ನ್ಯೂಸ್

16ರಂದು ಪರಿಸರ-ಭೂಸಂರಕ್ಷಣಾ ಜಿಲ್ಲಾ ಸಮಾವೇಶ

ಶಿವಮೊಗ್ಗ: ರೋಟರಿ ಶಿವಮೊಗ್ಗ ಪೂರ್ವ ಮತ್ತು ರೋಟರಿ ವಲಯ 11ರ ಎಲ್ಲ ಕ್ಲಬ್‌ಗಳ ಸಹಯೋಗದಲ್ಲಿ ಪರಿಸರ ಮತ್ತು ಭೂಸಂರಕ್ಷಣಾ ಜಿಲ್ಲಾ ಸಮಾವೇಶ ವಸುಂಧರೆ-2022 ಅ.16ರಂದು ಬೆಳಗ್ಗೆ 9.30ರಿಂದ ಮಧ್ಯಾಹ್ನ 1.30ರವರೆಗೆ ನಗರದ ಸುವರ್ಣ ಸಾಂಸ್ಕೃತಿಕ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ವಸುಂಧರೆ-2022ರ ಛೇರ‌್ಮನ್ ವಸಂತ್ ಹೋಬಳಿದಾರ್ ತಿಳಿಸಿದರು.

ಪರಿಸರ ಸಂರಕ್ಷಣೆ, ಪ್ರಕೃತಿ ವಿರೋಧಿ ಕೃತ್ಯ ಅರಿಯಲು, ಅಂತರ್ಜಲ ಜಾಗೃತಿ, ಜಾಗತಿಕ ತಾಪಮಾನ ಏರಿಕೆ ಪರಿಣಾಮ ಮತ್ತು ಪರಿಹಾರ ಚರ್ಚೆ ಕುರಿತು ವಿಶೇಷ ಸಂವಾದ ಏರ್ಪಡಿಸಿದ್ದು ಸಂಪನ್ಮೂಲ ವ್ಯಕ್ತಿಗಳು ಸಮಾವೇಶದಲ್ಲಿ ಪಾಲ್ಗೊಳ್ಳುವರು ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಅಂದು ಬೆಳಗ್ಗೆ 9.30ಕ್ಕೆ ಸಮಾವೇಶವನ್ನು ಇಕೋ ವಾಚ್ ಪರಿಸರ ಮತ್ತು ಸುಸ್ಥಿರ ಅಭಿವೃದ್ಧಿ ಕೇಂದ್ರದ ಅಧ್ಯಕ್ಷ, ಚಿತ್ರನಟ ಸುರೇಶ್ ಹೆಬ್ಳೀಕರ್ ಉದ್ಘಾಟಿಸುವರು. ಸರ್ಜಿ ಸಮೂಹ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಡಾ. ಧನಂಜಯ ಸರ್ಜಿ ಮುಖ್ಯ ಅತಿಥಿಗಳಾಗಿರುವರು. ರೋಟರಿ ಜಿಲ್ಲಾ ಗವರ್ನರ್ ಡಾ. ಜಯಗೌರಿ ಅಧ್ಯಕ್ಷತೆ ವಹಿಸುವರು ಎಂದರು.

ಸಮಾವೇಶದಲ್ಲಿ ಜಲ ಸಾಕ್ಷರತೆಗೆ ಚಿಂತನ ಬಿಂದುಗಳು ಪುಸ್ತಕ ಬಿಡುಗಡೆ, ಶಿವಮೊಗ್ಗ ಸೈಕಲ್ ಕ್ಲಬ್‌ನಿಂದ ಪರಿಸರ ಜಾಗೃತಿ ಜಾಥಾ ಹಾಗೂ ಸರ್ಜಿ ಆಸ್ಪತ್ರೆಯಿಂದ ರೋಟರಿ ಸದಸ್ಯರಿಗೆ ಆರೋಗ್ಯ ತಪಾಸಣೆ ನಡೆಸಲಾಗುವುದು ಎಂದು ಹೇಳಿದರು.

ವಲಯ 11ರ ಸಹಾಯಕ ಗವರ್ನರ್ ಡಾ. ಗುಡದಪ್ಪ ಕಸಬಿ, ಜಿ.ವಿಜಯಕುಮಾರ್, ಚಂದ್ರಹಾಸ ಪಿ ರಾಯ್ಕರ್, ವೀರಣ್ಣ ಹುಗ್ಗಿ, ಸುಮತಿ ಕುಮಾರಸ್ವಾಮಿ, ಕೆ.ಪಿ.ಶೆಟ್ಟಿ, ಸತೀಶ್ ಚಂದ್ರ ಸುದ್ದಿಗೋಷ್ಠಿಯಲ್ಲಿದ್ದರು.