ನ್ಯೂಸ್

ಕಾಲೇಜು ಹಾಸ್ಟೆಲ್​ನಲ್ಲಿಯೇ ಹೆಣ್ಣು ಮಗುವಿಗೆ ಜನ್ಮ ನೀಡಿದ ವಿದ್ಯಾರ್ಥಿನಿ ಮೃತ್ಯು

ವಿಜಯವಾಡ: ಆಂಧ್ರಪ್ರದೇಶದ ನಂದ್ಯಾಲ ಜಿಲ್ಲೆಯ ಪಾಣ್ಯಂ ಮಂಡಲದಲ್ಲಿರುವ ಇಂಜಿನಿಯರಿಂಗ್ ಕಾಲೇಜಿನಲ್ಲಿ ಓದುತ್ತಿದ್ದ ವಿದ್ಯಾರ್ಥಿನಿ ಹಾಸ್ಟೆಲ್‌ನಲ್ಲಿ ಮಗುವಿಗೆ ಜನ್ಮ ನೀಡಿದ್ದಾಳೆ. ಹೆಣ್ಣು ಮಗುವಿಗೆ ಜನ್ಮ ನೀಡಿದ ಬಳಿಕ ತೀವ್ರ ರಕ್ತಸ್ರಾವದಿಂದ ವಿದ್ಯಾರ್ಥಿನಿ ಸಾವನ್ನಪ್ಪಿದ್ದಾಳೆ. ಈ ವಿಷಯ ಬೆಳಕಿಗೆ ಬಂದ ನಂತರ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಕಸದ ತೊಟ್ಟಿಯಲ್ಲಿ ಮಗುವಿನ ಮೃತದೇಹ ಪತ್ತೆಯಾಗಿದೆ. ಗರ್ಭಪಾತ ಮಾತ್ರೆ ಹೆಚ್ಚಾಗಿ ಸೇವಿಸಿದ್ದರಿಂದ ತೀವ್ರ ರಕ್ತಸ್ರಾವದಿಂದ ವಿದ್ಯಾರ್ಥಿನಿ ಸಾವನ್ನಪ್ಪಿದ್ದಾಳೆ ಎಂದು ವೈದ್ಯರು ತಿಳಿಸಿದ್ದಾರೆ.

ಮೃತ ವಿದ್ಯಾರ್ಥಿನಿಗೆ ಸಾಮಾಜಿಕ ಜಾಲತಾಣದ ಮೂಲಕ ಪರಿಚಯವಾಗಿ ಕ್ಯಾಬ್​ ಚಾಲಕನ ಮೇಲೆ ಪ್ರೇಮಾಂಕುರವಾಗಿತ್ತು. ಆಗಾಗ್ಗೆ ಭೇಟಿಯಾಗುತ್ತಿದ್ದರು. ಮೊಬೈಲ್​ನಲ್ಲಿ ಹೆಚ್ಚು ಮಾತನಾಡುತ್ತಿದ್ದರು. ಹುಡುಗಿ ಹಾಸ್ಟೆಲ್​ನಿಂದ ಮನೆಗೆ ಹೋದಾಗ ಈತನೇ ಕ್ಯಾಬ್​ನಲ್ಲಿ ಡ್ರಾಪ್​ ಮಾಡುತ್ತಿದ್ದ ಎಂದು ಪ್ರಾಥಮಿಕ ವರದಿಯಲ್ಲಿ ತಿಳಿದು ಬಂದಿದೆ ಈ ಘಟನೆ ಶನಿವಾರ ಬೆಳಕಿಗೆ ಬಂದಿದೆ.

ಐಫ್​ಐಆರ್ ಮಾಹಿತಿ ಪ್ರಕಾರ, 3 ತಿಂಗಳ ಹಿಂದೆ ನಂದ್ಯಾಲ ಜಿಲ್ಲೆಯ ಪಾಣ್ಯಂ ಮಂಡಲದ ಇಂಜಿನಿಯರಿಂಗ್ ಕಾಲೇಜಿನಲ್ಲಿ ಎರಡನೇ ವರ್ಷ ಓದುತ್ತಿದ್ದಾಳೆ. ಈಕೆ ಕಾಲೇಜಿನ ಹಾಸ್ಟೆಲ್​ನಲ್ಲಿ ಉಳಿದುಕೊಂಡಿದ್ದಳು.

ಏಪ್ರಿಲ್​ 8 ರಂದು ಅನಾರೋಗ್ಯದ ಕಾರಣಕ್ಕಾಗಿ ಕಾಲೇಜಿಗೆ ಹೋಗದೆ ಹಾಸ್ಟೆಲ್​ನಲ್ಲಿ ಉಳಿದುಕೊಂಡಿದ್ದಳು. ಮಧ್ಯಾಹ್ನ ತನ್ನ ಸ್ನೇಹಿತರು ಬಂದು ನೋಡಿದಾಗ ರಕ್ತದ ಮಡುವಿನಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿರುವುದು ಕಂಡು ಬಂದಿದೆ. ಬಳಿಕ ಕಸದ ಡಬ್ಬಿಯಲ್ಲಿ ಮಗುವಿನ ಶವ ಪತ್ತೆ ಹಚ್ಚಿದ್ದಾರೆ.

ವಿದ್ಯಾರ್ಥಿನಿ ಗರ್ಭಿಣಿ ಎಂಬ ಅಂಶವನ್ನು ಕಾಲೇಜು ಆಡಳಿತ ಮಂಡಳಿ ಗುರುತಿಸದಿರುವುದು ಖಂಡನೀಯವಾದದ್ದು ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಈ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.