ತಿರುವನಂತಪುರ: ಲಾಕ್‌ಡೌನ್ ಹಿನ್ನೆಲೆಯಲ್ಲಿ, ಕೇರಳದಲ್ಲಿಯೇ ಉಳಿದುಕೊಂಡಿದ್ದ 164 ಮಂದಿ ಸ್ವಿಜರ್ಲೆಂಡ್ ನಿವಾಸಿಗಳು ತಮ್ಮ ತಾಯ್ನಾಡಿಗೆ ಭಾನುವಾರ ವಾಪಸ್ ಆಗಿದ್ದಾರೆ. ಅಂತೂ ಒಂದು ತಿಂಗಳು ತವರಿಗೆ ಹೋಗಲು ಕಾಯುತ್ತಿದ್ದವರಿಗೆ ಇಂದು ಮುಕ್ತಿ ಸಿಕ್ಕಿದೆ.
ಕರೊನಾ ಸೋಂಕಿನ ಭೀತಿಯಿಂದ ಅಂತಾರಾಷ್ಟ್ರೀಯ ವಿಮಾನಗಳ ಹಾರಾಟವನ್ನು ಸರ್ಕಾರ ಸ್ಥಗಿತಗೊಳಿಸಿದ್ದ ಸಂದರ್ಭದಲ್ಲಿ ಈ ಎಲ್ಲಾ ಪ್ರವಾಸಿಗರು ಕೇರಳದಲ್ಲಿಯೇ ನೆಲೆಸಿದ್ದರು. ಕೇರಳದಲ್ಲಿ ಇವರೆಲ್ಲಾ ಪ್ರವಾಸಿಗರಾಗಿ ಆಗಮಿಸಿದ್ದರು. ವಿಮಾನಗಳು ಸ್ಥಗಿತಗೊಂಡಿದ್ದರಿಂದ ತಮ್ಮ ದೇಶಕ್ಕೆ ವಾಪಸಾಗಲು ಅವರಿಗೆ ಸಾಧ್ಯವಾಗಿರಲಿಲ್ಲ.
ಇವರು ತಮ್ಮನ್ನು ವಾಪಸ್ ಕರೆಸಿಕೊಳ್ಳುವಂತೆ ಸ್ವಿಸ್ ಸರ್ಕಾರವನ್ನು ಕೋರಿಕೊಂಡಿದ್ದರು. ಈಗಾಗಲೇ ತಮ್ಮ ದೇಶದ ಪ್ರಜೆಗಳು ಸಿಲುಕಿಕೊಂಡಿರುವ ಕಡೆಗಳಲ್ಲಿ ಸ್ವಿಜರ್ಲೆಂಡ್ ಸರ್ಕಾರ ವಿಶೇಷ ವಿಮಾನಗಳ ವ್ಯವಸ್ಥೆ ಮಾಡುತ್ತಿದೆ. ಅದರಂತೆ ಕೊಚ್ಚಿನ್ ವಿಮಾನ ನಿಲ್ದಾಣಕ್ಕೂ ವ್ಯವಸ್ಥೆ ಕಲ್ಪಿಸಿದ ಹಿನ್ನೆಲೆಯಲ್ಲಿ ಎಲ್ಲರೂ ತಮ್ಮ ದೇಶಕ್ಕೆ ವಾಪಸ್ ಆಗಿದ್ದಾರೆ.
ಕೇರಳದಲ್ಲಿ ಈಗಾಗಲೇ 451 ಮಂದಿಯಲ್ಲಿ ಸೋಂಕು ಪತ್ತೆಯಾಗಿದ್ದು, ಇದುವರೆಗೆ ಒಬ್ಬರೂ ಗುಣಮುಖರಾಗಿಲ್ಲ. ಈಗಾಗಲೇ ರಾಜ್ಯದಲ್ಲಿ ಮೂರು ಮಂದಿ ಮೃತಪಟ್ಟಿದ್ದಾರೆ. ಸ್ವಿಜರ್ಲೆಂಡ್‌ನಲ್ಲಿ ಇದುವರೆಗೆ 28,656 ಮಂದಿಗೆ ಸೋಂಕು ತಗುಲಿದ್ದು, 1,603 ಮಂದಿ ಮೃತಪಟ್ಟಿದ್ದಾರೆ. (ಏಜೆನ್ಸೀಸ್)