ನ್ಯೂಸ್

ಒಂದೇ ತಿಂಗಳಲ್ಲಿ 19.88 ಲಕ್ಷ ಹೊಸ ಉದ್ಯೋಗಿಗಳು ಇಎಸ್ ಐಸಿಗೆ ಸೇರ್ಪಡೆ !

ಬೆಂಗಳೂರು: ದೇಶದಲ್ಲಿ ಹೆಚ್ಚುತ್ತಿರುವ ನಿರುದ್ಯೋಗಿ ಸಮಸ್ಯೆ ನಿವಾರಣೆಗೆ ಕೇಂದ್ರ, ರಾಜ್ಯ ಸರ್ಕಾರಗಳು ಕೈಗೊಂಡಿರುವ ಕ್ರಮಗಳು ಸಾಲದು ಎಂಬ ಕೂಗುಗಳ ನಡುವೆ ಜುಲೈ ತಿಂಗಳೊಂದರಲ್ಲಿಯೇ 19.88 ಲಕ್ಷ ಹೊಸ ಉದ್ಯೋಗಿಗಳು ನೌಕರರ ರಾಜ್ಯ ವಿಮಾ ನಿಗಮ ( ಇಎಸ್ ಐಸಿ)ದ ತಾತ್ಕಾಲಿಕ ವೇತನದಾರರ ಪಟ್ಟಿಗೆ ಸೇರ್ಪಡೆಯಾದ ಮಹತ್ವದ ಅಂಶ ಬಹಿರಂಗವಾಗಿದೆ.

ಹೊಸ ಉದ್ಯೋಗಿಗಳಲ್ಲಿ 25 ವರ್ಷದೊಳಗಿನ ಯುವ ಸಮೂಹದ ಸಂಖ್ಯೆ 9.54 ಲಕ್ಷ (ಶೇಕಡ 47.9) ರಷ್ಟಿದೆ. ಜತೆಗೆ 52 ಜನ ತೃತೀಯ ಲಿಂಗಿಗಳು ನೌಕರಿ ಗಿಟ್ಟಿಸಿಕೊಂಡವರ ಪಟ್ಟಿಯಲ್ಲಿ ಸೇರಿದ್ದಾರೆ ಎಂದು ಕೇಂದ್ರದ ಉದ್ಯೋಗ ಹಾಗೂ ಕಾರ್ಮಿಕ ಸಚಿವಾಲಯ ಈ ಮಾಹಿತಿ ಹಂಚಿಕೊಂಡಿದೆ.

ಲಿಂಗವಾರು ದತ್ತಾಂಶದ ವಿಶ್ಲೇಷಣೆ ಪ್ರಕಾರ ಹೊಸದಾಗಿ ಉದ್ಯೋಗ ಪಡೆದವರಲ್ಲಿ 3.84 ಲಕ್ಷ ಮಹಿಳೆಯರಿದ್ದಾರೆ. ಅಲ್ಲದೆ, ಇಎಸ್ ಐಸಿ ಯ ಸಾಮಾಜಿಕ ಭದ್ರತಾ ಯೋಜನೆಯ ಸೂರಿನಡಿ 27,870 ಹೊಸ ಕಂಪನಿಗಳು ತಮ್ಮ ಹೆಸರು ನೋಂದಣಿ ಮಾಡಿಕೊಂಡಿರುವುದು ಗಮನಾರ್ಹ ಬೆಳವಣಿಗೆಯಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.