ಜಲಂಧರ್: ಬೈಕ್ನಲ್ಲಿ ಬಂದ ಮೊಬೈಲ್ ದೋಚುವ ಖದೀಮರಿಬ್ಬರು ಹುಡುಗಿಯೊಬ್ಬಳ ಮೊಬೈಲ್ ಕಸಿದು ಪರಾರಿಯಾಗಲು ಯತ್ನಿಸಿದಾಗ ತನ್ನ ದಿಟ್ಟತನ ಪ್ರದರ್ಶಿಸಿದ ಹುಡುಗಿ, ಅವರೊಂದಿಗೆ ಕಾದಾಟಕ್ಕಿಳಿದು ಹರಿತ ಆಯುಧವನ್ನು ಲೆಕ್ಕಿಸದೇ ಇಬ್ಬರಲ್ಲಿ ಓರ್ವ ಖದೀಮನನ್ನ ಸೆರೆಹಿಡಿದ ರೋಚಕ ಘಟನೆ ಪಂಜಾಬ್ನ ಜಲಂಧರ್ನಲ್ಲಿ ನಡೆದಿದ್ದು, ಇದಕ್ಕೆ ಸಂಬಂಧಿಸಿದ ವಿಡಿಯೋ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.
ಕುಸುಮ ಕುಮಾರಿ (15) ದಿಟ್ಟ ಹುಡುಗಿ. ಫತೇಹ್ಪುರಿ ಮೊಹಲ್ಲಾ ನಿವಾಸಿಯಾದ ಕುಸುಮ ಕೈಯಲ್ಲಿ ಮೊಬೈಲ್ ಹಿಡಿದುಕೊಂಡು ಮನೆಗೆ ತೆರಳುವಾಗ ರೋಚಕ ಘಟನೆ ನಡೆದಿದೆ.
ಹಿಂದಿನಿಂದ ಬೈಕ್ನಲ್ಲಿ ಬಂದ ಖದೀಮರು ಹುಡುಗಿಯ ಮೊಬೈಲ್ ಕಿತ್ತುಕೊಂಡು ಪರಾರಿಯಾಗಲು ಯತ್ನಿಸುತ್ತಾರೆ. ಖದೀಮರಿಗೆ ಹೆದರದ ಹುಡುಗಿ ಹಿಂಬದಿ ಕುಳಿತಿದ್ದ ಹಾಗೂ ಮೊಬೈಲ್ ಕಸಿದವನ ಟೀ-ಶರ್ಟ್ ಹಿಡಿದೆಳೆಯುತ್ತಾಳೆ. ಬೈಕ್ನಿಂದ ಕೆಳಗಿಳಿಯುವ ಖದೀಮ ಹುಡುಗಿಯ ಮೇಲೆ ಹರಿತ ಆಯುಧದಿಂದ ಹಲ್ಲೆ ಮಾಡಿ ತಪ್ಪಿಸಿಕೊಳ್ಳಲು ಯತ್ನಿಸುತ್ತಾನೆ. ಮತ್ತೊಮ್ಮೆ ಬೈಕ್ ಏರಲು ಓಡುತ್ತಾನೆ. ಆದರೆ ಛಲ ಬಿಡದ ಹುಡುಗಿ ಖದೀಮನೊಂದಿಗೆ ಕಾದಾಡುತ್ತಾಳೆ. ಆತ ಮತ್ತೆ ಆಯುಧದಿಂದ ನಾಲ್ಕೈದು ಬಾರಿ ಹಲ್ಲೆ ಮಾಡುತ್ತಾನೆ. ಆದ್ರೆ ಹುಡುಗಿ ಮಾತ್ರ ಜಪ್ಪಯ್ಯ ಅಂದ್ರು ಟೀಶರ್ಟ್ ಬಿಡುವುದಿಲ್ಲ. ಅಷ್ಟರಲ್ಲಾಗಲೇ ನೆರೆಯವರು ಘಟನೆಯನ್ನು ನೋಡಿ ಓಡಿ ಬರುತ್ತಾರೆ. ಆವಾಗ ಬೈಕ್ನಲ್ಲಿದ್ದ ಖದೀಮ ಅಲ್ಲಿಂದ ಪರಾರಿಯಾಗುತ್ತಾನೆ. ಇನ್ನೊಬ್ಬ ಆರೋಪಿಯನ್ನು ಹಿಡಿದುಕೊಳ್ಳುತ್ತಾರೆ ಮತ್ತು ಹುಡುಗಿ ತನ್ನ ಮೊಬೈಲ್ ಅನ್ನು ಮರಳಿ ಪಡೆಯುತ್ತಾಳೆ.
ಈ ಎಲ್ಲ ರೋಚಕ ದೃಶ್ಯ ಸಮೀಪದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, 1.28 ನಿಮಿಷದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ಹುಡುಗಿಗೆ ಮೆಚ್ಚುಗೆಯ ಮಹಾಪೂರ ಹರಿದು ಬರುತ್ತಿದೆ.
ಇನ್ನು ಘಟನೆಯ ಬಳಿಕ ಹಲ್ಲೆಯಿಂದ ಗಾಯಗೊಂಡಿದ್ದ ಹುಡುಗಿಯನ್ನು ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗುತ್ತದೆ. ಸೆರೆಯಾದ ಆರೋಪಿಯನ್ನು ಅವಿನಾಶ್ ಕುಮಾರ್ (22) ಅಲಿಯಾಸ್ ಅಶು ಎಂದು ಗುರುತಿಸಲಾಗಿದೆ. ಈತ ಬಸ್ತಿ ಡ್ಯಾನಿಶ್ಮಂಡದ ಬೇಗುಂಪುರದ ನಿವಾಸಿ. ಇನ್ನು ಅವಿನಾಶ್ ಜತೆ ಬಂದಿದ್ದ ಆರೋಪಿ ಪರಾರಿಯಾಗಿದ್ದು, ಇಬ್ಬರ ವಿರುದ್ಧ ಪ್ರಕರಣ ದಾಖಲಾಗಿದೆ. ಪರಾರಿಯಾದವನಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ. (ಏಜೆನ್ಸೀಸ್)