ನ್ಯೂಸ್

ಮಿದುಳು ತಿನ್ನುವ ಅಮೀಬಾಗೆ 19 ಮಂದಿ ಬಲಿ! ಏನಿದು ಪಿಎಎಂ?

ತಿರುವನಂತಪುರಂ: ಕೇರಳದಲ್ಲಿ ಮಿದುಳು ತಿನ್ನುವ ಅಮೀಬಾದಿಂದ ಉಂಟಾಗುವ ಅಮೀಬಿಕ್ ಮೆನಿಂಗೊಎನ್ಸೆಫಾಲಿಟಿಸ್ (ಪಿಎಎಂ) ಪ್ರಕರಣಗಳು ಹೆಚ್ಚುತ್ತಿದ್ದು, 19 ಜನರು ಸಾವಿಗೀಡಾಗಿದ್ದಾರೆ. ಮಿದುಳು ತಿನ್ನುವ ಅಮೀಬಾ ಎಂದು ಕರೆಯುವ ನೇಗ್ಲೇರಿಯಾ ಫೌಲೆರಿಯಿಂದ ಸೋಂಕು ಉಂಟಾಗುತ್ತಿದ್ದು, ಈ ವರ್ಷ ಕೇರಳದಲ್ಲಿ 61 ಪ್ರಕರಣಗಳೂ ಪತ್ತೆಯಾಗಿವೆ.

ಈ ಹಿಂದೆ ಕೋಳಿಕ್ಕೋಡ್ ಮತ್ತು ಮಲಪು್ಪರಂ ಜಿಲ್ಲೆಗಳಳ್ಲಿ ಸೋಂಕುಗಳು ಹೆಚ್ಚಿದ್ದವು. ಈಗ ರಾಜ್ಯದಾದ್ಯಂತ ಸೋಂಕು ಹರಡಿದೆ. ಮೂರು ತಿಂಗಳ ಶಿಶುವಿನಿಂದ 91 ವರ್ಷದ ವೃದ್ಧರವರೆಗೆ ಈ ಅಮೀಬಾದಿಂದ ಸೋಂಕಿಗೆ ಒಳಗಾಗಿದ್ದಾರೆ. ಕಳೆದ ವರ್ಷದಂತೆ ಒಂದೇ ನೀರಿನ ಮೂಲದೊಂದಿಗೆ ಸೋಂಕು ನಂಟು ಹೊಂದಿಲ್ಲ. ಇವುಗಳು ಪ್ರತ್ಯೇಕ ಪ್ರಕರಣಗಳಾಗಿದ್ದು, ನಮ್ಮ ಸಾಂಕ್ರಾಮಿಕ ರೋಗಶಾಸ್ತ್ರೀಯ ತನಿಖೆಗಳಿಗೂ ಸವಾಲಾಗಿದೆ. ಕೇರಳ ಗಂಭೀರ ಅರೋಗ್ಯ ಸಮಸ್ಯೆಯನ್ನು ಎದುರಿಸುತ್ತಿದೆ ಎಂದು ರಾಜ್ಯ ಆರೋಗ್ಯ ಸಚಿವೆ ವೀಣಾ ಜಾರ್ಜ್ ತಿಳಿಸಿದ್ದಾರೆ.

ಪಿಎಎಂ ಎಂದರೇನು?: ಅಮೀಬಿಕ್ ಮೆನಿಂಗೊಎನ್ಸೆಫಾಲಿಟಿಸ್ (ಪಿಎಎಂ) ಸೋಂಕು ನರಮಂಡಲದ ಮೇಲೆ ಪ್ರಭಾವ ಬೀರಿ ಮಿದುಳಿನ ಅಂಗಾಂಶಗಳನ್ನು ನಾಶ ಪಡಿಸುತ್ತದೆ. ಇದರಿಂದ ಹೆಚ್ಚಿನ ಸಂದರ್ಭಗಳಲ್ಲಿ ತೀವ್ರವಾದ ಮಿದುಳಿನ ಊತ ಮತ್ತು ಸಾವು ಉಂಟಾಗುತ್ತದೆ. ಈ ಸೋಂಕು ಮಕ್ಕಳು, ಹದಿಹರೆಯದವರು ಮತ್ತು ಯುವ ವಯಸ್ಕರಲ್ಲಿ ಕಂಡು ಬರುತ್ತದೆ. ಈ ಅಮೀಬಾ ಬೆಚ್ಚಗಿನ, ವಿಶೇಷವಾಗಿ ನಿಶ್ಚಲವಾದ ಸಿಹಿ ನೀರಿನ ಮೂಲಗಳಲ್ಲಿ ಕಂಡು ಬರುತ್ತದೆ. ಈ ಅಮೀಬಾ ಘ್ರಾಣ ಲೋಳೆಪೊರೆ ಅಥವಾ ಕ್ರಿಬ್ರಿಫಾಮ್ರ್ ಪ್ಲೇಟ್ ಮೂಲಕ ಮಿದುಳನ್ನು ಪ್ರವೇಶಿಸುತ್ತದೆ. ಈ ಅಮೀಬಾ ಇರುವ ನೀರಿನಲ್ಲಿ ಈಜಿದಾಗ, ಸ್ನಾನ ಮಾಡಿದಾಗ ಸೋಂಕಿಗೆ ತುತ್ತಾಗುವ ಅಪಾಯ ಇರುತ್ತದೆ. ಈ ಸೋಂಕು ವ್ಯಕ್ತಿಯಿಂದ ವ್ಯಕ್ತಿಗೆ ಹರಡುವುದಿಲ್ಲ.

2016ರಲ್ಲಿ ಮೊದಲ ಕೇಸ್

ಕೇರಳದಲ್ಲಿ 2016 ರಲ್ಲಿ ಮೊದಲ ಪಿಎಎಂ ಪ್ರಕರಣ ಕಂಡು ಬಂದಿತ್ತು. 2023ರ ವರೆಗೆ ರಾಜ್ಯದಲ್ಲಿ ಕೇವಲ 8 ಪ್ರಕರಣಗಳು ದೃಢಪಟ್ಟಿದ್ದವು. ಆದರೆ 2024 ರಲ್ಲಿ ಈ ಸೋಂಕಿನ ಪ್ರಕರಣಗಳು 36ಕ್ಕೆ ಏರಿಕೆಯಾಗಿತ್ತು ಮತ್ತು 9 ಜನರು ಮೃತಪಟ್ಟಿದ್ದರು. ಈ ವರ್ಷ ಪ್ರಕರಣಗಳ ಸಂಖ್ಯೆ 69ಕ್ಕೆ ಹೆಚ್ಚಿದ್ದು, 19 ಜನರು ಮೃತಪಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಮೆದುಳು ತಿನ್ನುವ ಅಮೀಬಾ ಸೋಂಕು ಕೇರಳದಲ್ಲಿ ಆತಂಕಕ್ಕೆ ಕಾರಣವಾಗಿದೆ.

ಸೋಂಕಿನ ಲಕ್ಷಣಗಳೇನು?

ಪಿಎಎಂ ಸೋಂಕು ಉಂಟಾದಾಗ ಪ್ರಾಥಮಿಕವಾಗಿ ಇದನ್ನು ಪತ್ತೆ ಹಚ್ಚುವುದು ಕಷ್ಟ. ಆದರೆ ತಲೆನೋವು, ಜ್ವರ, ವಾಕರಿಕೆ ಮತ್ತು ವಾಂತಿಯಂತಹ ಲಕ್ಷಣಗಳು ಕಂಡು ಬರುತ್ತವೆ. ಈ ಸೋಂಕು ಪತ್ತೆಯಾಗುವ ವೇಳೆಗೆ ಅಮೀಬಾ ರೋಗಿಯ ಸೆರೆಬ್ರಲ್ ಎಡಿಮಾದಿಂದ ರಕ್ಷಿಸುವುದು ಕಷ್ಟವಾಗುತ್ತದೆ. ಸೋಂಕು ತ್ವರಿತವಾಗಿ ಹರಡುವುದರಿಂದ ಸಾವು ಸಹ ಸಂಭವಿಸುತ್ತದೆ. ಬೇಸಿಗೆಯಲ್ಲಿ ಸಿಹಿ ನೀರಿನ ಮೂಲಗಳಲ್ಲಿ ಈಜುವ ಮತ್ತು ಸ್ನಾನ ಮಾಡುವ ಇತಿಹಾಸ ಹೊಂದಿರುವವರಲ್ಲಿ ಪಿಎಎಂ ಸೋಂಕು ಸಾಮಾನ್ಯವಾಗಿ ಕಂಡು ಬರುತ್ತದೆ. ಸೋಂಕಿನ ಲಕ್ಷಣಗಳು ಒಂದರಿಂದ ಒಂಬತ್ತು ದಿನಗಳ ನಡುವೆ ಕಾಣಿಸಿಕೊಳ್ಳಬಹುದು.