ನವದೆಹಲಿ: ಬಹುನಿರೀಕ್ಷಿತ ರಾಮ ಮಂದಿರ ಟ್ರಸ್ಟ್ ರಚನೆಯ ವಿಚಾರವನ್ನು ಪ್ರಧಾನಿ ನರೇಂದ್ರ ಮೋದಿಯವರು ಸಂಸತ್ತಿ ಘೋಷಿಸಿದ್ದರು. ಇದರ ಬೆನ್ನಲ್ಲೇ, ರಾಮ ಮಂದಿರ ಟ್ರಸ್ಟ್ನ ಸ್ವರೂಪದ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಷಾ ಬಹಿರಂಗಪಡಿಸಿದ್ದಾರೆ.
ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಎಂಬ ಹೆಸರಿನಲ್ಲಿ ಟ್ರಸ್ಟ್ ರಚನೆಯಾಗುತ್ತಿದ್ದು, ಇದರಲ್ಲಿ 15 ವಿಶ್ವಸ್ಥರಿರುತ್ತಾರೆ. ಇವರಲ್ಲಿ ಒಬ್ಬರು ದಲಿತ ಸಮುದಾಯದವರಾಗಿರುತ್ತಾರೆ. ಮಂದಿರ ನಿರ್ಮಾಣಕ್ಕೆ ಸಂಬಂಧಿಸಿದ ಯಾವುದೇ ನಿರ್ಣಯ ತೆಗೆದುಕೊಳ್ಳಲು ಈ ಟ್ರಸ್ಟ್ ಸ್ವತಂತ್ರವಾಗಿರುತ್ತದೆ. 67 ಎಕರೆ ಭೂಮಿ ಕೂಡ ಟ್ರಸ್ಟ್ ಹೆಸರಿನಲ್ಲೇ ಇರುತ್ತದೆ. ಈ ಮೂಲಕ ದೇಶದ ಲಕ್ಷಾಂತರ ಜನರ ಆಶಯದಂತೆ ರಾಮ ಜನ್ಮಭೂಮಿಯಲ್ಲೆ ರಾಮಮಂದಿರ ನಿರ್ಮಾಣವಾಗಲಿದೆ ಎಂದು ಷಾ ಹೇಳಿದ್ದಾರೆ.
ಟ್ರಸ್ಟ್ ರಚನೆಯ ನಿರ್ಣಯವನ್ನು ತೆಗೆದುಕೊಂಡ ಪ್ರಧಾನಿಯವರನ್ನು ಅಭಿನಂದಿಸಿದ ಷಾ, ಇದು ಇಡೀ ದೇಶ ಹೆಮ್ಮೆ ಪಡುವ ಮತ್ತು ಸಂಭ್ರಮಿಸುವ ದಿನ ಎಂದು ಟ್ವೀಟ್ ಮೂಲಕ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. (ಏಜೆನ್ಸೀಸ್)