ಯಾದಗಿರಿ: ಕಳೆದೆರಡು ದಿನಗಳಿಂದ ಜಿಲ್ಲೆಯಲ್ಲಿ ಸುರಿಯುತ್ತಿರುವ ಮಳೆಯಿಂದ ರೈತಾಪಿ ವರ್ಗ ನಿಟ್ಟುಸಿರು ಬಿಟ್ಟಿದ್ದು, ವಾಣಿಜ್ಯ ಬೆಳೆ ಹತ್ತಿ ಹಾಗೂ ಸಾಂಪ್ರದಾಯಿಕ ಬೆಳೆ ತೊಗರಿಗೆ ಜೀವಕಳೆ ಬಂದಂತಾಗಿದೆ.
ಆರಿದ್ರಾ ನಂತರ ಆಗಷ್ಟ್ ಮೊದಲ ವಾರದಿಂದ ತಿಂಗಳಾಂತ್ಯದವರೆಗೆ ಮಳೆರಾಯನ ದರ್ಶನವಿಲ್ಲದೆ, ಗ್ರಾಮೀಣ ಭಾಗದಲ್ಲಿ ಹತ್ತಿ, ತೊಗರಿ ಮತ್ತು ಮೆಣಸಿನಕಾಯಿ ಬಿತ್ತನೆ ಮಾಡಿದ್ದ ರೈತರದಲ್ಲಿ ತೀವೃ ಆತಂಕ ಮೂಡಿಸಿತ್ತು. ಅದರಲ್ಲೂ ಜಿಲ್ಲೆಯಲ್ಲಿ ಹತ್ತಿ ಬೆಳೆಯುವವರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಏರಿಕೆಯಾಗುತ್ತಿದೆ. ಅನ್ನದಾತನ ಆಥರ್ಿಕ ಸಬಲತೆಗೆ ಈ ಭಾಗದಲ್ಲಿ ಬಿಳಿ ಬಂಗಾರ ಎಂದೇ ಖ್ಯಾತಿ ಪಡೆದ ಹತ್ತಿ ಹೆಚ್ಚಿನ ಪಾತ್ರ ವಹಿಸುತ್ತದೆ. ಪ್ರತಿವರ್ಷ ಕ್ವಿಟಾಂಲ್ ಹತ್ತಿಗೆ ಕನಿಷ್ಠ 8ರಿಂದ ಗರಿಷ್ಠ 10 ಸಾವಿರ ರೂ. ಧಾರಣೆ ಇದೆ. ಹೀಗಾಗಿ ಸಣ್ಣ ಹಾಗೂ ಅತೀಸಣ್ಣ ರೈತರು ವಾಣಿಜ್ಯ ಬೆಳೆ ಬೆಳೆಯಲು ಉತ್ಸುಕತೆ ತೋರುತ್ತಿದ್ದಾರೆ.
ಹತ್ತಿ ರೈತರ ಕೈ ಹಿಡಬೇಕಾದರೆ ಕನಿಷ್ಠ 4 ತಿಂಗಳು ನೀರಿನ ಅನುಕೂಲ ಇರಲೇಬೇಕು. ಸರಿಯಾದ ಸಮಯಕ್ಕೆ ಮಳೆ ಬಂದಲ್ಲಿ ರೈತರು ಬೀಜ ರಸಗೊಬ್ಬರಕ್ಕಾಗಿ ಲಕ್ಷಾಂತರ ರೂ.ಖಚರ್ು ಮಾಡಿ ಹಣದ ಜತೆಗೆ ಆದಾಯ ಸಹ ಸಿಗುತ್ತದೆ. ಆದರೆ ಆಗಷ್ಟ್ ತಿಂಗಳು ಪೂತರ್ಿ ಮಳೆ ಬೀಳದ ಕಾರಣ ಹತ್ತಿ ಒಳಗುವ ಹಂತಕ್ಕೆ ಬಂದು ತಲುಪಿತ್ತು. ಇನ್ನೊಂದು ವಾರ ಮಳೆಯಾಗದಿದ್ದರೆ, ಬೆಳೆನಾಶವಾಗಿ ಅನ್ನದಾತರು ಗುಳೆ ಹೋಗುವ ಸ್ಥಿತಿ ಇತ್ತು. ಸಧ್ಯ ಮಳೆಯ ಕೃಪೆಯಿಂದ ಬೆಳೆಗಳು ನಳನಳಿಸುತ್ತಿದ್ದು, ಇನ್ನೂ ಮೂರ್ನಾಲ್ಕು ದಿನ ಇದೇ ರೀತಿ ಮಳೆ ಸುರಿದರೆ ಭೂಮಿಯಲ್ಲಿ ತೇವಾಂಶ ಹೆಚ್ಚಳವಾಗಲಿದೆ.
ಶುಕ್ರವಾರ ಸಂಜೆ ಹಾಗೂ ಶನಿವಾರ ಮಧ್ಯಾಹ್ನ ಸುರಿದ ಮಳೆಯಿಂದ ಜಿಲ್ಲಾಕೇಂದ್ರದ ಹಲವು ರಸ್ತೆಗಳು ಜಲಾವೃತಗೊಂಡು ವಾಹನ ಸಂಚಾರಕ್ಕೆ ತೀವೃ ಅಡಚಣೆ ಉಂಟಾಯಿತು. ಇಲ್ಲಿನ ರೈಲ್ವೆ ನಿಲ್ದಾಣದ ರಸ್ತೆಯಂತೂ ಕೃತಕ ಈಜುಕೊಳದಂತಾಗಿ ಮಾರ್ಪಟ್ಟಿತ್ತು. ಇದರಿಂದ ಬೈಕ್ ಸವಾರರು ಅಂಗೈಯಲ್ಲಿ ಜೀವ ಹಿಡಿದು ಸಂಚರಿಸಿದರು. ನಗರದ ಪ್ರಮುಖ ರಸ್ತೆಗಳ ಇಕ್ಕೆಲಗಳಲ್ಲಿನ ಚರಂಡಿಗಳು ಸಮರ್ಪಕವಾಗಿ ನಿರ್ವಹಣೆಯಾಗದ ಕಾರಣ ಹೂಳು ತುಂಬಿವೆ. ಮಳೆ ನೀರು ಚರಂಡಿಯಲ್ಲಿ ಹರಿಯದೆ ರಸ್ತೆ ಮೇಲೆ ಹರಿದು ದುವರ್ಾಸನೆ ಜತೆಗೆ ಸೊಳ್ಳೆಗಳ ಕಾಟ ಸಹ ವಿಪರೀತವಾಗುತ್ತಿದೆ.
ನಗರದ ಗಾಂವೃತ್ತ, ಲಾಲ್ ಬಹದ್ದೂರ್ ಶಾಸ್ತ್ರೀ ವೃತ್ತ, ಹೊಸಳ್ಳಿ ಕ್ರಾಸ್ನ ಕೆಲ ಬಡಾವಣೆಗಳು, ಮೈಲಾಪುರ ಬೇಸ್ ಹೀಗೆ ನಾನಾ ಬಡಾವಣೆಯಲ್ಲಿನ ಮನೆಗಳಿಗೆ ನೀರು ನುಗ್ಗಿ ಜನತೆ ಪರೇಶಾನ್ ಆಗುವಂತಾಯಿತು. ನಗರಸಭೆ ಅಕಾರಿಗಳ ನಿರ್ಲಕ್ಷ್ಯದಿಂದ ಚರಂಡಿಗಳ ಹಾಲತ್ ಖರಾಬ್ ಆಗಿದ್ದಲ್ಲದೆ, ಕೊಂಚ ಮಳೆ ಬಂದರೂ ಮನೆಯೊಳಗೆ ಕೊಳಚೆ ನೀರು ನುಗ್ಗುತ್ತಿವೆ ಎಂದು ನಿವಾಸಿಗಳು ಹಿಡಿಶಾಪ ಹಾಕುತ್ತಿರುವುದು ಕಂಡು ಬಂದಿತು.