ನ್ಯೂಸ್

ನಶೆಯ ಪಾಶದಲ್ಲಿ ರಾಜ್ಯದ 18 ಲಕ್ಷ ಮಾದಕ ವ್ಯಸನಿಗಳು

| ಕೀರ್ತಿನಾರಾಯಣ ಸಿ. ಬೆಂಗಳೂರು

ಸ್ಯಾಂಡಲ್​ವುಡ್ ಡ್ರಗ್ಸ್ ಮಾಫಿಯಾದ ಆಳ-ಅಗಲ ಕೆದಕುತ್ತಿರುವ ಎನ್​ಸಿಬಿ (ಮಾದಕ ದ್ರವ್ಯ ನಿಯಂತ್ರಣ ಮಂಡಳಿ) ಈ ಜಾಲದಲ್ಲಿರುವ ‘ಶ್ರೀಮಂತ ಕುಳ’ಗಳ ಜಾತಕ ಬಯಲಿಗೆಳೆಯಲು ಖೆಡ್ಡಾ ತೋಡಿರುವ ಬೆನ್ನಲ್ಲೇ ಕರ್ನಾಟಕದಲ್ಲಿ 18.07 (ಶೇ.2.82) ಲಕ್ಷ ಮಾದಕ ದ್ರವ್ಯ ವ್ಯಸನಿಗಳಿರುವ ಆತಂಕಕಾರಿ ವಿಚಾರ ಬಹಿರಂಗವಾಗಿದೆ.

ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಎಐಐಎಂಎಸ್) ಹಾಗೂ ರಾಷ್ಟ್ರೀಯ ಮದ್ಯ ವ್ಯಸನಿಗಳ ಚಿಕಿತ್ಸಾ ಕೇಂದ್ರದ (ಎನ್​ಡಿಡಿಟಿಸಿ) ಸಹಯೋಗದಲ್ಲಿ ಕೇಂದ್ರ ಸರ್ಕಾರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆ ಸಿದ್ಧಪಡಿಸಿರುವ 2019ರ ವರದಿಯಲ್ಲಿ ಈ ಮಾಹಿತಿ ಉಲ್ಲೇಖವಾಗಿದೆ. ಒಟ್ಟಾರೆ ದೇಶಾದ್ಯಂತ 9.9 ಕೋಟಿ (ಶೇ.7.53) ಜನರು ಮಾದಕ ವ್ಯಸನಿಗಳಾಗಿದ್ದು, 15ರಿಂದ 64 ವಯೋಮಾನದವರು ಡ್ರಗ್ಸ್ ಚಟ ಅಂಟಿಸಿಕೊಂಡಿದ್ದಾರೆ.

ಮಾದಕ ವ್ಯಸನದಲ್ಲಿ ಪುರುಷರ ಪಾಲು ಶೇ.5.2 ಇದ್ದು, ಶೇ.0.6 ಮಹಿಳೆಯರಿದ್ದಾರೆ. 10 ರಿಂದ 17 ವರ್ಷದ ಮಕ್ಕಳು ಶೇ.0.9 ಹಾಗೂ 18 ವರ್ಷದ ಯುವಕರು ಶೇ.3.3 ಇದ್ದಾರೆ. ಭಾರತದಲ್ಲಿ ಪ್ರತಿನಿತ್ಯ 100 ಕೋಟಿ ಮೌಲ್ಯದ ಹೆರಾಯಿನ್ ಡ್ರಗ್ಸ್ ಮಾರಾಟ ಆಗುತ್ತದೆ.

ಉಳಿದಂತೆ ದೇಶಾದ್ಯಂತ ಗಾಂಜಾ, ಚರಸ್, ಕೊಕೇನ್, ಒಪಿಯಾಡ್ಸ್, ಮಾನಸಿಕ ಅಸ್ವಸ್ಥತೆ ಮಾತ್ರೆಗಳು, ಮೂಸುವ (ಇನ್​ಹೇಲೆಂಟ್) ಮತ್ತು ಇಂಜೆಕ್ಟ್ ಮಾಡಿಕೊಳ್ಳುವ ಮಾದಕ ವಸ್ತುಗಳ ಬಳಕೆ ಜಾಸ್ತಿ ಇದೆ. ಪ್ರತಿನಿತ್ಯ ಸಾವಿರಾರು ಕೋಟಿ ರೂ. ಮೌಲ್ಯದ ಡ್ರಗ್ಸ್ ವಹಿವಾಟು ನಡೆಯುತ್ತದೆ.

ಅದರಲ್ಲೂ ಗಾಂಜಾ ಹಾಗೂ ಚರಸ್ ಬಳಕೆ ಪ್ರಮಾಣ ಹೆಚ್ಚು. ಪೊಲೀಸರ ಅಂದಾಜಿನ ಪ್ರಕಾರ ಕರ್ನಾಟಕದಲ್ಲೇ ವಾರ್ಷಿಕ 450 ರಿಂದ 500 ಕೋಟಿ ರೂ. ವಹಿವಾಟು ನಡೆಯುತ್ತದೆ. ದೇಶದಲ್ಲಿರುವ ಒಟ್ಟಾರೆ ಮಾದಕ ವ್ಯಸನಿಗಳ ಪೈಕಿ 3.1 ಕೋಟಿ ವ್ಯಸನಿಗಳು ಗಾಂಜಾ ಹಾಗೂ ಚರಸ್ ಸೇವನೆ ಮಾಡುತ್ತಾರೆ. 2.3 ಕೋಟಿ ಮಂದಿ ಒಪಿಯಾಡ್ಸ್ ಸೇವಿಸುತ್ತಾರೆ. 8.5 ಲಕ್ಷ ಮಂದಿ ಇಂಜೆಕ್ಷನ್ ಚುಚ್ಚಿಕೊಂಡು ನಶೆ ಏರಿಸಿಕೊಳ್ಳುತ್ತಾರೆ. 77 ಲಕ್ಷ ಮಂದಿ ಮೂಸುವ ಶೈಲಿಯ ಮಾದಕ ದ್ರವ್ಯಗಳನ್ನು ಬಳಕೆ ಮಾಡುತ್ತಾರೆ.

ದೇಶದಲ್ಲಿ ಯಾವುದಕ್ಕೆ ಬೇಡಿಕೆ?

  • ಗಾಂಜಾ/ಚರಸ್-ಶೇ.2.83
  • ಒಪಿಯಾಡ್ಸ್-ಶೇ.2.06
  • ಮಾನಸಿಕ ಮಾತ್ರೆ-ಶೇ.1.08
  • ಆಂಪಿಟಮೈನ್-ಶೇ.0.18
  • ಮೂಸುವ ಡ್ರಗ್ಸ್-ಶೇ.0.70

ನೈಋತ್ಯ ಏಷ್ಯಾದಿಂದ ಹೆರಾಯಿನ್!

ಹೆರಾಯಿನ್ ಡ್ರಗ್ಸ್ ನೈಋತ್ಯ ಏಷ್ಯಾ ಭಾಗದಿಂದ ಸಮುದ್ರ ಮಾರ್ಗವಾಗಿ ಭಾರತಕ್ಕೆ ಕಳ್ಳ ಮಾರ್ಗದಲ್ಲಿ ಪೂರೈಕೆಯಾಗುತ್ತದೆ. ಭಾರತದಿಂದ ಮತ್ತೆ ಬೇರೆ ಬೇರೆ ದೇಶಗಳಿಗೆ ಕಳ್ಳ ಸಾಗಣೆಯಾಗುತ್ತದೆ. ಹಶಿಷ್ ಮಾದಕ ಪದಾರ್ಥ ನೇಪಾಳದಿಂದ ಭಾರತಕ್ಕೆ ಬರುತ್ತದೆ. ಡ್ರಗ್ಸ್ ಏಜೆಂಟ್​ಗಳ ಮುಖಾಂತರ ದೇಶದ ಪ್ರಮುಖ ನಗರಗಳಿಗೆ ತಲುಪಿಸಲಾಗುತ್ತದೆ. ಪ್ರತಿಯೊಂದು ವಹಿವಾಟು ಕೋಡ್ ವರ್ಡ್​ಗಳಲ್ಲೇ ನಡೆಯುತ್ತದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡುತ್ತಾರೆ.

ಎಲ್ಲಿಂದ ಹೇಗೆ ಸಾಗಣೆ?

*ಎಫೆಡ್ರೖೆನ್/ಸಿಯಡೊಫೆಡ್ರೖೆನ್ ಡ್ರಗ್ಸ್ ಇಂಡೋ-ಮ್ಯಾನ್ಮಾರ್ ಗಡಿಭಾಗದ ಮೂಲಕ ಪೂರೈಕೆ

*ಸೈಕೋಟ್ರೋಪಿಕ್ ಪದಾರ್ಥ ಹೊಂದಿರುವ ಡ್ರಗ್ಸ್ ಭಾರತದಿಂದ ವಿದೇಶಕ್ಕೆ ಸರಬರಾಜು.

*ಆನ್​ಲೈನ್ ಫಾರ್ಮಸಿ ಮತ್ತು ಕೊರಿಯರ್ ಸೇವೆ ದುರ್ಬಳಕೆ ಮಾಡಿಕೊಂಡು ಡ್ರಗ್ಸ್ ಸಾಗಾಟ.

*ಆಯುರ್ವೆಧ ಔಷಧ ಮಧ್ಯಪೂರ್ವ ಆಸ್ಟ್ರೇಲಿಯಾ, ಪಾಶ್ಮಿಮಾತ್ಯ ದೇಶಗಳಿಗೆ ಸಾಗಾಟ

*ಮಾದಕ ಪದಾರ್ಥ ಪೂರೈಕೆ/ಮಾರಾಟಕ್ಕೆ ಬಿಟ್ ಕಾಯಿನ್ ಬಳಕೆ, ವಿದೇಶಿಗರ ಸಂಖ್ಯೆ ಹೆಚ್ಚು.

ಬಿಗಿಯಾಗದ ಖಾಕಿ

ಕರ್ನಾಟಕದಲ್ಲಿ ಡ್ರಗ್ಸ್ ಜಾಲ ನಿಯಂತ್ರಣ ಉದ್ದೇಶದಿಂದ 2019ರಲ್ಲೇ ಡಿಜಿಪಿ ಕಟ್ಟುನಿಟ್ಟಿನ ಆದೇಶ ಹೊರಡಿಸಿದ್ದರು. ಡ್ರಗ್ಸ್ ಉತ್ಪಾದನೆ, ಪ್ರದೇಶ, ಸರಬರಾಜು ವ್ಯವಸ್ಥೆ, ಪೂರೈಕೆದಾರರು ಯಾರೆಂಬ ವಿವರ ಸಂಗ್ರಹಿಸಬೇಕು. ಡ್ರಗ್ಸ್ ಸೇವಿಸುವವರು, ಆರ್ಥಿಕ ಮೂಲ, ಮಾದಕ ವಸ್ತು ಮಾದರಿಗಳ ಬಗ್ಗೆ ನಿಗಾ ವಹಿಸಬೇಕು. ರಾಜ್ಯದ ಎಲ್ಲ ಸೂಕ್ಷ್ಮ ಗಡಿ ಭಾಗಗಳು ಹಾಗೂ ಹೊರ ರಾಜ್ಯಗಳ ಚೆಕ್​ಪೋಸ್ಟ್​ಗಳಲ್ಲಿ ಪರಿಶೀಲಿಸಬೇಕು. ಮಾದಕ ವಸ್ತು ನಿಯಂತ್ರಣ ಇಲಾಖೆ ಜತೆ ಸಮನ್ವಯದೊಂದಿಗೆ ಔಷಧ ಮಳಿಗೆಗಳ ಮೇಲೆ ನಿಗಾ ಇಡಬೇಕು. ಖಾಸಗಿ/ಸರ್ಕಾರಿ ವ್ಯಸನಮುಕ್ತಿ ಕೇಂದ್ರಗಳಲ್ಲಿ ದಾಖಲಾಗುವ ಡ್ರಗ್ಸ್ ವ್ಯಸನಿಗಳ ವಿವರ ಸಂಗ್ರಹಿಸಬೇಕು ಎಂದು ಆದೇಶಿಸಿದ್ದರು. ಆದರೆ, ಪರಿಣಾಮಕಾರಿಯಾಗಿ ಜಾರಿಯಾಗಿಲ್ಲ.

ಯಾವ ರಾಜ್ಯಗಳಲ್ಲಿ ಜಾಸ್ತಿ?

ಪಂಜಾಬ್, ದೆಹಲಿ, ಸಿಕ್ಕಿಂ, ಮಿಜೋರಾಂ, ನಾಗಾಲ್ಯಾಂಡ್, ಅರುಣಾಚಲ ಪ್ರದೇಶ, ಕರ್ನಾಟಕ, ತೆಲಂಗಾಣ, ಆಂಧ್ರಪ್ರದೇಶ, ಉತ್ತರ ಪ್ರದೇಶ, ಜಮ್ಮು-ಕಾಶ್ಮೀರ ರಾಜ್ಯಗಳಲ್ಲಿ ಡ್ರಗ್ಸ್ ಮಾಫಿಯಾ ಹೆಚ್ಚೆಂದು ವರದಿ ಹೇಳಿದೆ.

ಸಾವಿನಂಚಿಗೆ ತಂದ ಡ್ರಗ್ಸ್

ದೇಶಾದ್ಯಂತ ಗಾಂಜಾ ಮತ್ತು ಚರಸ್ ಸೇವಿಸುವ 3.1 ಕೋಟಿ ವ್ಯಸನಿಗಳಲ್ಲಿ 72 ಲಕ್ಷ ಮಂದಿ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಅದೇ ರೀತಿ ಒಪಿಯಾಡ್ಸ್ ಸೇವಿಸುವ 77 ಲಕ್ಷ ವ್ಯಸನಿಗಳು ಹಾಗೂ ಮೂಸುವ ಡ್ರಗ್ಸ್ ಬಳಸುವ 22 ಲಕ್ಷ ವ್ಯಸನಿಗಳು ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎಂದು ವರದಿಯಲ್ಲಿ ವಿವರಿಸಲಾಗಿದೆ.

ಬೆಂಗಳೂರಿನಲ್ಲಿ ಪತ್ತೆಯಾದ ಡ್ರಗ್ಸ್ ಜಾಲದ ತನಿಖೆ ಮುಂದುವರಿದಿದೆ. ಸ್ಯಾಂಡಲ್​ವುಡ್​ನ ನಟ-ನಟಿಯರು ಸೇರಿ ಹಲವರ ಹೆಸರು ಕೇಳಿಬಂದಿದೆ. ಈ ಹಂತದಲ್ಲಿ ಹೆಚ್ಚಿನ ಮಾಹಿತಿ ಬಹಿರಂಗಪಡಿಸಲಾಗದು. ಬೆಂಗಳೂರಿನ ಡ್ರಗ್ಸ್ ಪ್ರಕರಣದ ಜತೆಗೆ ಮುಂಬೈನಲ್ಲಿ ಪತ್ತೆಯಾದ ಡ್ರಗ್ಸ್ ಕೇಸಿನ ತನಿಖೆಯನ್ನೂ ಕೈಗೆತ್ತಿಕೊಳ್ಳಲಾಗಿದೆ. | ಅಮಿತ್ ಘಾವಟೆ ಪ್ರಾದೇಶಿಕ ನಿರ್ದೇಶಕ, ಎನ್​ಸಿಬಿ , ಬೆಂಗಳೂರು

ಸಾವಿರಾರು ಟನ್ ಜಪ್ತಿ!

ಡ್ರಗ್ಸ್ ಹೊರತುಪಡಿಸಿ ಪ್ರತಿವರ್ಷ ಸಾವಿರಾರು ಟನ್ ಮಾದಕ ವಸ್ತುವನ್ನು ಜಪ್ತಿ ಮಾಡಲಾಗುತ್ತದೆ. 2018ರಲ್ಲಿ 5610 ಟನ್ ಗಾಂಜಾ/ಚರಸ್ ಜಪ್ತಿಯಾಗಿದೆ. ಕೊಕೇನ್ 1131, ಒಪಿಯಾಡ್ಸ್ 704, ಮೆಥಾಂಡೆಟಮೈನ್ 222, ಹೆರಾಯಿನ್/ಮರ್ಫೆನ್ 139 ಟನ್, ಆಂಪಿಟಮೈನ್ 21 ಹಾಗೂ ಎಕ್​ಸ್ಟೇಸಿ 12 ಟನ್ ವಶಪಡಿಸಿಕೊಳ್ಳಲಾಗಿದೆ.