ನ್ಯೂಸ್

ಗುಜರಾತ್ ಗಡಿ ಬಳಿ 15 ಪಾಕ್ ಮೀನುಗಾರರ ಸೆರೆ

ನವದೆಹಲಿ: ಗಡಿ ಭದ್ರತಾ ಪಡೆ (ಬಿಎಸ್​ಎಫ್) ಮತ್ತು ಭಾರತೀಯ ಕರಾವಳಿ ಕಾವಲು ಪಡೆ (ಐಸಿಜಿ) ಸಿಬ್ಬಂದಿ ಗುಜರಾತ್​ನ ಗಡಿ ಔಟ್​ಪೋಸ್ಟ್ ಬಿಬಿಕೆ ಬಳಿಯ ಕೋರಿ ಖಾರಿಯಲ್ಲಿ ಶನಿವಾರ ಜಂಟಿ ಕಾರ್ಯಾಚರಣೆ ನಡೆಸಿ ಪಾಕಿಸ್ತಾನದ 15 ಮೀನುಗಾರರನ್ನು ಬಂಧಿಸಿದ್ದಾರೆ. ಹಾಗೂ ಯಂತ್ರ ಅಳವಡಿಸಿದ ನಾಡ ದೋಣಿಯೊಂದನ್ನು ವಶಪಡಿಸಿ ಕೊಂಡಿದ್ದಾರೆ.

ಬಿಎಸ್​ಎಫ್ 68ನೇ ಬೆಟಾಲಿಯನ್​ನಿಂದ ಸಿಕ್ಕ ಖಚಿತ ಬೇಹುಗಾರಿಕೆ ಮಾಹಿತಿ ಮೇರೆಗೆ ಕೋರಿ ಕೊಲ್ಲಿಯ ಪ್ರದೇಶದಲ್ಲಿ ಶೋಧ ಕಾರ್ಯಾಚರಣೆ ಆರಂಭಿಸಲಾಗಿತ್ತು. ಗುಜರಾತ್​ನ ಕಛ್ ವಲಯದ ಭಾರತ-ಪಾಕಿಸ್ತಾನ ಜಲ ಸೀಮೆಯ ಬಳಿ ಈ ಪ್ರದೇಶವಿದೆ. ಬಿಎಸ್​ಎಫ್ ಮತ್ತು ಐಸಿಜಿ ಜಂಟಿ ತಂಡ ಲಕ್ಕಿ ನಾಲಾ ಜೆಟ್ಟಿಯಿಂದ ಎಫ್​ಎಸಿ ಪ್ರಹಾರ್ ನೌಕೆಯಲ್ಲಿ ತೆರಳಿದ್ದರು. ಇತರ ಮೂರು ನೌಕೆಗಳೂ ಅವರಿಗೆ ಬೆಂಬಲವಾಗಿದ್ದವು.