ಚಿತ್ರದುರ್ಗ: ಭಾರತ-ಪಾಕಿಸ್ತಾನ ನಡುವಿನ ಉದ್ವಿಗ್ನ ಸ್ಥಿತಿ ಈಗ ಶಮನಗೊಂಡಿದ್ದರೂ ರಾಜ್ಯಸರ್ಕಾರದ ಸೂಚನೆಯಂತೆ ತುರ್ತು ಸಂದರ್ಭಗಳಲ್ಲಿ ನಾಗರಿಕರ ರಕ್ಷಣೆ ಕುರಿತು ಮೇ15 ರಂದು ಬೆಳಗ್ಗೆ 11ಕ್ಕೆ ನಗರದ ಪೊಲೀಸ್ ಕವಾಯಿತು ಮೈದಾನದಲ್ಲಿ ನಾಗರಿಕ ಸುರಕ್ಷಾ ಕಲ್ಪಿತ ಪ್ರದರ್ಶನ ಏರ್ಪಡಿಸಲಾಗುವುದು ಎಂದು ಡಿಸಿ ಟಿ. ವೆಂಕಟೇಶ್ ಹೇಳಿದರು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಗಳವಾರ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆಯಲ್ಲಿ ಮಾತನಾಡಿ, ರಾಷ್ಟ್ರೀಯ ತುರ್ತು ಪರಿಸ್ಥಿತಿ ಮತ್ತು ಪ್ರಕೃತಿ ವಿಕೋಪ ಸಂದರ್ಭದ ಸಮರ್ಥ ನಿರ್ವಹಣೆ ಹಾಗೂ ಕ್ಲುಪ್ತ ಅವಧಿಯೊಳಗೆ ತುರ್ತು ಸ್ಪಂದನೆಗಾಗಿ ಜನರಲ್ಲಿ ಹೆಚ್ಚಿನ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದರು.
ತುರ್ತು ಸಂದರ್ಭಗಳಲ್ಲಿ ಜನರು ಗಾಬರಿಯಾಗದೆ, ವಿವೇಚನೆಯಿಂದ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ಅವರಲ್ಲಿ ಅರಿವು ಮೂಡಿಸುವುದು ಕಲ್ಪಿತ ಪ್ರದರ್ಶನದ ಉದ್ದೇಶವಾಗಿದೆ. ವಿಕೋಪದಲ್ಲಿ ಸಿಲುಕಿದಾಗ ರಕ್ಷಣಾತ್ಮಕ ಕ್ರಮಗಳ ಜತೆಗೆ ಜೀವಹಾನಿ ತಡೆಗೆ ಸನ್ನದ್ಧವಾಗಿರಬೇಕಾಗುತ್ತದೆ. ರಕ್ಷಣಾತ್ಮಕ ಕ್ರಮಗಳು ಮತ್ತು ಕ್ಷಿಪ್ರ ಕಾರ್ಯಾಚರಣೆಗಳಿಗೆ ತಂಡಗಳು ಸಿದ್ಧವಾಗಿರಬೇಕಾಗುತ್ತದೆ.
ಕಲ್ಪಿತ ವಿಪತ್ತು ಸನ್ನಿವೇಶ ಸೃಷ್ಟಿಸಿ, ಅದಕ್ಕೆ ವಿವಿಧ ತಂಡಗಳು ಸ್ಪಂದಿಸುವ ಬಗೆ, ಸಾರ್ವಜನಿಕರ ಪಾಲ್ಗೊಳ್ಳುವಿಕೆ ಹಾಗೂ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಕುರಿತಂತೆ ಪ್ರದರ್ಶನದಲ್ಲಿ ಜನರಿಗೆ ಸಂದೇಶ ರವಾನಿಸಬೇಕಿದೆ. ಪ್ರದರ್ಶನದ ವೇಳೆ ಎಲ್ಲ ಇಲಾಖಾ ಅಧಿಕಾರಿಗಳು, ಸಿಬ್ಬಂದಿ ಕಡ್ಡಾಯವಾಗಿ ಭಾಗವಹಿಸಬೇಕು ಎಂದು ತಿಳಿಸಿದರು.
ಎಸ್‌ಪಿ ರಂಜಿತ್‌ಕುಮಾರ ಬಂಡಾರು ಮಾತನಾಡಿ, ಆರೋಗ್ಯ, ಬೆಸ್ಕಾಂ, ಅಗ್ನಿಶಾಮಕ, ಗೃಹರಕ್ಷಕ ದಳ ಸೇರಿದಂತೆ ವಿವಿಧ ಇಲಾಖೆಗಳೊಂದಿಗೆ ಮತ್ತೊಂದು ಸುತ್ತಿನ ಸಭೆ ನಡೆಸಿ ಪ್ರದರ್ಶನದ ರೂಪುರೇಷೆ ಸಿದ್ಧಪಡಿಸಲಾಗುವುದು ಎಂದರು.
ಎಎಸ್‌ಪಿ ಎಸ್.ಜೆ. ಕುಮಾರಸ್ವಾಮಿ, ಜಿಪಂ ಡಿಎಸ್ ತಿಮ್ಮಪ್ಪ, ಡಿವೈಎಸ್‌ಪಿ ದಿನಕರ್, ಜಿಲ್ಲಾ ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆ ಜಂಟಿ ನಿರ್ದೇಶಕ ಆನಂದ್, ಆಹಾರ ಇಲಾಖೆ ಜಂಟಿ ನಿರ್ದೇಶಕ ಮಧುಸೂದನ್, ಆರ್‌ಟಿಒ ಭರತ್ ಎಂ. ಕಾಳಿಸಿಂಗೆ, ಗೃಹರಕ್ಷಕ ದಳದ ಜಿಲ್ಲಾ ಕಮಾಂಡೆಂಟ್ ಸಿ.ಕೆ. ಸಂಧ್ಯಾ ಮತ್ತಿತರರು ಇದ್ದರು.