ನ್ಯೂಸ್

2 ಲಕ್ಷ ರೂ. ಕೊಟ್ಟು IPS ಕೆಲಸ ಪಡೆದ 18ರ ಯುವಕ! ಗ್ರಾಮದಲ್ಲಿ ಬಿಲ್ಡಪ್​ ಕೊಡುವಾಗ ಕಾದಿತ್ತು ಬಿಗ್​ ಶಾಕ್​

ಪಟನಾ: ಬಿಹಾರದ ಜಮುಯಿ ನಗರದಲ್ಲಿ ಉದ್ಯೋಗದ ಹೆಸರಿನಲ್ಲಿ ವಂಚನೆ ಎಸಗಿರುವ ದೊಡ್ಡ ಪ್ರಕರಣವೊಂದು ಬೆಳಕಿಗೆ ಬಂದಿದೆ. ಇಲ್ಲಿನ ವಂಚಕರು ಐಪಿಎಸ್​ ಅಧಿಕಾರಿಯನ್ನಾಗಿ ಮಾಡುವುದಾಗಿ ನಂಬಿಸಿ 2 ಲಕ್ಷ ರೂಪಾಯಿ ತೆಗೆದುಕೊಂಡು ಯುವಕನೊಬ್ಬನಿಗೆ ಮೋಸ ಮಾಡಿದ್ದಾರೆ. ನಕಲಿ ಐಪಿಎಸ್ ಅಧಿಕಾರಿಯನ್ನು ಜಮುಯಿ ಸಬ್​ ಇನ್ಸ್​ಪೆಕ್ಟರ್​ ಬಂಧಿಸಿದ್ದು, ವಿಚಾರಣೆ ನಡೆಸಿದ ಬಳಿಕ ಅಸಲಿ ವಿಷಯ ಬೆಳಕಿಗೆ ಬಂದಿದೆ. ಇದೀಗ ಪೊಲೀಸರು ಇಡೀ ಪ್ರಕರಣದ ತನಿಖೆ ಆರಂಭಿಸಿದ್ದಾರೆ.

ವರದಿಗಳ ಪ್ರಕಾರ ಮನೋಜ್ ಸಿಂಗ್ ಎಂಬ ವಂಚಕ 18 ವರ್ಷದ ಮಿಥಿಲೇಶ್ ಮಾಂಝಿ ಎಂಬಾತನನ್ನು ಐಪಿಎಸ್ ಅಧಿಕಾರಿ ಮಾಡುವುದಾಗಿ ಪುಸಲಾಯಿಸಿ 2 ಲಕ್ಷ ರೂಪಾಯಿ ಹಣ ಪಡೆದು, ನಕಲಿ ಪಿಸ್ತೂಲ್​ ಮತ್ತು ಯೂನಿಫಾರ್ಮ್​ ನೀಡಿ ವಂಚನೆ ಮಾಡಿದ್ದಾನೆ. ಬಂಧಿತ ಯುವಕ ಮಿಥಿಲೇಶ್​ನಿಂದ ಪಲ್ಸರ್​ ಬೈಕ್​, ಪಿಸ್ತೂಲ್​ ಹಾಗೂ ಯೂನಿಫಾರ್ಮ್​ ವಶಕ್ಕೆ ಪಡೆಯಲಾಗಿದೆ. ಈ ವಂಚನೆಯಿಂದ ಒಂದು ದೊಡ್ಡ ಜಾಲ ಇರುವ ಶಂಕೆ ವ್ಯಕ್ತವಾಗಿದೆ.

ಈ ಬಗ್ಗೆ ಮಾತನಾಡಿರುವ ಬಂಧಿತ ಮಿಥಿಲೇಶ್​, ಇತ್ತೀಚೆಗೆ ನಾನು ಜಲಪಾತ ವೀಕ್ಷಿಸಲು ಪ್ರವಾಸಕ್ಕೆ ಹೋದಾಗ ಅಲ್ಲಿ ಒಬ್ಬರನ್ನು ಭೇಟಿಯಾದೆ. ಅವರ ಮಾಟದ ಮಾತುಗಳನ್ನು ಕೇಳಿ ಮರುಳಾದೆ. ಕಡಿಮೆ ಹಣದಲ್ಲಿ ಐಪಿಎಸ್ ಅಧಿಕಾರಿಯನ್ನಾಗಿ ಮಾಡುತ್ತೇನೆ ಎಂದು ನಂಬಿಸಿದರು. ಅವರು ಆಡಿದ ಮಾತುಗಳನ್ನು ಕೇಳಿ ನಾನು ಕೂಡ ನಿಜವೆಂದು ನಂಬಿದೆ ಮತ್ತು ಒಳಗೊಳಗೆ ಖುಷಿಪಡುತ್ತಿದೆ. ನನಗೆ ಎಲ್ಲರೂ ಗೊತ್ತಿದೆ ಮತ್ತು ಸುಲಭವಾಗಿ ಕೆಲಸ ಕೊಡಿಸುತ್ತೇನೆಂದು ನಂಬಿಸಿದರು. ಅದಕ್ಕಾಗಿ ಎರಡು ದಿನದಲ್ಲಿ 2 ಲಕ್ಷ ರೂ. ಹಣ ಹೊಂದಿಸುವಂತೆ ಹೇಳಿದರು. ಇದಾದ ಬಳಿಕ ನಾನು ಸಂಬಂಧಿಕರ ಬಳಿ ಒತ್ತಾಯ ಮಾಡಿ ಎರಡು ಲಕ್ಷ ಸಾಲ ರೂ. ಪಡೆದು ವಂಚಕನಿಗೆ ನೀಡಿದೆ. ಇದಾದ ಬಳಿಕ ವಂಚಕರು ಸಮವಸ್ತ್ರದ ಜತೆಗೆ ನಕಲಿ ಪಿಸ್ತೂಲ್ ನೀಡಿದರು ಎಂದು ಮಿಥಿಲೇಶ್​ ಹೇಳಿದ್ದಾನೆ.

ಅಂದಹಾಗೆ ಬಂಧಿತ ಮಿಥೀಲೇಶ್​ ತಾನೊಬ್ಬ ಐಪಿಎಸ್​ ಅಧಿಕಾರಿ ಎಂದು ತನ್ನ ಗ್ರಾಮದಲ್ಲಿ ಬಡಾಯಿ ಕೊಚ್ಚಿಕೊಳ್ಳುವಾಗ ಅಲ್ಲಿನ ಜನರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಸ್ಥಳಕ್ಕೆ ಬಂದ ಪೊಲೀಸರು ಮಿಥಿಲೇಶ್​ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಅಸಲಿ ಸಂಗತಿ ಬಯಲಾಗಿದೆ. ಈ ಮಿಥಿಲೇಶ್​ ಸಮೋಸಾ ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದ ಎಂದು ತಿಳಿದುಬಂದಿದೆ.

ಇದೇ ಪ್ರಕರಣಕ್ಕೆ ಸಂಬಂಧಸಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋವೊಂದು ವೈರಲ್ ಆಗಿದ್ದು, ಅದರಲ್ಲಿ ನಕಲಿ ಅಧಿಕಾರಿ ಮಿಥಿಲೇಶ್​ನನ್ನು ಪೊಲೀಸ್​ ಠಾಣೆಗೆ ಸ್ವಾಗತಿಸುತ್ತಿರುವ ದೃಶ್ಯವಿದೆ. ಪೇದೆಯೊಬ್ಬರು ತಮಾಷೆಯಾಗಿ "ಬನ್ನಿ ಸರ್, ಐಪಿಎಸ್...ಸಿಖಂದರ್​ ಪೊಲೀಸ್ ಠಾಣೆಗೆ" ಎಂದು ವ್ಯಂಗ್ಯವಾಡಿದ್ದಾರೆ. (ಏಜೆನ್ಸೀಸ್​)