ನ್ಯೂಸ್

ಪಾಳುಬಿದ್ದ ಮಲ್ಯರ 17 ಬೆಡ್​ರೂಂ ಬಂಗ್ಲೆ

ಲಂಡನ್: ಫ್ರಾನ್ಸ್​ನ ಐಲೆ ಸೇಂಟ್ ಮಾರ್ಗರೇಟ್ ದ್ವೀಪದಲ್ಲಿ ಉದ್ಯಮಿ ವಿಜಯ್ ಮಲ್ಯ ಹೊಂದಿರುವ ವೈಭವೋಪೇತ ಬಂಗ್ಲೆಯಲ್ಲಿ 17 ಬೆಡ್​ರೂಂಗಳಿವೆ. ಒಂದು ಸಿನಿಮಾ ಮಂದಿರವಿದೆ. ಖಾಸಗಿ ಹೆಲಿಪ್ಯಾಡ್ ಇದೆ. ಅಷ್ಟೇ ಅಲ್ಲ ಸ್ವಂತ ನೈಟ್​ಕ್ಲಬ್ ಕೂಡ ಇದೆ. ಇಂಥ ಭವ್ಯ ಬಂಗ್ಲೆಯನ್ನು ಮಲ್ಯ ಪಾಳು ಬೀಳುವಂತೆ ಮಾಡಿದ್ದಾರೆ ಎಂದು ಅವರಿಗೆ ಸಾಲ ನೀಡಿರುವ ಬ್ಯಾಂಕೊಂದು ಹೇಳಿದೆ.

‘ಲೇ ಗ್ರಾ್ಯಂಡ್ ಜಾರ್ಡಿನ್’ ಹೆಸರಿನ ಬಂಗ್ಲೆಯನ್ನು ಮಲ್ಯ ಗಿಜ್ಮೆ ಇನ್ವೆಸ್ಟ್ ಎಂಬ ಕಂಪನಿ ಮೂಲಕ 2008ರಲ್ಲಿ ಖರೀದಿಸಿದ್ದರು. ಅದಕ್ಕಾಗಿ ಅವರು ಕತಾರ್ ನ್ಯಾಷನಲ್ ಬ್ಯಾಂಕ್​ನ ಘಟಕವಾದ ಅನ್ಸ್​ಬ್ಯಾಚರ್ ಆಂಡ್ ಕಂಪನಿಯಿಂದ 213 ಕೋಟಿ ರೂ. ಸಾಲ ಪಡೆದಿದ್ದರು. ಆದರೆ ಗಿಜ್ಮೆ ಸಾಲ ಮರುಪಾವತಿಸದೆ ಸುಸ್ತಿದಾರವಾಗಿದೆ ಎಂದು ಲಂಡನ್ ಹೈಕೋರ್ಟ್​ಗೆ ಬ್ಯಾಂಕ್ ತಿಳಿಸಿದೆ.

ಈ ಸಾಲದ 35 ಕೋಟಿ ರೂ. ಭಾಗಕ್ಕೆ ಖಾತರಿಯಾಗಿ ನೀಡಿದ್ದ 50 ಮೀಟರ್ ಉದ್ದದ ಸೂಪರ್ ಯಾಚ್​ನ್ನು ಮಾರುವಂತೆ ಮಲ್ಯಗೆ ನಿರ್ದೇಶಿಸುವಂತೆ ನ್ಯಾಯಾಲಯಕ್ಕೆ ಬ್ಯಾಂಕ್ ಮನವಿ ಮಾಡಿದೆ. 9 ಸಾವಿರ ಕೋಟಿ ರೂಪಾಯಿಗೂ ಅಧಿಕ ಮೊತ್ತ ವಸೂಲಿಗೆ ಭಾರತೀಯ ಬ್ಯಾಂಕುಗಳು ಹೂಡಿದ ಮೊಕದ್ದಮೆ ಸೇರಿ ಹಲವು ದಾವೆಗಳನ್ನು ಎದುರಿಸುತ್ತಿರುವ ಮಲ್ಯ, 1.3 ಹೆಕ್ಟೇರ್ ವಿಸ್ತೀರ್ಣದಲ್ಲಿರುವ ತನ್ನ ಬಂಗ್ಲೆ ಪಾಳುಬೀಳಿಸಿದ್ದಾರೆ ಎಂದು ಬ್ಯಾಂಕ್​ನ ವಕೀಲ ಗಿಡೆನ್ ಶಿರಾಜಿ ಆರೋಪಿಸಿದ್ದಾರೆ. ಪಾಳುಬಿದ್ದಿರುವುದರಿಂದ ಬಂಗ್ಲೆಯ ಮೌಲ್ಯ ಭಾರಿ ಪ್ರಮಾಣದಲ್ಲಿ ಕುಸಿದಿದೆ ಎಂದು ರಿಯಲ್ ಎಸ್ಟೇಟ್ ಮೌಲ್ಯಮಾಪಕರು ಅಂದಾಜು ಮಾಡಿದ್ದಾರೆ.

ವಿಜಯ್ ಮಲ್ಯ ಉದ್ದೇಶಪೂರ್ವಕ ಸುಸ್ತಿದಾರ ಎಂದು ಭಾರತೀಯ ಬ್ಯಾಂಕ್​ಗಳು ಈಗಾಗಲೇ ಘೋಷಣೆ ಮಾಡಿವೆ. ಪ್ರಸ್ತುತ ಬ್ರಿಟನ್​ನಲ್ಲಿ ನೆಲೆಸಿರುವ ಅವರನ್ನು ಭಾರತಕ್ಕೆ ಗಡಿಪಾರು ಮಾಡುವ ಕುರಿತ ಪ್ರಕರಣದ ವಿಚಾರಣೆ ಅಲ್ಲಿನ ಕೋರ್ಟ್​ನಲ್ಲಿ ನಡೆಯುತ್ತಿದೆ.