ನ್ಯೂಸ್

ಹಾಸನ ವಿಮಾನ ನಿಲ್ದಾಣ ಕಾಮಗಾರಿಗೆ 193.65 ಕೋಟಿ ರೂ. ಅನುಮೋದನೆ

ಬೆಂಗಳೂರು : ಬಹುವರ್ಷಗಳಿಂದ ಹಾಸನದಲ್ಲಿ ವಿಮಾನ ನಿಲ್ದಾಣ ನಿರ್ಮಿಸುವ ಯೋಜನೆಗೆ ವೇಗ ಸಿಕ್ಕಿರಲಿಲ್ಲ. ಇದೀಗ ಸಿಎಂ ಬಿ.ಎಸ್​.ಯಡಿಯೂರಪ್ಪನವರ ನೇತೃತ್ವದಲ್ಲಿ ಈ ಯೋಜನೆ ಮುಂದುವರಿಯುವ ಶುಭಸೂಚನೆ ಬಂದಿದೆ. ಹಾಸನ ವಿಮಾನ ನಿಲ್ದಾಣ ನಿರ್ಮಾಣ ಕಾಮಗಾರಿಗಾಗಿ 193.65 ಕೋಟಿ ರೂ.ಗಳ ಬಜೆಟ್​​ಗೆ ಇಂದು ನಡೆದ ಸಚಿವ ಸಂಪುಟದಲ್ಲಿ ಅನುಮೋದನೆ ನೀಡಲಾಗಿದೆ.

ಹಾಸನ ಜಿಲ್ಲೆಯ ಬೂವನಹಳ್ಳಿಯಲ್ಲಿ ವಿಮಾನ ನಿಲ್ದಾಣ ನಿರ್ಮಿಸುವ ಯೋಜನೆಯನ್ನು ಉಡಾನ್​ ಸ್ಕೀಮ್​ನ ಅಡಿಯಲ್ಲಿ 175 ಕೋಟಿ ರೂ. ವೆಚ್ಚದಲ್ಲಿ ಕೈಗೊಳ್ಳುವ ನಿರ್ಧಾರವಾಗಿತ್ತು. ಇದೀಗ ಆ ಮೊತ್ತಕ್ಕೆ ಇನ್ನೂ 18 ಕೋಟಿ ರೂ.ಗಳನ್ನು ಸೇರಿಸಿ ಬಜೆಟ್​ಅನ್ನು ಅಂಗೀಕರಿಸಲಾಗಿದೆ.

ಇತ್ತೀಚೆಗೆ, ಕೋವಿಡ್​ ಪರಿಸ್ಥಿತಿ ಪರಿಶೀಲನೆಗಾಗಿ ಹಾಸನಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ, ಮುಖ್ಯಮಂತ್ರಿ ಯಡಿಯೂರಪ್ಪ ಅವರು, ಶೀಘ್ರವಾಗಿ ವಿಮಾನ ನಿಲ್ದಾಣ ಕಾಮಗಾರಿ ಆರಂಭಿಸಲಾಗುವುದು ಎಂದು ಭರವಸೆ ನೀಡಿದ್ದರು. ಇದೀಗ ನುಡಿದಂತೆ ಅನುದಾನ ನೀಡಿ, ಮಾತು ಉಳಿಸಿಕೊಂಡಿದ್ದಾರೆ.