ನ್ಯೂಸ್

1500 ಕೋಟಿ ರೂ.ಮೌಲ್ಯದ 2602 ಎಕರೆ ಅರಣ್ಯ ಒತ್ತುವರಿ ತೆರವು

ಬೆಂಗಳೂರು: ಅರಣ್ಯ ಇಲಾಖೆಯ 2019-20ರ ಸಾಲಿನಲ್ಲಿದ್ದ ರಾಜಸ್ವ ಸಂಗ್ರಹಣೆ 263.41 ಕೋಟಿ ರೂ.ಗಳಿಂದ 2023-24ರ ಸಾಲಿನಲ್ಲಿ 417.84 ಕೋಟಿ ರೂ.ಗೆ ಹೆಚ್ಚಳವಾಗಿದೆ ಎಂದು ಅರಣ್ಯ ಸಚಿವ ಈಶ್ವರ ಬಿ. ಖಂಡ್ರೆ ತಿಳಿಸಿದರು.

ತಾವು ಸಚಿವರಾಗಿ ಅಧಿಕಾರ ವಹಿಸಿಕೊಂಡು ವರ್ಷ ತುಂಬಿದ ಸಂದರ್ಭದಲ್ಲಿ ತಮ್ಮನ್ನು ಭೇಟಿ ಮಾಡಿದ ಸುದ್ದಿಗಾರ ಪ್ರಶ್ನೆಗೆ ಉತ್ತರಿಸಿದ ಅವರು, ರಾಜ್ಯ ಅರಣ್ಯ ವ್ಯಾಪ್ತಿಯೂ ಹೆಚ್ಚಿದೆ. 2023-24ನೇ ಸಾಲಿನಲ್ಲಿ ಅಧಿಸೂಚಿತ ಕಾಯ್ದಿಟ್ಟ ಅರಣ್ಯ ವ್ಯಾಪ್ತಿ 3395.73 ಹೆಕ್ಟೇರ್ ಅಂದರೆ ಸುಮಾರು 8300 ಎಕರೆಯಷ್ಟು ಹೆಚ್ಚಳವಾಗಿದ್ದರೆ, ರಕ್ಷಿತ ಅರಣ್ಯ ಪ್ರದೇಶ 184.52 ಹೆಕ್ಟೇರ್ ಅಂದರೆ 456 ಎಕರೆ ಹೆಚ್ಚಳವಾಗಿದೆ ಎಂದರು.

2600 ಎಕರೆ ಅರಣ್ಯ ಒತ್ತುವರಿ ತೆರವು

ರಾಜ್ಯದಲ್ಲಿ ಸುಮಾರು 2 ಲಕ್ಷ ಎಕರೆ ಅರಣ್ಯ ಭೂಮಿ ಒತ್ತುವರಿಯಾಗಿದ್ದು, 3 ಎಕರೆಗಿಂತಲೂ ಕಡಿಮೆ ಭೂಮಿ ಮಾತ್ರ ಇರುವ ಬಡ ರೈತರಿಗೆ ತೊಂದರೆ ಆಗದ ರೀತಿಯಲ್ಲಿ ಹಾಗೂ 3 ಎಕರೆಗಿಂತಲೂ ಹೆಚ್ಚು ಅರಣ್ಯ ಒತ್ತುವರಿ ಮಾಡಿರುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗಿದೆ.

ಒಂದು ವರ್ಷದ ಅವಧಿಯಲ್ಲಿ ರಾಜ್ಯದಲ್ಲಿ 371 ಪ್ರಕರಣಗಳಲ್ಲಿ ಸುಮಾರು 2602.30 ಎಕರೆ ಒತ್ತುವರಿ ತೆರವುಗೊಳಿಸಲಾಗಿದೆ. ತೆರವು ಮಾಡಲಾದ ಅರಣ್ಯ ಭೂಮಿಯ ಮಾರುಕಟ್ಟೆ ಮೌಲ್ಯ ಸುಮಾರು 1500 ಕೋಟಿ ರೂ. ಆಗುತ್ತದೆ ಎಂದು ಹೇಳಿದರು.

ಕೋಲಾರದಲ್ಲಿ ಹೆಚ್ಚು ಒತ್ತುವರಿ ತೆರವು

ಕೋಲಾರದಲ್ಲಿ ಅತಿ ಹೆಚ್ಚು ಅಂದರೆ 1392.41 ಎಕರೆ ಅರಣ್ಯ ಜಮೀನು ಒತ್ತುವರಿ ತೆರವು ಮಾಡಿಸಲಾಗಿದೆ. ಮಡಿಕೇರಿಯಲ್ಲಿ 5ಎಕರೆ 50ಗುಂಟೆ ತೆರವು ಮಾಡಲಾಗಿದೆ. ಬೆಂಗಳೂರಿನ ಕೊತ್ತನೂರಿನಲ್ಲಿ 17 ಎಕರೆ ಅರಣ್ಯ ಭೂಮಿ ಒತ್ತುವರಿ ತೆರವು ಮಾಡಿಸಲಾಗಿದ್ದು, ಇದರ ಮಾರುಕಟ್ಟೆ ಮೌಲ್ಯ ಸುಮಾರು 500 ಕೋಟಿ ರೂ.ಗೂ ಅಧಿಕ ಎಂದು ತಿಳಿಸಿದರು.

5 ಕೋಟಿ ಸಸಿ ನೆಡಲಾಗಿದೆ

ಕಳೆದ ವರ್ಷ ವಿಶ್ವ ಪರಿಸರ ದಿನದಂದು ಘೋಷಿಸಿದಂತೆ 5.40 ಕೋಟಿ ಸಸಿಗಳನ್ನು ರಾಜ್ಯದಾದ್ಯಂತ ನೆಡಲಾಗಿದ್ದು, ಈ ಸಾಲಿನಲ್ಲಿ ಸಸಿ ನೆಡುವ ಕಾರ್ಯಕ್ರಮಕ್ಕಾಗಿ ಹೆಚ್ಚುವರಿಯಾಗಿ 100 ಕೋಟಿ ರೂ. ಅನುದಾನ ನೀಡಲಾಗುತ್ತಿದೆ ಎಂದರು.

ಖಾಲಿ ಹುದ್ದೆಗಳ ಭರ್ತಿಗೆ ಕ್ರಮ

ಅರಣ್ಯಇಲಾಖೆಯಲ್ಲಿ ಸುಮಾರು 6 ಸಾವಿರ ಹುದ್ದೆಗಳು ಖಾಲಿ ಇದ್ದು, ಇವುಗಳ ಭರ್ತಿಗೆ ಕ್ರಮ ಕೈಗೊಳ್ಳಲಾಗಿದೆ. ಈಗಾಗಲೇ ಅರಣ್ಯ ವೀಕ್ಷಕರ 310 ಹುದ್ದೆಗಳ ನೇಮಕಾತಿಗೆ ಆಯ್ಕೆ ಪ್ರಕ್ರಿಯೆ ಪಾರದರ್ಶಕವಾಗಿ ಪೂರ್ಣವಾಗಿದ್ದು, ನೀತಿ ಸಂಹಿತೆ ತೆರವಾದ ಬಳಿಕ ನೇಮಕಾತಿ ಪತ್ರಗಳನ್ನು ವಿತರಿಸಲಾಗುವುದು ಎಂದು ಈಶ್ವರ ಖಂಡ್ರೆ ತಿಳಿಸಿದರು.

540 ಅರಣ್ಯ ರಕ್ಷಕರ ಹುದ್ದೆಗಳಿಗೆ ನೇರ ನೇಮಕಾತಿ ಪ್ರಕ್ರಿಯೆ ಪ್ರಗತಿಯಲ್ಲಿದೆ. ಜೊತೆಗೆ ಕಲ್ಯಾಣ ಕರ್ನಾಟಕ ಭಾಗದಲ್ಲಿ ಖಾಲಿ ಇರುವ 10 ವಲಯ ಅರಣ್ಯಅಧಿಕಾರಿ ಹುದ್ದೆಗಳ ನೇರ ನೇಮಕಾತಿಗೆ ಶೀಘ್ರ ಲಿಖಿತ ಪರೀಕ್ಷೆ ನಡೆಸಲು ಸೂಚಿಸಲಾಗಿದೆ ಎಂದರು.

ಉಪ ವಲಯ ಅರಣ್ಯಾಧಿಕಾರಿ ಕಂ ಮೋಜಿಣಿದಾರರ 143 ಹುದ್ದೆ, 45 ದ್ವಿತೀಯ ದರ್ಜೆ ಹಾಯಕರು ಮತ್ತು 18 ಪ್ರಥಮ ದರ್ಜೆ ಸಹಾಯಕರು ಸೇರಿದಂತೆ ವಿವಿಧ ವೃಂದದ ಖಾಲಿ ಹುದ್ದೆಗಳ ನೇಮಕಾತಿಗೂ ಕರಡು ಪ್ರಸ್ತಾವನೆ ಸಿದ್ಧಗೊಂಡಿದೆ ಎಂದು ವಿವರಿಸಿದರು.

ಗುತ್ತಿಗೆ ಭೂಮಿ ವಶಕ್ಕೆ ಕ್ರಮ

ಕೊಡಗು, ಚಾಮರಾಜನಗರ, ಮೈಸೂರು ಭಾಗದಲ್ಲಿ ಸುಮಾರು 7500 ಎಕರೆ ಅರಣ್ಯ ಭೂಮಿಯನ್ನು ವಿವಿಧ ಕಂಪನಿಗಳಿಗೆ ಬ್ರಿಟಿಷರ ಕಾಲದಲ್ಲಿ ಗುತ್ತಿಗೆ ನೀಡಲಾಗಿದ್ದು, ಈ ಕಂಪನಿಗಳಿಂದ ಸುಮಾರು 2 ಸಾವಿರ ಕೋಟಿ ರೂ. ಬಾಕಿ ಬರಬೇಕಿದೆ. ಈ ಹಿನ್ನೆಲೆಯಲ್ಲಿ ಅವಧಿ ಮುಗಿದ ಭೂಮಿ ಮರು ಪಡೆಯಲು ಕ್ರಮ ವಹಿಸಲಾಗಿದೆ ಎಂದು ಅರಣ್ಯ ಸಚಿವರು ತಿಳಿಸಿದರು.

ಮಾನವ-ವನ್ಯಜೀವಿ ಸಂಘರ್ಷ ತಡೆಯಲು ರೈಲ್ವೆ ಬ್ಯಾರಿಕೇಡ್, ಆನೆ ನಿರೋಧಕ ಕಂದಕ, ಸೌರ ತಂತಿಬೇಲಿ ಅಳವಡಿಕೆ ಕಾರ್ಯವನ್ನು ಆದ್ಯತೆಯ ಮೇಲೆ ನಿರ್ವಹಿಸಲಾಗುತ್ತಿದೆ. ಈವರೆಗೆ 332.62 ಕಿ.ಮೀ. ರೈಲ್ವೆ ಬ್ಯಾರಿಕೇಡ್ ನಿರ್ಮಾಣ ಗುರಿಯನ್ನು ಪೂರ್ಣಗೊಳಿಸಲಾಗಿದೆ. ಪ್ರಸ್ತುತ 101 ಕಿ.ಮೀ. ರೈಲ್ವೆ ಬ್ಯಾರಿಕೇಡ್ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ ಎಂದು ಹೇಳಿದರು.

ಹೆಚ್ಚುವರಿ ರೈಲ್ವೆ ಬ್ಯಾರಿಕೇಡ್

ಕಾಡಾನೆ ಹಾವಳಿ ಹೆಚ್ಚಾಗಿರುವ ಪ್ರದೇಶಗಳಲ್ಲಿ ಹೆಚ್ಚುವರಿಯಾಗಿ 324 ಕಿ.ಮೀ. ಉದ್ದದ ರೈಲ್ವೆ ಬ್ಯಾರಿಕೇಡ್ ನಿರ್ಮಿಸುವ ಅಗತ್ಯವಿದ್ದು, ಇದಕ್ಕಾಗಿ ವಾರ್ಷಿಕ 250 ಕೋಟಿ ರೂ. ಅನುದಾನದೊಂದಿಗೆ ಎರಡು ವರ್ಷದಲ್ಲಿ 500 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿ ಪೂರ್ಣಗೊಳಿಸಲಾಗುವುದು ಎಂದು ಈಶ್ವರ ಖಂಡ್ರೆ ತಿಳಿಸಿದರು.