ನ್ಯೂಸ್

15 ದಿನ ಅಂತರದಲ್ಲಿ ಮನೆ-ಮಳಿಗೆ ಕಳ್ಳತನ

ಬೆಂಗಳೂರು: ಬ್ಯಾಟರಾಯನಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮಳಿಗೆ ಮತ್ತು ಮನೆಗಳ ಕಳ್ಳತನ ಹೆಚ್ಚಾಗುತ್ತಿದ್ದು ಮಾಲೀಕರಲ್ಲಿ ಆತಂಕವನ್ನುಂಟು ಮಾಡಿದೆ.

ಕಳೆದ ೧೫ ದಿನಗಳ ಅಂತರದಲ್ಲಿ ಠಾಣೆ ವ್ಯಾಪ್ತಿಯ ಮಂಡ್ಯ ಮೆಡಿಕಲ್, ಗಣಪತಿ ದೇವಸ್ಥಾನ ಸಮೀಪದ ದೋಬಿ ಅಂಗಡಿ, ಬ್ಯಾಟರಿ ಅಂಗಡಿ ಮಳಿಗೆಯಲ್ಲಿ ಕಳ್ಳತನ, ಮನೆಯೊಂದರಲ್ಲಿ ಕಳ್ಳತನ ಮತ್ತು ಪಾರ್ಕ್ ಸಮೀಪ ವೃದ್ಧೆಯೊಬ್ಬರ ಸರಗಳ್ಳತನವಾಗಿದೆ.

ಜು.೧೭ ರ ರಾತ್ರಿ ೧೧.೫೦ ಕ್ಕೆ ದ್ವಿಚಕ್ರದಲ್ಲಿ ಬಂದಿರುವ ಇಬ್ಬರು ಖದೀಮರು ಗಿರಿನಗರ ೬೦ ಅಡಿ ರಸ್ತೆ, ೧೩ನೇ ಅಡ್ಡರಸ್ತೆಯಲ್ಲಿರುವ ಮಂಡ್ಯ ಮೆಡಿಕಲ್‌ನ ರೋಲಿಂಗ್ ಶೆಟ್ಟರ್‌ನ ಬೀಗ ಒಡೆದು ೫೦ ಸಾವಿರ ನಗದು ಮತ್ತು ಸಿಸಿ ಕ್ಯಾಮರಾದ ಡಿವಿಆರ್ ಕದೊಯ್ದಿದ್ದಾರೆ. ಘಟನೆ ದೃಶ್ಯ ಮಂಡ್ಯ ಮೆಡಿಕಲ್ ಎದುಗಡೆ ಇರುವ ಬೇಕರಿಯಲ್ಲಿ ಸೆರೆಯಾಗಿದ್ದು, ಅದನ್ನು ಪೊಲೀಸರಿಗೆ ನೀಡಲಾಗಿದೆ. ಆದರೂ ಕೂಡ ಆರೋಪಿಗಳನ್ನು ಇದುವರೆಗೂ ಪೊಲೀಸರು ಪತ್ತೆ ಹಚ್ಚಿಲ್ಲ. ಇದೇ ರೀತಿ ಮಂಡ್ಯ ಮೆಡಿಕಲ್ ಮುಂಭಾಗದಲ್ಲಿರುವ ಎಸ್.ಎಂ. ಬ್ಯಾಟರಿ ಅಂಗಡಿಯಲ್ಲಿ ಮಧ್ಯಾಹ್ನ ಸಮಯದಲ್ಲಿಯೇ ಆರೋಪಿಗಳು ಬ್ಯಾಟರಿಗಳನ್ನು ಕದೊಯ್ದಿದ್ದರು. ಜೂ.೧೫ ಜೈನ್ ಆಸ್ಪತ್ರೆ ಸಮೀಪದ ೭ ನೇ ಕ್ರಾಸ್‌ನಲ್ಲಿ ವೃದ್ಧೆಯೊಬ್ಬರ ಸರವನ್ನು ಕಸೀದು ದುಷ್ಕರ್ಮಿಗಳು ಪರಾರಿಯಾಗಿದ್ದರು. ಇದೇ ರೀತಿ ಬೆಂಗಳೂರು ಒನ್ ಸಮೀಪದಲ್ಲಿರುವ ಮನೆಯೊಂದರಲ್ಲಿ ಕಳ್ಳತನವಾಗಿತ್ತು. ಈ ರೀತಿ ಕಳೆದ ೧೫ ದಿನಗಳ ಅಂತರದಲ್ಲಿ ಹಲವು ಕಳ್ಳತನವಾಗಿದೆ ಆದರೂ ಪೊಲೀಸರು ಕ್ರಮ ಜರುಗಿಸಿಲ್ಲ ಎಂದು ಸ್ಥಳೀಯರು ತಿಳಿಸಿದ್ದಾರೆ.

ಗಸ್ತು ಹೆಚ್ಚಿಸಬೇಕು:

ಮಂಡ್ಯ ಮೆಡಿಕಲ್ ಸೇರಿ ಇತರೆ ಮಳಿಗೆಗಳು ಗಿರಿನಗರದ ಮುಖ್ಯರಸ್ತೆಯಲ್ಲಿದ್ದು, ಜತೆಗೆ ಸಿಸಿ ಕ್ಯಾಮರಾ ಇದ್ದರೂ ಕೂಡ ಕಳ್ಳರು ರಾಜಾರೋಷವಾಗಿ ಮೆಡಿಕಲ್ ಶೆಟರ್ ಮುರಿದು ೫೦ ಸಾವಿರ ನಗದು ಮತ್ತು ಪೊಲೀಸರಿಗೆ ಯಾವುದೇ ಸಾಕ್ಷ್ಯ ಸಿಗಬಾರದೆಂಬ ಕಾರಣಕ್ಕೆ ಸಿಸಿ ಕ್ಯಾಮರಾ ಡಿವಿಆರ್ ಕದ್ದು ಹೋಗಿದ್ದಾರೆ. ಈ ಬಗ್ಗೆ ಪೊಲೀಸರು ಸೂಕ್ತ ಕ್ರಮ ಜರುಗಿಸಬೇಕು ಮತ್ತು ಈ ಭಾಗದಲ್ಲಿ ಪೊಲೀಸ್ ಗಸ್ತು ಹೆಚ್ಚಿಸಬೇಕು ಎಂದು ಸ್ಥಳೀಯರು ಮನವಿ ಮಾಡಿದ್ದಾರೆ.