ನ್ಯೂಸ್

17 ಉಗ್ರರೀಗ ತಾಲಿಬಾನ್ ಸಚಿವರು! ಅಫ್ಘಾನಿಸ್ತಾನದ ಗೃಹಮಂತ್ರಿ ತಲೆಗೆ 73 ಕೋಟಿ ರೂಪಾಯಿ ಇನಾಮು

ಕಾಬುಲ್: ಕೆಲವು ತಿಂಗಳ ಹಿಂದಷ್ಟೇ ವಿಶ್ವಸಂಸ್ಥೆಯ ಹಿಟ್​ಲಿಸ್ಟ್​ನಲ್ಲಿದ್ದ 17 ಜಾಗತಿಕ ಉಗ್ರರು ಈಗ ಅಫ್ಘಾನಿಸ್ತಾನದ ಚುಕ್ಕಾಣಿ ಹಿಡಿದಿರುವ ತಾಲಿಬಾನ್ ಸರ್ಕಾರದಲ್ಲಿ ಸಚಿವರು! ಅಫ್ಘಾನಿಸ್ತಾನವು ಅಮೆರಿಕ ಹಾಗೂ ನ್ಯಾಟೋ ಪಡೆಗಳ ಕಣ್ಗಾವಲಿನಲ್ಲಿದ್ದಾಗ ಹೆದರಿ ರಹಸ್ಯ ಸುರಂಗ ಸೇರಿಕೊಂಡಿದ್ದ ತಾಲಿಬಾನ್​ನ ಕುಖ್ಯಾತ ಮುಖಂಡರು ಅಫ್ಘನ್ ಸರ್ಕಾರದಲ್ಲಿ ಪ್ರಮುಖ ಹೊಣೆಗಾರಿಕೆ ಹೊತ್ತಿರುವುದು ಭಯೋತ್ಪಾದನೆ ವಿರುದ್ಧದ ಜಾಗತಿಕ ಹೋರಾಟವನ್ನೇ ಅಣಕಿಸುವಂತಿದೆ. ತಾಲಿಬಾನ್ ಸರ್ಕಾರದ ಹೊಸ ಸಂಪುಟದಲ್ಲಿ ಗೃಹ ಸಚಿವನಾಗಿರುವ ಸಿರಾಜುದ್ದೀನ್ ಹಕ್ಕಾನಿ ತಲೆಗೆ 73 ಕೋಟಿ ರೂ. ಇನಾಮು ಘೋಷಣೆಯಾಗಿದೆ.

ವಿಶ್ವಸಂಸ್ಥೆಯಲ್ಲಿ ಅಫ್ಘನ್​ನ ಕಾಯಂ ಪ್ರತಿನಿಧಿ ಗುಲಾಂ ಎಂ ಇಸಾಕ್​ರೆೈ ಬುಧವಾರ ಸಚಿವ ಸಂಪುಟ ಕುರಿತು ಪ್ರತಿಕ್ರಿಯೆ ನೀಡಿದ್ದು, ಹೊಸ ತಾಲಿಬಾನ್ ಸಚಿವ ಸಂಪುಟದ 33 ಸಚಿವರ ಪೈಕಿ ಮುಲ್ಲಾ ಮುಹಮ್ಮದ್ ಹಸನ್ ಅಖುಂಡ್ (ಪ್ರಧಾನಿ), ಮುಲ್ಲಾ ಅಬ್ದುಲ್ಲ ಘನಿ ಬರದಾರ್, ಮೌಲ್ವಿ ಅಬ್ದುಲ್ ಸಲಾಂ ಹನಾಫಿ (ಡೆಪ್ಯೂಟಿ ಪಿಎಂಗಳು), ಮುಹಮ್ಮದ್ ಯಾಕೂಬ್ ಮುಜಾಹಿದ್ (ರಕ್ಷಣಾ ಸಚಿವ), ಸಿರಾಜುದ್ದೀನ್ ಹಕ್ಕಾನಿ (ಗೃಹ ಸಚಿವ), ಆಮಿರ್ ಖಾನ್ ಮುತ್ತಾಖಿ (ವಿದೇಶಾಂಗ ಸಚಿವ) ಮುಂತಾದವರು ಸೇರಿ 17 ಸಚಿವರು ವಿಶ್ವಸಂಸ್ಥೆಯ ಘೋಷಿತ ಉಗ್ರರ ಪಟ್ಟಿಯಲ್ಲಿದ್ದಾರೆ ಎಂದು ಟೀಕಿಸಿದ್ದಾರೆ.

ಇದೇ ಮೊದಲ ಬಾರಿಗೆ ಹೇಳಿಕೆ ನೀಡಿರುವ ತಾಲಿಬಾನ್​ನ ಸುಪ್ರೀಂ ನಾಯಕ ಹೈಬತುಲ್ಲಾ ಅಖುಂಡ್​ರೆದಾ ಭವಿಷ್ಯದಲ್ಲಿ ಅಫ್ಘಾನಿಸ್ಥಾನದಲ್ಲಿ ಆಡಳಿತ ಮತ್ತು ಜನಜೀವನವು ಪವಿತ್ರವಾದ ಷರಿಯಾ ಕಾನೂನು ಪ್ರಕಾರವೇ ನಿಯಂತ್ರಿಸಲ್ಪಡಲಿದೆ ಎಂದಿದ್ದಾನೆ.

ಸಿರಾಜುದ್ದೀನ್ ಹಕ್ಕಾನಿ: ಹಕ್ಕಾನಿ ನೆಟ್​ವರ್ಕ್ ಸಂಸ್ಥಾಪಕ ಜಲಾಲುದ್ದೀನ್ ಹಕ್ಕಾನಿಯ ಪುತ್ರ ಸಿರಾಜುದ್ದೀನ್ ಹಕ್ಕಾನಿ. ಹೊಸ ಸರ್ಕಾರದಲ್ಲಿ ಗೃಹ ಸಚಿವ. ಹಕ್ಕಾನಿ ನೆಟ್​ವರ್ಕ್ ಅನ್ನು ಉಗ್ರ ಸಂಘಟನೆ ಎಂದು ಅಮೆರಿಕ ಘೋಷಿಸಿದೆ. ಎಫ್​ಬಿಐ ಶೋಧದಲ್ಲಿರುವ ಉಗ್ರ ಈತ. ಅಲ್​ಕೈದಾ ಜತೆಗೆ ನಂಟಿದೆ.

ಮುಲ್ಲಾ ಅಬ್ದುಲ್ ಘನಿ ಬರದಾರ್: ತಾಲಿಬಾನ್​ನ ರಾಜಕೀಯ ಕಚೇರಿ ಮುಖ್ಯಸ್ಥ ಈತ. ಮುಲ್ಲಾ ಒಮರ್​ನಿಂದ ಬ್ರದರ್ ಅಥವಾ ಬರದಾರ್ ಎಂದು ಕರೆಯಿಸಿಕೊಂಡಾತ. ಅಖುಂಡ್​ಗೆ ಡೆಪ್ಯೂಟಿ ಆಗಿ ಕೆಲಸ ನಿರ್ವಹಿಸಲಿದ್ದಾನೆ. ಅಮೆರಿಕದ ಸೇನೆ ಹಿಂಪಡೆಯಲು ಮಾತುಕತೆಯಲ್ಲಿ ಪ್ರಮುಖ ಪಾತ್ರವಹಿಸಿದ ವ್ಯಕ್ತಿ. 2010ರಲ್ಲಿ ಪಾಕ್​ನಲ್ಲಿ ಬಂಧಿತನಾಗಿದ್ದ. 2018ರಲ್ಲಿ ಬಿಡುಗಡೆ ಬಳಿಕ ದೋಹಾದಲ್ಲಿ ತಾಲಿಬಾನ್ ರಾಜಕೀಯ ಕಚೇರಿ ಸ್ಥಾಪಿಸಿದ್ದ.

ಮುಲ್ಲಾ ಮೊಹಮ್ಮದ್ ಯಾಕೂಬ್: ಮುಲ್ಲಾ ಒಮರ್ ನ ಪುತ್ರನಾಗಿದ್ದು, ಹೊಸ ಸರ್ಕಾರದಲ್ಲಿ ರಕ್ಷಣಾ ಸಚಿವ. ಸರ್ಕಾರದ ನೇಮಕ ಪ್ರಕ್ರಿಯೆಯಲ್ಲಿ ಪ್ರಮುಖ ಪಾತ್ರ ಈತನದ್ದು.

ಆಮಿರ್ ಖಾನ್ ಮುತ್ತಾಖಿ: ಪಕ್ತಿಯಾ ಮೂಲದ ಮುತ್ತಾಖಿ ಹೆಲ್ಮಂಡ್​ನ ನಿವಾಸಿ. ಹಿಂದಿನ ತಾಲಿಬಾನ್ ಸರ್ಕಾರದಲ್ಲಿ ಸಂಸ್ಕೃತಿ ಮತ್ತು ಮಾಹಿತಿ ಸಚಿವ, ಶಿಕ್ಷಣ ಸಚಿವನಾಗಿದ್ದ. ಅಮೆರಿಕ ಜತೆಗೆ ಮಾತುಕತೆಗೆ ಶಾಂತಿ ಮಾತುಕತೆ ನಿಯೋಗದ ಸದಸ್ಯನಾಗಿದ್ದ. ಈತ ಸೇನಾ ನಾಯಕನೂ ಅಲ್ಲ, ಧಾರ್ವಿುಕ ನಾಯಕನೂ ಅಲ್ಲ. ಸರ್ಕಾರ ರಚನೆಯಲ್ಲಿ ಪ್ರಮುಖ ಪಾತ್ರವಹಿಸಿದ ವ್ಯಕ್ತಿ.

ಜಬೀವುಲ್ಲಾ ಮುಜಾಹಿದ್: ತಾಲಿಬಾನ್​ನ ಬಹುಕಾಲದ ಮುಖ್ಯ ವಕ್ತಾರ ಜಬೀವುಲ್ಲಾ ಮುಜಾಹಿದ್. ಸಚಿವನಾದ ಬಳಿಕ ಬುಧವಾರ ಮೊದಲ ಬಾರಿಗೆ ಪತ್ರಿಕಾಗೋಷ್ಠಿ ನಡೆಸಿದ್ದ. ಈ ಹಿಂದೆ ವಕ್ತಾರನಾಗಿ ಮೊದಲ ಸುದ್ದಿಗೋಷ್ಠಿ ನಡೆಸುವ ತನಕ ಈತನ ಹೆಸರಷ್ಟೇ ಪ್ರಚಲಿತದಲ್ಲಿತ್ತು. ಸುದ್ದಿಗೋಷ್ಠಿ ನಡೆಸಿದಾಗಲೇ ಈತ ಫೋಟೋ ಬಹಿರಂಗವಾಯಿತು.

ಪಿಎಚ್​ಡಿ ಅಮಾನ್ಯ!

ಸಂಪುಟ ರಚನೆ ಆಗುತ್ತಿದ್ದಂತೆಯೇ ಪಿಎಚ್​ಡಿ, ಸ್ನಾತಕೋತ್ತರ ಪದವಿ ಕೋರ್ಸ್ ಅಮಾನ್ಯ ಗೊಳಿಸುವುದಾಗಿ ಶಿಕ್ಷಣ ಸಚಿವ ಘೋಷಿಸಿದ್ದಾನೆ.