ನ್ಯೂಸ್

ಫೆಂಗಲ್ ಚಂಡಮಾರುತಕ್ಕೆ 19 ಮಂದಿ ಬಲಿ; ಅಪಾರ ನಷ್ಟ!

ತಮಿಳುನಾಡು, ಪುದುಚೇರಿ, ಶ್ರೀಲಂಕಾದಲ್ಲಿ ಮಳೆ ಅಬ್ಬರ | ದುರ್ಬಲಗೊಂಡು ಒಳನಾಡಿನತ್ತ ಸಾಗಿದ ಸೈಕ್ಲೋನ್

ನವದೆಹಲಿ: ತಮಿಳುನಾಡು ಮತ್ತು ಪುದುಚೇರಿಯಲ್ಲಿ ಅಪಾರ ಹಾನಿಯೆಸಗಿ ಭಾರತ ಮತ್ತು ಶ್ರೀಲಂಕಾದಲ್ಲಿ ಒಟ್ಟು 19 ಜನರ ಬಲಿ ತೆಗೆದುಕೊಂಡ ಫೆಂಗಲ್ ಚಂಡಮಾರುತ ಇದೀಗ ದುರ್ಬಲಗೊಂಡು ತಮಿಳುನಾಡಿನ ಒಳನಾಡಿನಲ್ಲಿ ವಾಯುಭಾರ ಒತ್ತಡವಾಗಿ ಪರಿವರ್ತನೆಗೊಂಡಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಸೋಮವಾರ ತಿಳಿಸಿದೆ. ಆದರೆ, ಈಗ ದುರ್ಬಲಗೊಂಡಿರುವ ವಾಯುಭಾರ ಒತ್ತಡ ಮಂಗಳವಾರದ ಹೊತ್ತಿಗೆ ಅರಬ್ಬಿ ಸಮುದ್ರದಲ್ಲಿ ಕರ್ನಾಟಕ ಮತ್ತು ಕೇರಳ ಕರಾವಳಿಯಾಚೆ ಕಾಣಿಸಿಕೊಳ್ಳಲಿದೆ ಎಂದು ಐಎಂಡಿ ಮುನ್ಸೂಚನೆ ನೀಡಿದೆ.

ಫೆಂಗಲ್ ಚಂಡಮಾರುತದಿಂದ ತಮಿಳುನಾಡಿನ ಅನೇಕ ಜಿಲ್ಲೆಗಳು ಮತ್ತು ಪುದುಚೇರಿ ಅತಿ ಹೆಚ್ಚು ಸಂತ್ರಸ್ತವಾಗಿವೆ. ಹಲವು ಜಿಲ್ಲೆಗಳಲ್ಲಿ ಶಾಲೆ-ಕಾಲೇಜ್​ಗಳಿಗೆ ರಜೆ ಘೋಷಿಸಲಾಗಿದೆ. ತುಂಬಾ ತೊಂದರೆಗೊಳಗಾದ ಪುದುಚೇರಿ, ಕಳೆದ 30 ವರ್ಷಗಳಲ್ಲೇ, 24 ಗಂಟೆ ಅವಧಿಯಲ್ಲಿ ಅತಿ ಹೆಚ್ಚಿನ ಮಳೆ ಪಡೆದ ದಾಖಲೆಗೆ ಸಾಕ್ಷಿಯಾಗಿದೆ. ನವೆಂಬರ್ 30ರಂದು ಕೇಂದ್ರಾಡಳಿತ ಪ್ರದೇಶ ಪುದುಚೇರಿಯನ್ನು ಫೆಂಗಲ್ ಅಪ್ಪಳಿಸಿದ್ದು, ಸೈನಿಕರು ರಕ್ಷಣೆ ಮತ್ತು ಪರಿಹಾರ ಕಾರ್ಯದಲ್ಲಿ ತೊಡಗಿದ್ದಾರೆ. 600ಕ್ಕೂ ಹೆಚ್ಚು ಜನರನ್ನು ರಕ್ಷಿಸಲಾಗಿದೆ. ಅನೇಕ ಮನೆಗಳು ಮತ್ತು ರಸ್ತೆಗಳು ಈಗಲೂ ಜಲಾವೃತವಾಗಿವೆ. ವಿಲ್ಲುಪುರಂ ಮತ್ತು ಕಡಲೂರಿನಲ್ಲಿ ಪ್ರವಾಹ ಪರಿಸ್ಥಿತಿ ಗಂಭೀರವಾಗಿದೆ.

ಕೆಲವು ದಿನಗಳಿಂದ ಕಾಡುತ್ತಿರುವ ಫೆಂಗಲ್ ಚಂಡಮಾರುತಕ್ಕೆ ಶ್ರೀಲಂಕಾ ಮತ್ತು ಭಾರತದಲ್ಲಿ ಒಟ್ಟು 19 ಜನರು ಮೃತಪಟ್ಟಿದ್ದಾರೆ. ಚೆನ್ನೈನಲ್ಲಿ ಮಳೆ ಸಂಬಂಧಿತ ಘಟನೆಗಳಲ್ಲಿ ವಿದ್ಯುತ್ ಆಘಾತಗಳಿಂದ ಮೂರು ಜನರು ಸಾವಿಗೀಡಾಗಿದ್ದಾರೆ. ಪುದುಚೇರಿಯಲ್ಲಿ ಫೆಂಗಲ್ ಅಬ್ಬರ ನಡೆಸಿದ ವಿನಾಶ ಹೇಗಿತ್ತೆಂದರೆ ಹಲವು ದಶಕಗಳಲ್ಲಿ ತಾವು ಇಂಥ ನಾಶವನ್ನು ಕಂಡಿರಲಿಲ್ಲ ಎಂದು ವಯೋವೃದ್ಧರನೇಕರು ಹೇಳಿದ್ದಾರೆ.

ಕೊಚ್ಚಿ ಹೋದ ಬಸ್​ಗಳು

ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ಉತ್ತನಗಿರಿಯಲ್ಲಿ ಸತತ 14 ಗಂಟೆ ಬಿದ್ದ ಮಳೆಯಿಂದ ಉಂಟಾದ ಪ್ರವಾಹದ ಉಬ್ಬರಕ್ಕೆ ಹಲವು ಬಸ್ ಮತ್ತು ಕಾರುಗಳು ಕೊಚ್ಚಿಹೋದವು.

ಭೂಕುಸಿತಕ್ಕೆ ಸಿಲುಕಿರುವ 7 ಮಂದಿ

ಭಾರಿ ಮಳೆಯ ಪರಿಣಾಮದಿಂದ ತಿರುವಣ್ಣಾಮಲೈಯಲ್ಲಿ ಭಾನುವಾರ ಸಂಜೆ ಭೂಕುಸಿತವಾಗಿದ್ದು ಏಳು ಜನರು ಅವಶೇಷಗಳಡಿ ಸಿಕ್ಕಿ ಹಾಕಿಕೊಂಡಿದ್ದಾರೆ. ಎನ್​ಡಿಆರ್​ಎಫ್ ಸಿಬ್ಬಂದಿ, ಕಮಾಂಡೋ ಮತ್ತು ತಮಿಳುನಾಡು ಅಗ್ನಿಶಾಮಕ ಪಡೆಯ ಸುಮಾರು 170 ಸಿಬ್ಬಂದಿ, ಸಂತ್ರಸ್ತರನ್ನು ರಕ್ಷಿಸುವ ಕಾರ್ಯ ಮುಂದುವರಿಸಿದ್ದಾರೆ.