಾ ಶುಲ್ಕ ಕಂಡು ಬೆಚ್ಚಿಬಿದ್ದಿದ್ದಾರೆ.

4.27 ಲಕ್ಷ ರೂ. ಹಣ

ಈ ಬಗ್ಗೆ ಜಾಲತಾಣದಲ್ಲಿ ತಮ್ಮ ಅಸಮಾಧಾನ ಹೊರಹಾಕಿರುವ ರಿಷಭ್ ಜೈನ್ ಎಂಬ ವ್ಯಕ್ತಿ, “ನನ್ನ ಮಗಳು ಮುಂದಿನ ವರ್ಷ 1ನೇ ತರಗತಿಗೆ ಸೇರಬೇಕು. ಈ ಉದ್ದೇಶದಿಂದ ನಮ್ಮ ಜೈಪುರ ನಗರದಲ್ಲಿರುವ ಒಂದೊಳ್ಳೆ ಶಾಲೆಗೆ ಸೇರಿಸಲು ಮುಂದಾದೆ. ಆದರೆ, ಇವರು ಕೇವಲ ಒಂದನೇ ತರಗತಿಗೆ 4.27 ಲಕ್ಷ ರೂ. ಹಣವನ್ನು ಶಾಲಾ ಶುಲ್ಕವಾಗಿ ಕೇಳಿದ್ದಾರೆ. ನಿಮ್ಮ ಗಮನದಲ್ಲಿರಲಿ ಇದೊಂದೇ ಅಲ್ಲ ನಗರದ ಹಲವು ಉತ್ತಮ ಶಾಲೆಗಳಲ್ಲಿಯೂ ಸಹ ಇದೇ ರೀತಿಯ ಶುಲ್ಕವಿದೆ ಎಂದು ಹೇಳಿದ್ದಾರೆ.

ಹೀಗಿದೆ ಸಂಪೂರ್ಣ ವಿವರ

"ಉತ್ತಮ ಶಿಕ್ಷಣವು ಈಗ ಐಷಾರಾಮಿ. ಹೀಗಾದರೆ ಮಧ್ಯಮ ವರ್ಗದವರ ಕಥೆ ಏನು? ಮಿಡೆಲ್ ಕ್ಲಾಸ್​ನವರದ್ದು ಬಿಡಿ, ವರ್ಷಕ್ಕೆ 20 ಲಕ್ಷ ರೂ. ಆದಾಯ ಗಳಿಸುವವರಿಗೂ ಇದು ಕಷ್ಟಸಾಧ್ಯವೇ. ಇಷ್ಟು ದುಬಾರಿ ಮೊತ್ತದ ಫೀಸ್​ ಅನ್ನು ಪೋಷಕರು ಹೇಗೆ ಭರಿಸಬೇಕು? 4.27 ಲಕ್ಷ ರೂ. ಶುಲ್ಕ ಹೇಗೆ ವಿಂಗಡನೆಯಾಗಿದೆ ಎಂಬುದನ್ನು ನಾನಿಲ್ಲಿ ವಿವರಿಸುತ್ತೇನೆ ನೋಡಿ. “ನೋಂದಣಿಗೆ 2,000 ರೂ., ಪ್ರವೇಶ ಶುಲ್ಕ 40,000 ರೂ., ಮುಂಗಡ ಪಾವತಿ ಹಣ (ಮರುಪಾವತಿಸಬಹುದಾದ), 5,000 ರೂ., ವಾರ್ಷಿಕ ಶಾಲಾ ಶುಲ್ಕ 2.52 ಲಕ್ಷ ರೂ., ಬಸ್ ಶುಲ್ಕ 1 ಲಕ್ಷ 8 ಸಾವಿರ ರೂ., ಪುಸ್ತಕಗಳು ಮತ್ತು ಸಮವಸ್ತ್ರ 20,000 ರೂ. ಒಟ್ಟಾಗಿ ವರ್ಷಕ್ಕೆ 4,27,000 ರೂ. ಫಿಕ್ಸ್​ ಎಂದು ವಿವರಿಸಿದ್ದಾರೆ,(ಏಜೆನ್ಸೀಸ್).