(ಪ್ರಾತಿನಿಧಿಕ ಚಿತ್ರ) 
ನ್ಯೂಸ್

ನಿಷೇಧದ ಮಧ್ಯೆಯೂ Nagaland​ನಲ್ಲಿ ನಕಲಿ ಮದ್ಯ ಮಾರಾಟ; 2 ದಿನದಲ್ಲಿ 19 ಜನ ಸಾವು, SIT ರಚನೆ

  • ನಾಗಾಲ್ಯಾಂಡ್​ನಲ್ಲಿ ನಕಲಿ ಮದ್ಯ ಮಾರಾಟ 2 ದಿನದಲ್ಲಿ 19 ಜನ ಸಾವು

  • ಪೊಲೀಸರಿಂದ ತನಿಖೆ ಚುರುಕು, ಕಲಬೆರಕೆ ಮದ್ಯ ಪೂರೈಕೆ ಸ್ಥಳಗಳ ಮೇಲೆ ದಾಳಿ

  • 1990ರಿಂದ ನಾಗಲ್ಯಾಂಡ್​ನಲ್ಲಿ ಮದ್ಯಪಾನ ನಿಷೇಧ ಕಾನೂನು ಜಾರಿ

ಕೊಹಿಮಾ: ನಕಲಿ/ಕಳಪೆ ಗುಣಮಟ್ಟದ ಕಲಬೆರಕೆ ಮದ್ಯ ಸೇವನೆ ಮಾಡಿ, ಕಳೆದ ಎರಡು ದಿನದಲ್ಲಿ 19 ಜನರು ಮೃತಪಟ್ಟ ಘಟನೆ ನಾಗಾಲ್ಯಾಂಡ್​ನ ಮೊಕೊಕ್‌ಚುಂಗ್, ಟುಯೆನ್‌ಸಾಂಗ್ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ.

1990ರಿಂದ ನಾಗಲ್ಯಾಂಡ್​ನಲ್ಲಿ ಮದ್ಯಪಾನ ನಿಷೇಧ ಕಾನೂನು ಜಾರಿಯಲ್ಲಿದೆ. ಈ ಮಧ್ಯೆ ಶಂಕಿತ ಕಲಬೆರಕೆ ಮದ್ಯದ ಪೂರೈಕೆ ಜಾಲವನ್ನು ಪತ್ತೆ ಹಚ್ಚಲು ಪೊಲೀಸರು ವಿಶೇಷ ತನಿಖಾ ತಂಡ (SIT)ವನ್ನು ರಚಿಸಿದ್ದಾರೆ ಎನ್ನುವ ಮಾಹಿತಿ ಹೊರಬಿದ್ದಿದೆ.

ಎರಡು ಜಿಲ್ಲೆಯಲ್ಲಿ ಹಲವರು ನಿಧನ

ಕಳಪೆ ಗುಣಮಟ್ಟದ ಮದ್ಯ ಸೇವಿಸಿ ಮೊಕೊಕ್‌ಚುಂಗ್ ಜಿಲ್ಲೆಯಲ್ಲಿ ಎಂಟು ಜನರು ಮೃತಪಟ್ಟಿದ್ದರೆ, ಇನ್ನೂ ಟುಯೆನ್‌ಸಾಂಗ್​ನಲ್ಲಿ 11 ಜನರು ಮೃತಪಟ್ಟಿದ್ದಾರೆ ಎನ್ನಲಾಗಿದೆ. ಕಲಬೆರಕೆ ಮದ್ಯ ಎಲ್ಲಿಂದ ಪೂರೈಕೆಯಾಗುತ್ತಿದೆ ಎಂದು ಪತ್ತೆ ಹಚ್ಚುವಲ್ಲಿ ಎಸ್ಐಟಿ ತಂಡ ಕಾರ್ಯಪ್ರವೃತ್ತವಾಗಿದೆ. ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಐ ಬಂಗ್ಲಾಂಗ್ ಚಾಂಗ್ ನೇತೃತ್ವದಲ್ಲಿ ಎಸ್‌ಐಟಿ ರಚಿಸಲಾಗಿದೆ ಎಂದು ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ವೆಸುಪ್ರಾ ಕೆಜೊ ಶನಿವಾರ ತಿಳಿಸಿದ್ದಾರೆ.

ಪೊಲೀಸರಿಂದ ತನಿಖೆ ಚುರುಕು

ಕಲಬೆರಕೆ ಮದ್ಯದಿಂದಲೇ 19 ಜನರು ಮೃತಪಟ್ಟಿದ್ದಾರಾ ಎನ್ನುವುದನ್ನು ಖಚಿತ ಪಡಿಸಿಕೊಳ್ಳಲು, ಮಾದರಿಯನ್ನು ಗುವಾಹಟಿಕೆ ಕಳುಹಿಸಲಾಗಿದೆ. ಅಲ್ಲಿಂದ ವೈದ್ಯಕೀಯ ವರದಿ, ಮತ್ತು ಸೂಕ್ತ ಸಾಕ್ಷ್ಯಗಳು ಸಿಕ್ಕ ನಂತರ ಸರಿಯಾದ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: 'ಅರ್ಬನ್ ಮೈಂಡ್‌ಸೆಟ್' ಟೀ-ಶರ್ಟ್ ಧರಿಸಿದ್ದ ಯುವತಿಗೆ ಕಿರುಕುಳ; ಕಾರಿನೊಳಕ್ಕೆ ಎಳೆದಾಡಿದ ಕಾನೂನು ಸ್ಟೂಡೆಂಟ್ಸ್ ಬಂಧನ..Delhi

ನಕಲಿ ಮದ್ಯದಿಂದ ಹಲವರು ಮೃತಪಟ್ಟ ಘಟನೆ ವೈರಲ್ ಆಗುತ್ತಲೇ ಎಚ್ಚೆತ್ತ ಪೊಲೀಸರು ಕಲಬೆರಕೆ ಮದ್ಯ ಪೂರೈಕೆಯಾಗುತ್ತಿರುವ ಶಂಕಿತ ಸ್ಥಳಗಳ ಮೇಲೆ ದಾಳಿ ನಡೆಸಿದರು. ಇಲ್ಲಿಯವರೆಗೂ 19 ಮಂದಿಯನ್ನು ಬಂಧಿಸಲಾಗಿದೆ. 3 ಸಾವಿರ ಬಾಟಲ್​ಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಪೊಲೀಸರಿಂದ ಎಚ್ಚರಿಕೆ

ಲೇಬಲ್​ ಇಲ್ಲದ ಯಾವುದೇ ಮದ್ಯ ಸೇವನೆ ಮಾಡಬೇಡಿ ಎಂದು ಪೊಲೀಸರು ಸಾರ್ವಜನಿಕರಿಗೆ ಸಲಹೆ ಕೊಟ್ಟಿದ್ದಾರೆ. ಮದ್ಯ ಸೇವಿಸಿದ ನಂತರ ತಲೆ ಸುತ್ತುವುದು, ದೃಷ್ಟಿ ಮಂಜಾಗುವುದು, ಉಸಿರಾಟ ತೊಂದರೆಯಾದರೆ ಅಥವಾ ಪ್ರಜ್ಞೆ ತಪ್ಪಿದಂತಾದರೆ ಕೂಡಲೇ ವೈದ್ಯರನ್ನು ಭೇಟಿ ಮಾಡಿ ಚಿಕಿತ್ಸೆ ಪಡೆದುಕೊಳ್ಳಿ. ಇಲ್ಲದಿದ್ದರೆ ಆರೋಗ್ಯಕ್ಕೆ ಹಾನಿಯಾಗುವ ಸಾಧ್ಯತೆ ಇದೆ ಎಂದು ಪೊಲೀಸರು ಎಚ್ಚರಿಕೆ ಕೊಟ್ಟಿದ್ದಾರೆ, (ಏಜೆನ್ಸೀಸ್)