ನ್ಯೂಸ್

ಹೊಂದಾಣಿಕೆ ಆಗುತ್ತಿಲ್ಲ 15 ಲಕ್ಷ ವಿದ್ಯಾರ್ಥಿಗಳ ಆಧಾರ್ ಕಾರ್ಡ್!

ಬೆಂಗಳೂರು: ರಾಜ್ಯದಲ್ಲಿನ ಸುಮಾರು 15 ಲಕ್ಷ ವಿದ್ಯಾರ್ಥಿಗಳ ಆಧಾರ್ ಕಾರ್ಡ್ ಮಾಹಿತಿ ಹೊಂದಾಣಿಕೆ ಆಗದಿರುವ ವಿಷಯ ಬೆಳಕಿಗೆ ಬಂದಿದೆ. ಮಕ್ಕಳನ್ನು ಶಾಲೆಗೆ ಸೇರಿಸುವ ವೇಳೆ ನೀಡಲಾದ ಹೆಸರಿನ ಜತೆ ಆಧಾರ್ ಕಾರ್ಡ್​ನಲ್ಲಿ ನಮೂದಿಸಲಾಗಿರುವ ಹೆಸರು ತಾಳೆ ಆಗದಿರುವ ಸಂಗತಿ ಬಹಿರಂಗಗೊಂಡಿದೆ.

ಕೇಂದ್ರ ಸರ್ಕಾರ ಹೊರಡಿಸಿದ್ದ ಸುತ್ತೋಲೆ ಮೇರೆಗೆ ರಾಜ್ಯ ಶಿಕ್ಷಣ ಇಲಾಖೆಯಿಂದ ನಡೆದ ದಾಖಲೆ ಪರಿಶೀಲನೆ ವೇಳೆ ಈ ವ್ಯತ್ಯಾಸ ಕಂಡುಬಂದಿದೆ. ಹಿಂದುಳಿದ ವರ್ಗಗಳ ಕಲ್ಯಾಣ, ಅಲ್ಪಸಂಖ್ಯಾತರ ಅಭಿವೃದ್ಧಿ ಹಾಗೂ ಕಾರ್ಮಿಕ ಕಲ್ಯಾಣ ಇಲಾಖೆಗಳ ವ್ಯಾಪ್ತಿಯ ವಿವಿಧ ವಿದ್ಯಾರ್ಥಿ ವೇತನ ಮತ್ತು ಪ್ರವೇಶ ಪರೀಕ್ಷೆ ಸಲುವಾಗಿ ವಿದ್ಯಾರ್ಥಿಗಳು ಆಧಾರ್ ಕಾರ್ಡ್ ನೀಡಬೇಕಾಗಿದ್ದು, ಅವುಗಳ ಪರಿಶೀಲನೆ ವೇಳೆ ಹೆಸರು ಹೊಂದಾಣಿಕೆ ಆಗದಿರುವುದು ತಿಳಿದು ಬಂದಿದೆ.

ಸುಮಾರು 1 ಕೋಟಿ ವಿದ್ಯಾರ್ಥಿಗಳ ಪೈಕಿ 78 ಲಕ್ಷ ವಿದ್ಯಾರ್ಥಿಗಳ ಆಧಾರ್ ಮಾಹಿತಿ ಪರಿಶೀಲನೆ ನಡೆಸಲಾಗಿದ್ದು, ಆ ಪೈಕಿ ಸುಮಾರು 15 ಲಕ್ಷ ವಿದ್ಯಾರ್ಥಿಗಳ ಹೆಸರು ಹೊಂದಾಣಿಕೆ ಆಗದಿರುವುದು ಗಮನಕ್ಕೆ ಬಂದಿದೆ. ವಿಜಯಪುರ, ಬಾಗಲಕೋಟೆ, ಧಾರವಾಡ ಜಿಲ್ಲೆಗಳಲ್ಲಿ ಈ ಸಮಸ್ಯೆ ಹೆಚ್ಚಾಗಿ ಕಂಡು ಬಂದಿದೆ.

ಬಹಳಷ್ಟು ವಿದ್ಯಾರ್ಥಿಗಳ ಹೆಸರು ಮೂರು ಪದಗಳನ್ನು ಒಳಗೊಂಡಿದೆ. ನಾವು ಶಾಲಾ ದಾಖಲಾತಿಯಲ್ಲಿನ ಹೆಸರನ್ನು ಬದಲಿಸಲು ಸಾಧ್ಯವಿಲ್ಲ. ಹೀಗಾಗಿ ಆಧಾರ್​ ಕಾರ್ಡ್​ನಲ್ಲಿ ಹೆಸರು ತಿದ್ದುಪಡಿ ಮಾಡಿಸಿಕೊಂಡು ಹೊಸ ಕಾರ್ಡ್​ನ ಪ್ರತಿ ಶಾಲೆಗೆ ಸಲ್ಲಿಸುವಂತೆ ಸಂಬಂಧಿತ ಪಾಲಕರಿಗೆ ತಿಳಿಸಿರುವುದಾಗಿ ಅಧಿಕಾರಿಗಳು ಹೇಳಿದ್ದಾರೆ. ಸುಮಾರು 14 ಲಕ್ಷ ಮಕ್ಕಳ ಆಧಾರ್ ಮಾಹಿತಿ ಪಾಲಕರು ಇನ್ನೂ ಸಲ್ಲಿಕೆ ಮಾಡಿಲ್ಲ ಎಂಬುದು ಕೂಡ ಗಮನಕ್ಕೆ ಬಂದಿದೆ.