ಬೆಂಗಳೂರು: ರಾಜ್ಯದಲ್ಲಿ 2023-24ನೇ ಸಾಲಿನಲ್ಲಿ 17.61 ಲಕ್ಷ ರೈತ ಫಲಾನುಭವಿಗಳಿಗೆ 2021.17 ಕೋಟಿ ರೂ. ಬೆಳೆ ವಿಮೆ ಪರಿಹಾರ(2021 crore to 17.61 lakh farmers. Distribution of crop insurance compensation) ನೀಡಲಾಗಿದೆ ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ(N Chaluvarayaswamy) ತಿಳಿಸಿದರು.
ವಿಕಾಸಸೌಧದ ಸಮಿತಿ ಕೊಠಡಿಯಲ್ಲಿ ಕೃಷಿ ಮತ್ತು ಜಲಾನಯನ ಅಭಿವೃದ್ಧಿ ಇಲಾಖೆಯ ಪ್ರಗತಿ ಪರಿಶೀಲನೆ ಸಭೆಯ ಬಳಿಕ ಸುದ್ದಿಗೋಷ್ಠ್ಠಿಯಲ್ಲಿ ಈ ಮಾಹಿತಿ ನೀಡಿದರು.
ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ 22.97 ಲಕ್ಷ ರೈತ ಪ್ರಸ್ತಾವನೆಗಳು 17.60 ಲಕ್ಷ ಹೇಕ್ಟೆರ್ ಪ್ರದೇಶಕ್ಕೆ ನೋಂದಣಿಯಾಗಿದೆ. 2024-25ನೇ ಸಾಲಿನ ಹಿಂಗಾರು ಹಂಗಾಮಿನಲ್ಲಿ ಈವರೆಗೆ 25148 ರೈತ ಪ್ರಸ್ತಾವನೆಗಳು 31690.28 ಹೆಕ್ಟೇರ್ ಪ್ರದೇಶಕ್ಕೆ ನೋಂದಣಿಯಾಗಿದ್ದು, ನೋಂದಣಿ ಕಾರ್ಯ ಪ್ರಗತಿಯಲ್ಲಿದೆ ಎಂದು ಹೇಳಿದರು.
ಬೀಜೋತ್ಪಾದನೆ, ರೈತ ಸಂಪರ್ಕ, ಜಿಲ್ಲಾ ಕೃಷಿ ತರಬೇತಿ ಕೇಂದ್ರಗಳು ಮತ್ತು ಜೈವಿಕ ನಿಯಂತ್ರಣ/ ಪರತಂತ್ರ ಜೀವಿ ಪ್ರಯೋಗಾಲಯಗಳನ್ನು ಒಂದೇ ಸೂರಿನಡಿ ತಂದು ಅಭಿವೃದ್ಧಿಪಡಿಸಲು ಕರ್ನಾಟಕ ರಾಜ್ಯ ಕೃಷಿ ಅಭಿವೃದ್ಧಿ ಏಜೆನ್ಸಿಯನ್ನು ಸ್ಥಾಪಿಸಲು ಸಚಿವ ಸಂಪುಟದ ಅನುಮೋದನೆ ಪಡೆಯಲಾಗಿದೆ. ಬೆಳೆಗಳಲ್ಲಿ ಕಂಡುಬರುವ ಕೀಟ/ ರೋಗ ಬಾಧೆ ಹಾಗೂ ಪೋಷಕಾಂಶಗಳ ಕೊರತೆಯನ್ನು ನಿಖರವಾಗಿ ಗುರುತಿಸಿ, ಪೀಡೆ ಬಾಧೆಯ ತೀವ್ರತೆಗನುಗುಣವಾಗಿ ನಿರ್ವಹಣಾ ಕ್ರಮಗಳನ್ನು ರೈತರಿಗೆ ತಲುಪಿಸಲು ಇ-ಸ್ಯಾಪ್ ತಂತ್ರಜ್ಞಾನವನ್ನು ಜಾರಿಗೊಳಿಸಿ ಇಲ್ಲಿಯವರೆಗೆ 70,016 ರೈತರಿಗೆ 1,30,152 ವಿವಿಧ ತಾಂತ್ರಿಕ ಸಲಹೆಗಳನ್ನು ನೀಡಲಾಗಿದೆ ಎಂದು ಹೇಳಿದರು.
ಮಣ್ಣು ಪರೀಕ್ಷೆಗೆ ಭೂಸಾರ ಆಪ್ ತಂತ್ರಾಂಶ ಬಳಸಿ 4.76 ಲಕ್ಷ ಮಣ್ಣು ಮಾದರಿಗಳ ಗುರಿಗೆ ಇಲ್ಲಿಯವರೆಗೆ 4.54 ಲಕ್ಷ ಮಣ್ಣು ಮಾದರಿಗಳನ್ನು ಸಂಗ್ರಹಿಸಿದ್ದು, 2.30 ಲಕ್ಷ ಮಣ್ಣು ಮಾದರಿಗಳನ್ನು ವಿಶ್ಲೇಷಿಸಿ 1.58 ಲಕ್ಷ ಮಣ್ಣು ಆರೋಗ್ಯ ಕಾರ್ಡ್‌ಗಳನ್ನು ವಿತರಿಸಲಾಗಿರುತ್ತದೆ.
ರಾಜ್ಯದಲ್ಲಿನ 29 ಮಣ್ಣು ಆರೋಗ್ಯ ಕೇಂದ್ರಗಳ ಪೈಕಿ 26 ಕೇಂದ್ರಗಳಿಗೆ ಎನ್‌ಎಬಿಎಲ್ ರಿಕಗ್ನೇಷನ್ ಪಡೆಯಲಾಗಿದೆ ಎಂದು ತಿಳಿಸಿದರು.
ಕೇಂದ್ರ ಪುರಸ್ಕೃತ ಯೋಜನೆಗಳಡಿ 2023-24ನೇ ಸಾಲಿನಲ್ಲಿ ಕೇಂದ್ರ ಸರ್ಕಾರದಿಂದ ವಿವಿಧ ಯೋಜನೆಗಳಿಗೆ ರೂ.297 ಕೋಟಿ ಅನುದಾನವನ್ನು ಹೆಚ್ಚುವರಿಯಾಗಿ ಪಡೆಯಲಾಗಿದೆ ಎಂದರು.
ಒಂದೂವರೆ ವರ್ಷದಲ್ಲಿ ರಾಜ್ಯದಲ್ಲಿ ಬಿತ್ತನೆ ಬೀಜ ವಿತರಣೆ ಹಾಗೂ ರಸಗೊಬ್ಬರ ಪೂರೈಕೆಯನ್ನು ಯಾವುದೇ ಕೊರತೆ ಮತ್ತು ದೂರು ಇಲ್ಲದಂತೆ ನಿರ್ವಹಿಸಲಾಗಿದೆ. 2023-24ನೇ ಸಾಲಿನಲ್ಲಿ 13 ಲಕ್ಷ ರೈತರಿಗೆ 5.77 ಲಕ್ಷ ಕ್ವಿಂಟಲ್ ಬಿತ್ತನೆ ಬೀಜಗಳ ವಿತರಣೆ ಮಾಡಿದ್ದು, ಪ್ರಸಕ್ತ ಸಾಲಿನಲ್ಲಿ ಇಲ್ಲಿಯವರೆಗೆ 12.92 ಲಕ್ಷ ಫಲಾನುಭವಿಗಳಿಗೆ 6.11 ಲಕ್ಷ ಕ್ವಿಂಟಲ್ ಬಿತ್ತನೆ ಬೀಜ ವಿತರಣೆ ಮಾಡಲಾಗಿದೆ. ಕಳೆದ ಸಾಲಿಗೆ ಹೋಲಿಸಿದರೆ ಪ್ರಸಕ್ತ ಸಾಲಿನಲ್ಲಿ 46,000 ಕ್ವಿಂಟಲ್ ಹೆಚ್ಚುವರಿ ಬಿತ್ತನೆ ಬೀಜವನ್ನು ಸಹಾಯಧನದಡಿಯಲ್ಲಿ ವಿತರಿಸಲಾಗಿದೆ. ಬಿತ್ತನೆ ಕಾರ್ಯ ಪ್ರಗತಿಯಲ್ಲಿದೆ ಎಂದು ಮಾಹಿತಿ ನೀಡಿದರು.
ಹೆಬ್ಬಾಳದಲ್ಲಿ 20 ಕೋಟಿ ರೂ. ವೆಚ್ಚದಲ್ಲಿ ಸಿರಿಧಾನ್ಯ ಹಬ್ ಸ್ಥಾಪಿಸಲು ಸಚಿವ ಸಂಪುಟದ ಅನುಮೋದನೆ ನೀಡಿದೆ ಎಂದು ತಿಳಿಸಿದರು.
2023-24ನೇ ಸಾಲಿನಲ್ಲಿ 3.07 ಲಕ್ಷ ರೈತರಿಗೆ 3.12 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಹನಿ/ತುಂತುರು ನೀರಾವರಿ ಘಟಕಗಳ ಅಳವಡಿಕೆಗೆ 627.10 ಕೋಟಿ ರೂ.ಸಹಾಯಧನ ನೀಡಲಾಗಿದ್ದು, ಪ್ರಸಕ್ತ ಸಾಲಿನಲ್ಲಿ ಇಲ್ಲಿಯವರೆಗೆ 1,09,250 ರೈತ ಫಲಾನುಭವಿಗಳಿಗೆ ಸೂಕ್ಷ್ಮ ನೀರಾವರಿ ಘಟಕಗಳ ಅಳವಡಿಕೆಗೆ ಸಹಾಯಧನ ನೀಡಲಾಗಿದೆ ಎಂದು ಹೇಳಿದರು.
2023-24ನೇ ಸಾಲಿನಲ್ಲಿ ಕೃಷಿಯಲ್ಲಿ ಯಾಂತ್ರಿಕತೆ ಪ್ರೋತ್ಸಾಹಿಸಲು ಅನುವಾಗುವಂತೆ 433.92 ಕೋಟಿ ರೂ. ಸಹಾಯಧನದಡಿ 1,16,181 ರೈತರಿಗೆ ಕೃಷಿ ಯಂತ್ರೋಪಕರಣ ವಿತರಿಸಲಾಗಿದೆ. ಪ್ರಸಕ್ತ ಸಾಲಿನಲ್ಲಿ ಇಲ್ಲಿಯವರೆಗೆ 20,301 ರೈತರಿಗೆ ಕೃಷಿ ಯಂತ್ರೋಪಕರಣಗಳನ್ನು ಸಹಾಯಧನದಡಿ ವಿತರಣೆ ಮಾಡಲಾಗಿದೆ. ಹೈಟೆಕ್ ಹಾರ್ವೆಸ್ಟರ್ ಹಬ್ ಯೋಜನೆಯಡಿ 2023-24ನೇ ಸಾಲಿನಲ್ಲಿ 104 ಹೈಟೆಕ್ ಹಾರ್ವೆಸ್ಟರ್ ಹಬ್ ಸ್ಥಾಪನೆಗೆ 41.39 ಕೋಟಿ ರೂ.ಗಳ ಸಹಾಯಧನ ನೀಡಲಾಗಿದ್ದು, 2024-25ನೇ ಸಾಲಿನಲ್ಲಿ 100 ಹೈಟೆಕ್ ಹಾರ್ವೆಸ್ಟರ್ ಹಬ್‌ಗಳನ್ನು 45 ಕೋಟಿ ರೂ. ಅನುದಾನದಲ್ಲಿ ಸ್ಥಾಪಿಸುವ ಪ್ರಕ್ರಿಯೆ ಪ್ರಗತಿಯಲ್ಲಿದೆ ಚಲುವರಾಯಸ್ವಾಮಿ ಹೇಳಿದರು.
ಸಭೆಯಲ್ಲಿ ಕೃಷಿ ಇಲಾಖೆ ಆಯುಕ್ತರು ವೈ.ಎಸ್.ಪಾಟೀಲ, ಜಲಾನಯನ ಅಭಿವೃದ್ಧಿ ಇಲಾಖೆ ಆಯುಕ್ತರು ಮಹೇಶ್ ಶಿರೂರು, ನಿರ್ದೇಶಕ ಬಂತನಾಳ, ಕರ್ನಾಟಕ ರಾಜ್ಯ ಬೀಜ ನಿಗಮದ ವ್ಯವಸ್ಥಾಪಕ ನಿರ್ದೇಶಕರು ದೇವರಾಜು ಸೇರಿದಂತೆ ಇಲಾಖೆ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.